Advertisement

ಧಾರವಾಡ ಐಐಟಿ, ಐಐಐಟಿ ಕಾಮಗಾರಿ ಚುರುಕು

12:59 AM Feb 13, 2019 | |

ಧಾರವಾಡ: ವಿದ್ಯಾಕಾಶಿಗೆ ಮುಕುಟ ಪ್ರಾಯವಾಗಿರುವ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಕಾಂಪೌಂಡ್‌ ನಿರ್ಮಾಣ ಕಾರ್ಯ ಮುಗಿಯುವ ಹಂತಕ್ಕೆ ತಲುಪಿದ್ದು, ಇನ್ನೇನು ಪ್ರಧಾನ ಕಟ್ಟಡಗಳ ನಿರ್ಮಾಣ ಆರಂಭಗೊಳ್ಳಲು ಸಜ್ಜಾಗಿದೆ.

Advertisement

ಆದರೆ ತಡಿಸಿನಕೊಪ್ಪದ ಬಳಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ) ಕಟ್ಟಡ ಕಾಮಗಾರಿ ಜೋರಾಗಿ ನಡೆಯುತ್ತಿದ್ದು, ಒಂದು ವರ್ಷದಲ್ಲಿ ಪ್ರತಿಷ್ಠಿತ ಐಐಐಟಿ ಸಂಸ್ಥೆ ಇಲ್ಲಿಗೆ ವರ್ಗಾವಣೆಗೊಳ್ಳುವ ಸಾಧ್ಯತೆಯಿದೆ. ಐಐಟಿ ಕಾಮಗಾರಿ ಕೊಂಚ ನಿಧಾನವಾಗಿ ಸಾಗಿದ್ದರೆ, ಐಐಐಟಿ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದೆ.

2016ರ ಜೂನ್‌ನಲ್ಲಿ ಆರಂಭಗೊಂಡ ಧಾರವಾಡ ಐಐಟಿ ಇದೀಗ ತನ್ನ ಸ್ವಂತ ಕ್ಯಾಂಪಸ್‌ನಲ್ಲಿ 1,411
ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಪ್ರಧಾನಿ ಮೋದಿ 2016ರ ಬಜೆಟ್‌ನಲ್ಲಿಯೇ ಹಣದ ನೆರವು ಘೋಷಣೆ ಮಾಡಿದ್ದರು. ಇದೀಗ ಫೆ.9ರಂದು ಹುಬ್ಬಳ್ಳಿಯಲ್ಲಿ ಧಾರವಾಡ ಐಐಟಿ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿರುವ ಪ್ರಧಾನಿ ಮೋದಿ ಅಗತ್ಯ ಅನುದಾನ ಶೀಘ್ರವೇ ಬಿಡುಗಡೆ ಮಾಡುವುದಾಗಿ ಸ್ಥಳೀಯ ಮುಖಂಡರಿಗೆ ಹೇಳಿದ್ದು, ಇನ್ನೇನು ಐಐಟಿ ಧಾರವಾಡದಲ್ಲಿನ ಪ್ರಧಾನ ಕಟ್ಟಡಗಳು ತಲೆ ಎತ್ತಲಿವೆ.

