Advertisement

ಧಾರವಾಡ: ಚಿಗರಿ ಬಸ್‌ನಲ್ಲಿ ಮಕ್ಕಳ ಶೈಕ್ಷಣಿಕ ಪ್ರವಾಸ

05:06 PM Jul 06, 2023 | Team Udayavani |

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿನಗರದ ಮಧ್ಯೆ ಸಾರಿಗೆ ಸಂಪರ್ಕ ಕೊಂಡಿ ಆಗಿರುವ ಬಿಆರ್‌ಟಿಎಸ್‌ ಯೋಜನೆಯ ಚಿಗರಿ ಬಸ್‌ಗಳಲ್ಲಿ ಉಚಿತವಾಗಿ ಸರಕಾರಿ ಶಾಲೆಯ ಮಕ್ಕಳ ಸಂಚಾರ. ಇದೇನಿದು? ಹೊಸ ಗ್ಯಾರಂಟಿ ಭರವಸೆ ಅನ್ನಬೇಡಿ. ಆದರೆ ಇದು ಸತ್ಯ. ಇದು ಕೇವಲ ಒಂದು ದಿನದ ಉಚಿತ ಪ್ರಯಾಣ ಆಗಲಿದ್ದು, ಈ ಪ್ರಯಾಣವು ಶೈಕ್ಷಣಿಕ ಪ್ರವಾಸವನ್ನಾಗಿ
ರೂಪಿಸಲಾಗಿದೆ.

Advertisement

ಹೌದು. ಇಂತಹ ಅಪರೂಪದ ಯೋಜನೆ ಅನುಷ್ಠಾನಕ್ಕೆ ಬಿಆರ್‌ಟಿಎಸ್‌ ಹಾಗೂ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯದಿಂದ ಒಡಂಬಡಿಕೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಡಿಡಿಪಿಐ ಕಚೇರಿಯಿಂದ ಜು.4ರಂದು ಬಿಇಒ ಹಾಗೂ ಶಾಲಾ ಮುಖ್ಯೋಪಾಧ್ಯಾಯರಿಗೆ ಸುತ್ತೋಲೆ ಹೊರಡಿಸಲಾಗಿದೆ.

ಚಿಗರಿ ಮಿತ್ರ ಅಭಿಯಾನದಡಿ 6 ಮತ್ತು 7ನೇ ತರಗತಿ ಮಕ್ಕಳಿಗೆ ಸಾರ್ವಜನಿಕ ಸಾರಿಗೆ ಉಪಯೋಗ, ಬಳಕೆ ಮತ್ತು ಬಿಆರ್‌ಟಿಎಸ್‌
ಯೋಜನೆ ಬಸ್‌ ಕಾರ್ಯಾಚರಣೆ ಕುರಿತು ಮಾಹಿತಿ, ಶಿಕ್ಷಣ, ಸಂವಹನ ಒದಗಿಸಲು ಬಿಆರ್‌ ಟಿಎಸ್‌ ಸನ್ನದ್ಧಗೊಂಡಿದೆ.

ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಮಾಹಿತಿ ಒದಗಿಸಲು ಅನುಮತಿ ಕೂಡ ನೀಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ಶಾಲಾ ಮುಖ್ಯ ಗುರುಗಳಿಗೆ ಮಾಹಿತಿ ನೀಡಿ, ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಮಾಡಲು ಅನುಮತಿ ನೀಡಲಾಗಿದೆ. ಹೀಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ವಲಯದಲ್ಲಿ ಬರುವ ಎಲ್ಲಾ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಿ ಕಾರ್ಯ ಯಶಸ್ವಿಗೊಳಿಸಲು ಸೂಚಿಸಲಾಗಿದೆ.ಇದಲ್ಲದೇ ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳನ್ನು ಅಣಿಗೊಳಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

6-7ನೇ ವರ್ಗದ ವಿದ್ಯಾರ್ಥಿಗಳ ಪ್ರವಾಸ: ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಇರುವ 6 ಮತ್ತು 7ನೇ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಇದಾಗಿದೆ.ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಇರುವ 6ನೇ ವರ್ಗದ 33,396, 7ನೇ ವರ್ಗದ 33,885 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 67,281 ವಿದ್ಯಾರ್ಥಿಗಳು ಈ ಶೈಕ್ಷಣಿಕ ಪ್ರವಾಸದ ಲಾಭ ಪಡೆಯಲಿದ್ದಾರೆ.

