Advertisement

Dharwad:ತೊಟ್ಟಿಲನಾಡಿನಲ್ಲಿ ದಸರೆ ಮೆರಗು; ಭಜನೆ ಭಕ್ತಿ ಭಾವ

05:23 PM Oct 17, 2023 | Team Udayavani |

ಮಿಶ್ರಿಕೋಟಿ: “ತೊಟ್ಟಿಲನಾಡು’ ಎಂದು ಪ್ರಸಿದ್ಧಿ ಪಡೆದಿರುವ ಕಲಘಟಗಿಯು ದಸರಾ ಹಬ್ಬಕ್ಕೆ ಸಜ್ಜುಗೊಂಡಿದೆ. ಪಟ್ಟಣದ ಪ್ರಮುಖ ದೇವಸ್ಥಾನಗಳಲ್ಲಿ ಘಟಸ್ಥಾಪನೆ, ಪುರಾಣ ಪ್ರವಚನ ಮತ್ತು ವಿಶೇಷ ಪೂಜೆಗಳ ಸೇವೆಯಿಂದ ದೇವಿಯನ್ನು ಒಲಿಸಿಕೊಳ್ಳುವ ಕೈಂಕರ್ಯಕ್ಕೆ ಭಕ್ತರು ಸಜ್ಜಾಗಿದ್ದಾರೆ.

Advertisement

ಪಟ್ಟಣದ ಅಧಿದೇವತೆಯರಾದ ದ್ಯಾಮವ್ವದೇವಿ ಮತ್ತು ದುರ್ಗಮ್ಮದೇವಿಯರ ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಮತ್ತು ಅದರ “ಹೊರಬಿಡಿಕೆ’ಯಂತಹ ವಿಶೇಷ ವಿಧಿ-ವಿಧಾನಗಳು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದೆ. ಹಾಗೆಯೇ ಅಷ್ಟೇ ವಿಶೇಷವಾಗಿ ಗ್ರಾಮದೇವಿಯರ ದಸರಾ ಹಬ್ಬ ಕೂಡ ವಿಜೃಂಭಣೆಯಿಂದ ಜರುತ್ತದೆ. ಗ್ರಾಮದೇವಿ ದೇವಸ್ಥಾನದಲ್ಲಿ ಅನಾದಿಕಾಲದಿಂದಲೂ ನಡೆಸಿಕೊಂಡ ಬಂದ ಪರಂಪರೆಗಳನ್ನು ಈಗಲೂ ಪಾಲಿಸುತ್ತಿದ್ದಾರೆ.

ಭಜನೆಗಳ ನಾಡು: ಒಂದು ಕಾಲದಲ್ಲಿ ಹಿರಿಯ ಸಂಗೀತಕಾರರು, ನಾಟಕಕಾರರು, ದೊಡ್ಡಾಟಗಳ ಕಲಾವಿದರಿದ್ದ ಕಲಘಟಗಿಯಲ್ಲಿ ದೇವಿಯರ ಸಮ್ಮುಖದಲ್ಲಿ ಭಜನಾ ಸೇವೆ ನಿರಂತರವಾಗಿ ಶತಮಾನಗಳಿಂದ ನಡೆಯುತ್ತ ಬಂದಿದೆ. ದೇವಿಗೆ ಉತ್ತರ ಕರ್ನಾಟಕದ ಶೈಲಿಯಲ್ಲಿ ವಿವಿಧ ಭಕ್ತಿರಸದ ಭಜನೆಗಳನ್ನು ಭಜನಾ ತಂಡದವರು ಸಮರ್ಪಿಸುತ್ತಾರೆ. ಭಕ್ತಿಗೀತೆಗಳು, ತತ್ವಪದಗಳು, ವಚನಗಳು, ಶರೀಫರ ಪದಗಳು, ತ್ರಿಪದಿಗಳನ್ನು ವಿಧವಿಧವಾಗಿ ಸೇವೆಗೆ ಸಮರ್ಪಿಸುತ್ತಾರೆ. ಕೆಲವು ತಂಡದವರು ಸಂತ ಜ್ಞಾನದೇವ, ತುಕಾರಾಮ, ನಾಮದೇವರ ಅಭಂಗಗಳನ್ನು ಕೂಡ ಹಾಡುತ್ತಾರೆ.

ಗ್ರಾಮದೇವಿ ಗುಡಿ ಓಣಿ, ಕುಂಬಾರ ಓಣಿ, ಪಾಂಡುರಂಗ ಗುಡಿ ಓಣಿ, ಕಲಾಲ ಓಣಿ, ಅಂಬೇಡ್ಕರ್‌ ಓಣಿ ಸೇರಿದಂತೆ ಪಟ್ಟಣದ ವಿವಿಧ ಓಣಿಗಳ ಹಲವಾರು ಭಜನಾ ತಂಡಗಳು ತಮ್ಮ ತಮ್ಮ ಸದಸ್ಯರ ಜೊತೆಗೆ ಬೆಳಗ್ಗೆ 5 ಗಂಟೆಗೆ ಭಜನಾ ಪದಗಳನ್ನು ಹಾಡುತ್ತ ತಮ್ಮ ಓಣಿಯ ದೇವಸ್ಥಾನದಿಂದ ಗ್ರಾಮದೇವಿಯ ದೇವಸ್ಥಾನಕ್ಕೆ ಬಂದು ನಂತರ ತಮ್ಮ ತಮ್ಮ ಜಾಗಕ್ಕೆ ಮರಳುತ್ತಾರೆ.

ಪಟ್ಟಣದ ಪ್ರಮುಖ ದೇವಸ್ಥಾನಗಳಾದ ದೊಡ್ಡ ಹನುಮಂತ ದೇವಸ್ಥಾನ, ಮಹಾಲಕ್ಷ್ಮೀ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಬಸವಣ್ಣ ದೇವರ ದೇವಸ್ಥಾನ, ಪಾಂಡುರಂಗ ದೇವಸ್ಥಾನ ಸೇರಿದಂತೆ ಎಲ್ಲ ದೇಗುಲಗಳಲ್ಲಿ ದಸರಾ ಹಬ್ಬದ ಆಚರಣೆ ವಿಶಿಷ್ಟವಾಗಿರುತ್ತದೆ.

Advertisement

ಅನಾದಿಕಾಲದಿಂದ ಭಜನಾ ಪರಂಪರೆಯು ಕಲಘಟಗಿಯಲ್ಲಿದ್ದು, ದೊಡ್ಡ ದೊಡ್ಡ ಕಲಾವಿದರು ಭಜನೆಯ ಮೂಲಕ ದೇವಿಯ ಸೇವೆಗೈದಿದ್ದಾರೆ. ವಿಜಯದಶಮಿಯ ದಿನದಂದು ದೇವಿಯ ಪಲ್ಲಕ್ಕಿಯ ಜೊತೆ ಭಜನಾ ತಂಡಗಳೂ ನಗರ ಪ್ರದಕ್ಷಿಣೆ ಹಾಕುತ್ತವೆ.
ಅಶೋಕಕುಮಾರ ಅರ್ಕಸಾಲಿ,
ಹಿರಿಯ ನಾಟಕ-ಸಂಗೀತ ಕಲಾವಿದರು

*ಗಿರೀಶ ಮುಕ್ಕಲ

Advertisement

Udayavani is now on Telegram. Click here to join our channel and stay updated with the latest news.

Next