ಐಐಟಿ ಕಟ್ಟಡಕ್ಕೆ ಭೂಮಿ ಪರೀಕ್ಷೆಗೆ 2018, ಮೇ 22ರಂದು ಧಾರವಾಡ ಮತ್ತು ಬೆಂಗಳೂರು ಮೂಲದ ಎರಡು ಕಂಪನಿಗಳಿಗೆ ಟೆಂಡರ್‌ ನೀಡಲಾಗಿತ್ತು. ಈ ಎರಡೂ ಕಂಪನಿಗಳು ಭೂಮಿ ಪರೀಕ್ಷೆ ಮಾಡಿದ್ದು ಎಲ್ಲೆಲ್ಲಿ, ಯಾವ ಕಟ್ಟಡಗಳನ್ನು ಕಟ್ಟುವುದು ಸೂಕ್ತ ಎಂಬ ವರದಿ ನೀಡಿವೆ. ಈ ವರದಿಯ ಅನ್ವಯ ಮುಂಬೈ ಮತ್ತು ಪೂನಾ ಐಐಟಿಗಳಲ್ಲಿನ ನುರಿತ ಸಿಬ್ಬಂದಿ ಧಾರವಾಡ ಐಐಟಿ ಕ್ಯಾಂಪಸ್‌ನ್ನು ಹೇಗೆ ನಿರ್ಮಿಸಬೇಕು ಎನ್ನುವ ಕುರಿತು ವಿಸ್ತ್ರತವಾಗಿ ಚರ್ಚಿಸಿ ವರದಿ ಸಿದ್ಧ ಪಡಿಸಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಅದರನ್ವಯ ಧಾರವಾಡ ಐಐಟಿ ಹಸಿರು ಐಐಟಿಯಾಗಲಿದ್ದು, ಇಲ್ಲಿನ ಯಾವುದೇ ಒಂದು ಗಿಡಗಳನ್ನು ಕಡಿಯದಂತೆ ಕಟ್ಟಡಗಳು ತಲೆ ಎತ್ತಲಿವೆ. ಅಷ್ಟೇ ಅಲ್ಲ, ಇದೀಗ 7.5 ಕಿ.ಮೀ. ಉದ್ದದ ಕಾಂಪೌಂಡ್‌ನ್ನು ನಿರ್ಮಿಸುವಾಗಲೂ ಮರಗಳಿಗೆ ಕೊಡಲಿ ಏಟು ಬೀಳದಂತೆ ನೋಡಿಕೊಳ್ಳಲಾಗಿದೆ. ಸದ್ಯಕ್ಕೆ ಭೂ ವ್ಯಾಜ್ಯದಿಂದಾಗಿ ಮತ್ತು ಹೆಚ್ಚುವರಿ ಭೂ ಪರಿಹಾರ ಕೇಳಿದ ರೈತರ ಹೊಲವೊಂದರಲ್ಲಿ ಮಾತ್ರ 560 ಮೀಟರ್‌ ಕಾಂಪೌಂಡ್‌ ನಿರ್ಮಾಣ ಬಾಕಿಯಿದೆ.ಇದಕ್ಕೂ ತಾಂತ್ರಿಕ ಅಡಚಣೆಗಳನ್ನು ದೂರ ಮಾಡಿ 3 ತಿಂಗಳಲ್ಲಿ ಕಾಂಪೌಂಡ್‌ ಪೂರ್ಣಗೊಳಿಸುವುದಾಗಿ ಹೇಳುತ್ತಾರೆ ಐಐಟಿ ಹಿರಿಯ ಅಧಿಕಾರಿಗಳು. ಕೇಂದ್ರ ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್‌ ಕರೆದು ಅದರಲ್ಲಿ ಆಯ್ಕೆಯಾಗುವ ಕಂಪನಿಗಳು ಧಾರವಾಡ ಐಐಟಿ ಕ್ಯಾಂಪಸ್‌ ನಿರ್ಮಿಸಲಿವೆ. ಜಿಲ್ಲಾಡಳಿತ ಈ ವಿಚಾರದಲ್ಲಿ ಈಗಾಗಲೇ ತನ್ನ ಪಾಲಿನ ಜವಾಬ್ದಾರಿ ನಿರ್ವಹಿಸಿ ಕೇಂದ್ರಕ್ಕೆ ಒಪ್ಪಿಸಿದ್ದು, ಇನ್ನೇನಿದ್ದರೂ ಕೇಂದ್ರ ಸರ್ಕಾರವೇ ಐಐಟಿ ಸ್ವಾಯತ್ತ ಸಂಸ್ಥೆ ಜವಾಬ್ದಾರಿಯನ್ನು ಹೊರಲಿದೆ.

Advertisement

ಐಐಟಿ ಕಟ್ಟಡದ ಕಾಮಗಾರಿಗಳು ಶೀಘ್ರವೇ ಆರಂಭಗೊಂಡರೂ ಇಲ್ಲಿ ದೈತ್ಯ ಕ್ಯಾಂಪಸ್‌ ನಿರ್ಮಾಣಕ್ಕೆ ಕನಿಷ್ಠ 4 ವರ್ಷ ಬೇಕು ಎನ್ನುತ್ತಿದ್ದಾರೆ ಎಂಜಿನಿಯರ್‌ಗಳು. ಧಾರವಾಡ ಐಐಟಿಯನ್ನು ದೇಶದ ಇತರ ಐಐಟಿಗಳಿಗಿಂತ ವಿಭಿನ್ನವಾಗಿ ಕಟ್ಟಬೇಕು ಎನ್ನುವ ಹಿನ್ನೆಲೆಯಲ್ಲಿ ಪ್ರತಿಯೊಂದನ್ನೂ ಅಳೆದು ತೂಗಿ ನೋಡಿಯೇ ಕಟ್ಟಡ ನಿರ್ಮಿಸಲಾಗುತ್ತಿದೆ. ಒಟ್ಟಾರೆ ತಾತ್ಕಾಲಿಕ ಕಟ್ಟಡ ವಾಲಿ¾ಯಲ್ಲಿ ನಡೆಯುತ್ತಿರುವ ಐಐಟಿಗೆ ಸ್ವಂತ ಸೂರು ನಿರ್ಮಾಣಕ್ಕೆ ಇನ್ನು ನಾಲ್ಕು ವರ್ಷಗಳು ಬೇಕು. ಅಲ್ಲಿವರೆಗೂ ವಾಲಿ¾ಯೇ ಐಐಟಿಯಾಗಿ ಮುಂದುವರಿಯಲಿದೆ.