Advertisement

ಈ ಎಲ್ಲ ವಿದ್ಯಾರ್ಥಿಗಳಿಗೆ ಚಿಗರಿ ಬಸ್‌ನಲ್ಲಿ ಸಂಚರಿಸುವ ಗುರಿ ಹೊಂದಲಾಗಿದ್ದು, ಮೊದಲ ಹಂತದಲ್ಲಿ ಹು-ಧಾ ಅವಳಿನಗರದ ವ್ಯಾಪ್ತಿಯಲ್ಲಿ ಇರುವ ಸರಕಾರಿ ಶಾಲೆ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಬಳಿಕ ಗ್ರಾಮೀಣ ಭಾಗದ ಮಕ್ಕಳಿಗೂ ಈ ಪ್ರವಾಸ ಭಾಗ್ಯ ಲಭ್ಯವಾಗಲಿದೆ. ಈ ವರ್ಷ 6-7 ವರ್ಗದ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ಪ್ರವಾಸ ಮುಕ್ತಾಯ ಬಳಿಕ ಮುಂದಿನ ಹಂತದಲ್ಲಿ ಬೇರೆ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸುವ ಯೋಜನೆ ಹೊಂದಲಾಗಿದೆ. ಇದಲ್ಲದೇ ಈ ಪ್ರವಾಸ ವೇಳಾಪಟ್ಟಿಯಲ್ಲಿ ಬಿಆರ್‌ಟಿಎಸ್‌ ಕಚೇರಿಗೆ ಭೇಟಿ ನೀಡಲಿರುವ ವಿದ್ಯಾರ್ಥಿಗಳ ಜವಾಬ್ದಾರಿ ಬಿಆರ್‌ ಟಿಎಸ್‌ ಹೊತ್ತಿಕೊಂಡಿದ್ದು, ವಿದ್ಯಾರ್ಥಿಗಳಿಗೆ
ಅಲೊ³àಹಾರ ವ್ಯವಸ್ಥೆ ಮಾಡಿಕೊಳ್ಳಲು ಒಪ್ಪಿದೆ. ಈ ಪ್ರವಾಸದ ಮಧ್ಯೆ ಚಿಗರಿ ಬಸ್‌ನ ಸಂಚಾರದ  ಮಾಹಿತಿ ಒದಗಿಸುವ ಜತೆಗೆ ಈ ಕುರಿತಂತೆ ಪ್ರಶ್ನೋತ್ತರ ಸ್ಪರ್ಧೆ ಇರಲಿದೆ. ಇನ್ನು 2-3 ವಾರಗಳಲ್ಲಿ ಈ ಪ್ರವಾಸಕ್ಕೆ ಚಾಲನೆ ಸಿಗುವ ನಿರೀಕ್ಷೆ ಇದೆ.

ಮಕ್ಕಳ ಚಿಗರಿ ಪ್ರವಾಸದ ವೇಳಾಪಟ್ಟಿ

ಬೆಳಿಗ್ಗೆ 10:15 ರಿಂದ 11:00 ಗಂಟೆವರೆಗೆ ಶಾಲೆಯಿಂದ ಬಿಆರ್‌ಟಿಎಸ್‌ ಕಚೇರಿಗೆ ಆಗಮನ, 11:00 ರಿಂದ 11:30 ಗಂಟೆವರೆಗೆ ಬಿಆರ್‌ಟಿಎಸ್‌ ಕುರಿತು ಮಾಹಿತಿ ಮತ್ತು ಪರಿಚಯದ ಬಳಿಕ 10 ನಿಮಿಷ ವಿರಾಮ.

12:00 ರಿಂದ 12:15 ಗಂಟೆವರೆಗೆ ಪ್ರಾದೇಶಿಕ ಬಸ್‌ ನಿಲ್ದಾಣದಿಂದ ನವನಗರ ಬಸ್‌ ನಿಲ್ದಾಣ ಮಾಹಿತಿ, 12:30 ರಿಂದ 1:00 ಗಂಟೆವರೆಗೆ ನವನಗರ ಬಸ್‌ ನಿಲ್ದಾಣದಿಂದ ಬಿಆರ್‌ಟಿಎಸ್‌ ಕಚೇರಿಗೆ ಆಗಮನ.

ಅಲ್ಲಿ 1:00 ರಿಂದ 1:30 ಗಂಟೆವರೆಗೆ ಅಲೊ³àಪಹಾರ. ಮಧ್ಯಾಹ್ನ 1:30 ರಿಂದ 2:00 ಗಂಟೆವರೆಗೆ ಬಿಆರ್‌ ಟಿಎಸ್‌ ಕುರಿತು ಪ್ರಶ್ನೋತ್ತರ ಸ್ಪರ್ಧೆ ಇರಲಿದ್ದು, ಆ ಬಳಿಕ ಮಧ್ಯಾಹ್ನ 2:30 ರಿಂದ 3 ಗಂಟೆವರೆಗೆ ಬಿಆರ್‌ ಟಿಎಸ್‌ ಕಚೇರಿಯಿಂದ ಶಾಲೆಯತ್ತ ಮರಳಿ ಪ್ರಯಾಣ.

ಮಕ್ಕಳಿಗೆ ಸಾರ್ವಜನಿಕ ಸಾರಿಗೆಯ ಉಪಯೋಗ, ಬಳಕೆಯ ಜತೆಗೆ ಬಿಆರ್‌ಟಿಎಸ್‌ ಯೋಜನೆ ಬಸ್‌ ಕಾರ್ಯಾಚರಣೆ ಕುರಿತ ಮಾಹಿತಿ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲ ಬಿಇಒ, ಶಾಲಾ ಮುಖ್ಯ ಗುರುಗಳಿಗೆ ಮಾಹಿತಿ ನೀಡಿದ್ದು, ಆದಷ್ಟು ಬೇಗ ಈ ಶೈಕ್ಷಣಿಕ ಪ್ರವಾಸ ಆರಂಭಗೊಳ್ಳಲಿದೆ.
ಎಸ್‌.ಎಂ.ಹುಡೇದಮನಿ, ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ,
ಶಾಲಾ ಶಿಕ್ಷಣ ಇಲಾಖೆ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next