Advertisement

Dharwad ಜಿಲ್ಲೆಯ ಪರಿಸ್ಥಿತಿ ಮನದಟ್ಟು ಮಾಡಿದ ಜಿಲ್ಲಾಡಳಿತ: ಬರ ಪರಿಹಾರಕ್ಕೆ ರೈತರ ಮನವಿ

09:26 PM Oct 07, 2023 | Team Udayavani |

ಧಾರವಾಡ : ಬಿರು ಬಿಸಿಲಿಗೆ ಒಣಗಿನಿಂತ ಉಳ್ಳಾಗಡ್ಡಿ ಬೆಳೆ…ಖಾರದ ಗಾಟೆ ಇಲ್ಲದ ಮೆಣಸಿನಕಾಯಿ ಹೊಲ, ಕಿತ್ತು ನೋಡಿದರು ಬುಡ್ಡಿಗಾಯಿ ಇರದ ಶೇಂಗಾ ಬೆಳೆ…ಹೊಲದಲ್ಲಿ ಅಳಿದುಳಿದ ಬೆಳೆಹಾನಿ ಅಧಿಕಾರಿಗಳಿಗೆ ತೋರಿಸಿ ಪರಿಹಾರಕ್ಕೆ ಮನವಿ ಮಾಡಿಕೊಂಡ ಅನ್ನದಾತರು….!

Advertisement

ಹೌದು… ಜಿಲ್ಲೆಯ ಬರ ಮತ್ತು ಬೆಳೆಹಾನಿ ಸಮೀಕ್ಷೆ ಗೆ ಬಂದ ಕೇಂದ್ರ ತಂಡಕ್ಕೆ ಜಿಲ್ಲೆಯ ರೈತರ ಹೊಲಗಳಲ್ಲಿ ಕಂಡು ಬಂದ ದೃಶ್ಯಗಳಿವು. ಕೇಂದ್ರ ಸರ್ಕಾರವು ಜಿಲ್ಲೆಯ ಬರ ಅಧ್ಯಯನಕ್ಕಾಗಿ ನೇಮಿಸಿರುವ ಅಧಿಕಾರಿಗಳ ತಂಡವು ಶನಿವಾರ ಸಂಜೆ ಜಿಲ್ಲೆಯ ವಿವಿಧ ರೈತರ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲನೆ ಕೈಗೊಂಡಿತು.

ಆರಂಭದಲ್ಲಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ರೈತ ವೀರಣ್ಣ ಕುರುಬರ (ಸ.ನಂ.181/2) ಅವರ ಜಮೀನಿನಲ್ಲಿದ್ದ 2ಎಕರೆ ಈರುಳ್ಳಿ ಬೆಳೆ ಹಾನಿ ಮತ್ತು ರೈತ ಮಹಿಳೆ ಬಸವ್ವ ಉಡ್ಮಿಷಿ (ಸ.ನಂ.181/1) ಅವರ ಜಮೀನಿನಲ್ಲಿದ್ದ 3 ಎಕರೆ ಹತ್ತಿ ಬೆಳೆ ಹಾನಿ ಪರಿಶೀಲಿಸಿದ ಕೇಂದ್ರ ತಂಡದ ಸದಸ್ಯರು, ನಂತರ ಅಮ್ಮಿನಭಾವಿ ಗ್ರಾಮದ ರೈತ ಅನ್ವರ ಶೇಖ (ಸ.ನಂ.132) ಅವರ ಜಮೀನಿನಲ್ಲಿದ್ದ 2 ಎಕರೆ ಈರುಳ್ಳಿ ಬೆಳೆ ಹಾನಿ ಮತ್ತುಸುಮಾರು 20 ಗುಂಟೆ ಮೆಣಸಿನಕಾಯಿ ಬೆಳೆ ಹಾನಿ ಪರಿಶೀಲಿಸಿದರು. ಆ ಬಳಿಕ ಅಮ್ಮಿನಭಾವಿ ಗ್ರಾಮದ ಮೊರಬ ರಸ್ತೆಯ ರೈತ ಶಿವಪುತ್ರಪ್ಪ ಹೆಬ್ಬಳ್ಳಿ (ಸ.ನಂ.659) ಅವರ ಜಮೀನಿನಲ್ಲಿದ್ದ 3ಎಕರೆ ಶೇಂಗಾ ಮತ್ತು 2ಎಕರೆ ಹತ್ತಿ ಬೆಳೆ ಹಾನಿ ಪರಿಶೀಲಿಸಿದರು.