3 ಹಂತದಲ್ಲಿ ಐಐಐಟಿ ಕಟ್ಟಡ ನಿರ್ಮಾಣ
ತಡಸಿನಕೊಪ್ಪ ಗ್ರಾಮದ ಬಳಿ 60 ಎಕರೆ ಭೂಮಿಯಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ
(ಐಐಐಟಿ) ಕಟ್ಟಡ ಕಾಮಗಾರಿಗೆ ಚಾಲನೆ ದೊರೆತಿದ್ದು, ಮಹಾರಾಷ್ಟ್ರ ಮೂಲದ ಮತ್ತು ಈಗಾಗಲೇ
ಬೆಳಗಾವಿ ಸುವರ್ಣ ವಿಧಾನಸೌಧ ನಿರ್ಮಿಸಿರುವ ಶಿರ್ಕೆ ಕಂಪನಿ ಟೆಂಡರ್‌ ಪಡೆದುಕೊಂಡಿದೆ. ಈಗಾಗಲೇ ಐಐಐಟಿ ಕಾಂಪೌಂಡ್‌ ನಿರ್ಮಾಣ ಮುಗಿದಿದ್ದು, ಪ್ರಧಾನ ಕಟ್ಟಡಗಳ ಕಾಮಗಾರಿ ಕೂಡ ಆರಂಭಗೊಂಡಿದೆ. ಹಾಸ್ಟೆಲ್‌ಗ‌ಳು, ಆರೋಗ್ಯ ಧಾಮ, ಕ್ಯಾಂಟೀನ್‌ ಹಾಗೂ ಸುಂದರವಾದ ಉದ್ಯಾನವನ ನಿರ್ಮಾಣಗೊಳ್ಳಲಿದೆ.

ಇದರಲ್ಲಿ ರಾಜ್ಯ ಸರ್ಕಾರದ ಐಟಿ ಬಿಟಿ ಇಲಾಖೆ ಶೇ.20ರಷ್ಟು ಹಣ ನೀಡಿದರೆ ಇನ್ನುಳಿದ ಶೇ.80 ಹಣವನ್ನು ಕೇಂದ್ರ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಕಂಪನಿಗಳು ನೀಡಲಿವೆ. ಮೂರು ಹಂತದಲ್ಲಿ ಐಐಐಟಿ ಕಟ್ಟಡ ನಿರ್ಮಾಣ ಆಗಲಿದೆ. ಉತ್ತರ ಕರ್ನಾಟಕದತ್ತ ಐಟಿ ಕಂಪನಿಗಳು ಮತ್ತು ಐಟಿ ಉದ್ಯಮ ಇನ್ನಷ್ಟು ಬಲ ಪಡೆದುಕೊಳ್ಳುವ ನಿಟ್ಟಿನಲ್ಲಿ ಐಐಐಟಿ ನೆರವಾಗಲಿದೆ.

ಧಾರವಾಡ ಐಐಟಿಗೆ ನೀಡಬೇಕಾಗಿದ್ದ ಭೂಮಿ, ಅಗತ್ಯ ಸಹಕಾರ ಮತ್ತು ಎಲ್ಲ ಅವಶ್ಯಕತೆಗಳನ್ನು ನೀಡಲಾಗಿದೆ. ಇನ್ನು ಕೇವಲ ಶೇ.15ರಷ್ಟು ಕಾಂಪೌಂಡ್‌ ಮಾತ್ರ ಬಾಕಿ ಇದೆ. ಅದನ್ನು ಮುಗಿಸಿ ನಾವು ಐಐಟಿಗೆ ಹಸ್ತಾಂತರಿಸಿದರೆ ರಾಜ್ಯ ಸರ್ಕಾರದ ಜವಾಬ್ದಾರಿ ಮುಗಿದಂತೆ.
● ದೀಪಾ ಚೋಳನ್‌, ಡಿಸಿ, ಧಾರವಾಡ

ಐಐಟಿ ಧಾರವಾಡ ಕ್ಯಾಂಪಸ್‌ ವಿಭಿನ್ನವಾಗಿ ಮತ್ತು ಪರಿಸರ ಸ್ನೇಹಿಯಾಗಿ ನಿರ್ಮಿಸಲು ಯೋಜಿಸಿದ್ದೇವೆ. ಯೋಜನೆ ರೂಪುರೇಷೆಗಳು ಸಿದಟಛಿಗೊಂಡಿವೆ. ಆದರೆ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಸರ್ಕಾರದ ಅಧಿಕೃತ ಅಧಿಕಾರಿಗಳೇ ನೀಡುತ್ತಾರೆ.
● ಹೆಸರು ಹೇಳಲಿಚ್ಛಿಸದ ಐಐಟಿ ಅಧಿಕಾರಿ

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next