ಬರಗಾಲ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸಲು, ಅಮ್ಮಿನಬಾವಿ ಗ್ರಾಮದ ಗೈರಾಣ ಭೂಮಿ ಅಂದಾಜು 27.5 ಎಕರೆ ಜಮೀನಿನಲ್ಲಿ ಸಸಿ ನೆಡುವ ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದಲ್ಲದೇ ಸ್ಥಳದಲ್ಲಿ ಉದ್ಯೋಗ ನಿರತ ಸುಮಾರು 70ಕ್ಕೂ ಹೆಚ್ಚು ಜನ ಕೆಲಸ ಮಾಡುವುದನ್ನು ನೋಡಿ, ಅವರೊಂದಿಗೆ ಬರಪರಿಸ್ಥಿತಿ ಹಾಗೂ ಉದ್ಯೋಗ ಲಭ್ಯತೆಯ ಬಗ್ಗೆ ಮಾಹಿತಿ ಪಡೆದುಕೊಂಡಿತು. ನಂತರ ಧಾರವಾಡ ಗ್ರಾಮದ ರೈತ ಪ್ರಕಾಶ ದಂಡಿನ (ಸರ್ವೆ ನಂ.154) ಅವರ ಜಮೀನಿಗೆ ಭೇಟಿ ನೀಡಿ, 3 ಎಕರೆ ಸೋಯಾಬೀನ ಬೆಳೆ ಹಾನಿ ಪರಿಶೀಲನೆ ಕೈಗೊಂಡಿತು.

ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ನಿಗದಿತ ಸಮಯಕ್ಕೆ ಬಾರದೇ ಇದ್ದರಿಂದ ಸಾಮಾನ್ಯವಾಗಿ ಜಿಲ್ಲೆಯ ರೈತರು ಜೂನ್ ತಿಂಗಳಲ್ಲಿ ಮಾಡಬೇಕಿದ್ದ ಬಿತ್ತನೆಯನ್ನು ಮುಂದೂಡಿದರು. ಜೂನ್ ಅಂತ್ಯದೊಳಗೆ ಸಾಮಾನ್ಯ ಮಳೆಗಿಂತ ಶೇ.65 ರಷ್ಟು ಮಳೆ ಕೊರತೆಯಾಗಿದ್ದರಿಂದ ಜಿಲ್ಲೆಯಲ್ಲಿ ಬಿತ್ತನೆಗೆ ಗುರಿ ಹೊಂದಲಾಗಿದ್ದ ಕೃಷಿಭೂಮಿ ಪೈಕಿ ಕೇವಲ ಶೇ.16 ರಷ್ಟು ಮಾತ್ರ ಬಿತ್ತನೆ ಮಾಡಲಾಗಿತ್ತು. ಜುಲೈ ತಿಂಗಳಲ್ಲಿ ಅಧಿಕ ಮಳೆಯಾದರೂ ಹಂಗಾಮು ತಡವಾಗಿದ್ದರಿಂದ ಶೇ.68 ರಷ್ಟು ಮಾತ್ರ ಭೂಮಿ ಬಿತ್ತನೆ ಮಾಡಲಾಯಿತು. ಆದರೆ ಆಗಸ್ಟ್ ತಿಂಗಳಲ್ಲಿ ಮತ್ತೇ ಶೇ.65 ರಷ್ಟು ಮಳೆ ಕೊರತೆ ಹಾಗೂ ಸೆಪ್ಟೆಂಬರ್‌ತಿಂಗಳಲ್ಲಿ ಅತೀ ಕಡಿಮೆ ಮಳೆಯಾಗಿದ್ದರಿಂದ ಬಿತ್ತನೆಯಾಗಿರುವ ಬೆಳೆಯ ಶೇ.91ರಷ್ಟು ಬೆಳೆಹಾನಿಯಾಗಿದೆ.

Advertisement

ಜಿಲ್ಲೆಯಲ್ಲಿ ಅಲ್ಲಲ್ಲಿ ಬಿತ್ತನೆ ಕಂಡರೂ ಸರಿಯಾಗೆ ಬೆಳೆಗಳ ಬೆಳವಣಿಗೆ ಆಗಿಲ್ಲ, ಬೆಳೆ ಕಣ್ಣಿಗೆ ಹಸಿರಾಗಿ ಕಂಡರೂ ಅದರಲ್ಲಿ ಕಾಳುಗಳು ಉತ್ಪತ್ತಿಯಾಗಿಲ್ಲ. ಇನ್ನು ಹಲವಾರು ರೈತರು ಬಿತ್ತನೆಯೇ ಮಾಡಿಲ್ಲ. ಮಳೆಕೊರತೆಯ ಬರದೊಂದಿಗೆ ಹಸಿರು ಬರದ ಛಾಯೆ ಹೆಚ್ಚಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ಸ್ವರೂಪ ಟಿ.ಕೆ., ಜಿ.ಪಂ. ಉಪಕಾರ್ಯದರ್ಶಿ ಬಿ.ಎಸ್.ಮೂಗನೂರಮಠ, ಕೃಷಿ ಇಲಾಖೆಯ ಅಪರ ನಿರ್ದೇಶಕ ವಿ.ಜೆ. ಪಾಟೀಲ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣ್ ಕುಮಾರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ರವಿ ಸಾಲಿಗೌಡ್ರ ಸೇರಿದಂತೆ ಅಧಿಕಾರಿಗಳು ಇದ್ದರು.

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್‌ಸಾಹು, ಎಣ್ಣೆ ಬೀಜಗಳ ಅಭಿವೃದ್ದಿ ಇಲಾಖೆಯ ನಿರ್ದೇಶಕರಾದ ಡಾ.ಜೆ ಪೆನ್ನುಸ್ವಾಮಿ, ವೆಚ್ಚ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೇಲಿಯ, ನೀತಿ ಆಯೋಗದ ಸಂಶೋಧನಾಧಿಕಾರಿ ಶಿವಚರಣ್ ಮೀನಾ, ರಾಜ್ಯ ಕೃಷಿ ಆಯುಕ್ತ ವೈ.ಎಸ್. ಪಾಟೀಲ್ ಅವರನ್ನು ಒಳಗೊಂಡ ಕೇಂದ್ರ ಅಧ್ಯಯನ ತಂಡಕ್ಕೆ ಡಿಸಿ ಗುರುದತ್ತ ಹೆಗಡೆ ನೇತೃತ್ವದ ಅಧಿಕಾರಿಗಳ ತಂಡವು ಜಿಲ್ಲೆಯ ಮಳೆ ಕೊರತೆ, ಬಿತ್ತನೆಯಾಗದ ಪ್ರದೇಶ, ಬೆಳೆನಾಶ ಹಾಗೂ ಹಸಿರು ಬರದ ಕುರಿತು ಕೇಂದ್ರ ತಂಡದ ಅಽಕಾರಿಗಳಿಗೆ ಮನವರಿಕೆ ಮಾಡಿತು.

ಬೆಳೆ ಕಿತ್ತು ತಂದು ಬರ ತೋರಿದ ಕಲಘಟಗಿ ರೈತರು
ಬರ ಪಟ್ಟಿಯಿಂದ ವಂಚಿತ ಕಲಘಟಗಿ ತಾಲೂಕಿನಲ್ಲೂ ಸಕಾಲಕ್ಕೆ ಮಳೆ ಬಾರದೆ, ಹಾನಿಗೆ ಒಳಗಾದ ಕಬ್ಬು, ಗೋವಿನಜೋಳ ಹಾಗೂ ಭತ್ತದ ಬೆಳೆ ಬರ ಅಧ್ಯಯನ ತಂಡದ ಮುಂದೆ ಪ್ರದರ್ಶಿಸಿದ ರೈತರು, ನಮ್ಮ ತಾಲೂಕಿನಲ್ಲೂ ಬೆಳೆ ಹಾನಿಯಾಗಿದ್ದನ್ನು ದಯಮಾಡಿ ಸೇರಿಸಿಕೊಳ್ಳಿರಿ ಎಂದು ಮನವಿ ಮಾಡಿದರು. ಬರ ಪಟ್ಟಿಗೆ ಸೇರಿಸದೇ ಇರುವುದಕ್ಕೆ ಬೇಸರಗೊಂಡು ಕೇಂದ್ರ ತಂಡದ ಎದುರು ರೈತರ ಅಳಲು ತೋಡಿಕೊಂಡರು. ಈ ವೇಳೆ
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಉಳವಪ್ಪ ಬಳಗೇರ ಹಾಗೂ ರೈತ ನಾಗೇಶ ಇಟಗಿ ಆವರು, ಅನಾವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಸಾಲ ಮನ್ನಾ ಜತೆ ಪರಿಹಾರ ನೀಡಿ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತದ ವರದಿಯಲ್ಲೇನಿದೆ?
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಮ ಕೊರತೆಯಿಂದಾಗಿ ರಾಜ್ಯ ಸರ್ಕಾರವು ಜಿಲ್ಲೆಯ ಐದು ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ಕುಂದಗೋಳ, ನವಲಗುಂದ ತಾಲೂಕುಗಳು ಬರಪೀಡಿತವಾಗಿದ್ದು, ವಿವಿಧ ರೀತಿಯ ಬೆಳೆಹಾನಿ ಸಂಭವಿಸಿದೆ. ಈ ಐದು ತಾಲೂಕುಗಳಲ್ಲಿ ಭತ್ತ ಸೇರಿ ಇತರೆ ಕೃಷಿ ಬೆಳಗಳ ಬಿತ್ತನೆಯಾಗಿದ್ದ 1,59,599 ಹೆಕ್ಟೇರ್ ಕೃಷಿ ಭೂಮಿ ಪೈಕಿ 1,44,483 ಹೆಕ್ಟೇರ್(ಶೇ.91) ಬೆಳೆ ನಾಶವಾಗಿರುವ ಬಗ್ಗೆ ಕೇಂದ್ರ ತಂಡಕ್ಕೆ ಜಿಲ್ಲಾಡಳಿತವು ವರದಿ ಸಲ್ಲಿಸಿದೆ. ಇದಲ್ಲದೇ ಬರಪೀಡಿತ ತಾಲೂಕುಗಳ ಪೈಕಿ ತೋಟಗಾರಿಕಾ ಬೆಳೆಗಳ ಬಿತ್ತನೆಯಾಗಿದ್ದ19,893 ಹೆಕ್ಟೇರ್‌ಪ್ರದೇಶ ಪೈಕಿ 15,487 ಹೆಕ್ಟೇರ್‌ಪ್ರದೇಶದ (ಶೇ.78) ಬೆಳೆಹಾನಿಯಾಗಿದೆ. ಉಳಿದಂತೆ ಅಣ್ಣಿಗೇರಿ, ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳ ಬೆಳೆಹಾನಿ ಕುರಿತು ವರದಿಯನ್ನು ಸಲ್ಲಿಸಲಾಗಿದೆ. ಇದರ ಜತೆಗೆ ಜಿಲ್ಲೆಯ ಅಳ್ನಾವರ, ಕಲಘಟಗಿ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲೂ ಬೆಳೆ ಹಾನಿಯಾಗಿ ಬರ ಛಾಯೆ ಮೂಡಿದ್ದು, ಈ ಕುರಿತು ವರದಿಯನ್ನು ಕೇಂದ್ರ ತಂಡಕ್ಕೆ ಜಿಲ್ಲಾಡಳಿತವು ಒಪ್ಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next