Advertisement

Dharwad ಬಸವಣ್ಣನವರ ತತ್ವವೇ ‘ಬೆಲ್ಲದಚ್ಚು’ಮೆಚ್ಚು : ಸಿಎಂ ಸಿದ್ದು

08:35 PM Dec 16, 2023 | Team Udayavani |

ಧಾರವಾಡ : ಬಸವಣ್ಣನವರ ಮನುಷ್ಯ ಪ್ರೀತಿ, ಜಾತಿ ತಾರತಮ್ಯ ವಿರೋಧಿ ವಿಚಾರಗಳಲ್ಲಿ ಬೆಲ್ಲದ್ ಅವರಿಗೆ ಅಪಾರ ನಂಬಿಕೆಯಿದ್ದು, ಅದರಿಂದಾಗಿಯೇ ಅವರು ಎಲ್ಲರಿಗೂ ಅಚ್ಚುಮೆಚ್ಚು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಇಲ್ಲಿನ ಖಾಸಗಿ ರೇಸಾರ್ಟ್‌ನಲ್ಲಿ ಶನಿವಾರ ಸಂಜೆ ನಡೆದ ಮಾಜಿ ಶಾಸಕ ಚಂದ್ರಕಾಂತ ಗುರಪ್ಪ ಬೆಲ್ಲದ ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬೆಲ್ಲದ ಅವರ ಅಭಿನಂದನಾ ಗ್ರಂಥ ಬೆಲ್ಲದಚ್ಚು ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವ್ಯಕ್ತಿ ಯಾವುದೇ ಧರ್ಮ,ಜಾತಿ, ಪ್ರದೇಶ, ಭಾಷೆ ಅಥವಾ ಸಂಸ್ಕೃತಿಗೆ ಸೇರಿರಲಿ. ಆತನಲ್ಲಿ ಮನುಷ್ಯರನ್ನು ಜಾತಿ ಧರ್ಮಗಳಾಚೆಗೆ ಪರಸ್ಪರ ಪ್ರೀತಿಸುವ, ಗೌರವಿಸುವ ಸಂಸ್ಕೃತಿ ಇರಬೇಕು. ಇಂತಹ ಸುಸಂಸ್ಕೃತಿಯನ್ನೇ ಚಂದ್ರಕಾಂತ ಬೆಲ್ಲದ್ ಅವರು ತಮ್ಮ ಬದುಕಿನಲ್ಲಿ ಆಚರಿಸಿಕೊಂಡು ಬಂದಿದ್ದು, ಹೀಗಾಗಿಯೇ ಬೆಲ್ಲದ್ ಮತ್ತು ನನ್ನ ಮಧ್ಯೆ ಉತ್ತಮ ಬಾಂಧ್ಯವ್ಯವಿದೆ ಎಂದು ಹೇಳಿದರು.

ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವಂತಹ ಮಾತುಗಳನ್ನು ಯಾವತ್ತೂ ಆಡದ ಚಂದ್ರಕಾಂತ ಬೆಲ್ಲದ್, ಅತ್ಯುನ್ನತ ಮನುಷ್ಯ ಗೌರವವನ್ನು ಹೊಂದಿದ್ದು, ಇವರದ್ದು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತಹ ಅಪರೂಪದ ವ್ಯಕ್ತಿತ್ವ .ಎಲ್ಲರಿಗೂ ಬೇಕಾಗಿಕೊಂಡು ಬದುಕಿದ ಅವರ ಸಾಧನೆ ನಿಜಕ್ಕೂ ಮೆಚ್ಚುವಂತದ್ದು ಎಂದರು.

ಚಂದ್ರಣ್ಣನ ಸಾಧನೆ ಮಾದರಿ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಜಾತ್ರೆಗಳಲ್ಲಿ ಬಲೂನು ಮಾರಾಟ ಮಾಡಿ, ಕಡು ಬಡತನವನ್ನು ಎದುರಿಸಿ, ಸ್ವಾಭಿಮಾನದ ಬದುಕು ಕಟ್ಟಿಕೊಂಡ ಚಂದ್ರಕಾಂತ ಬೆಲ್ಲದ ಅವರದ್ದು ಸಾರ್ಥಕ ಜೀವನ. ಸರ್ಕಾರದಿಂದ ಉದ್ಯೋಗ ಮಾಡುವವರಿಗೆ ಯಾವುದೇ ಸಹಾಯವಿಲ್ಲದ ಸಂದರ್ಭದಲ್ಲಿ ಸ್ವಂತ ಪ್ರಯತ್ನದಿಂದ ಉದ್ಯಮಗಳನ್ನು ಕಟ್ಟಿ ಬೆಳೆಸಿದ್ದು ಅವರ ಸಾಧನೆ. ಇಂದಿನ ಯುವ ಜನರಿಗೆ ಚಂದ್ರಕಾಂತ ಬೆಲ್ಲದ ಅವರು ಖಂಡಿತವಾಗಿಯೂ ಮಾದರಿಯಾಗಿದ್ದಾರೆ ಎಂದರು.

Advertisement

ಡಂಬಳದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಭಾಲ್ಕಿಯ ಹಿರೇಮಠ ಸಂಸ್ಥಾನದ ಶ್ರೀ ಮ.ಘ.ಚ.ಡಾ.ಬಸವಲಿಂಗ ಪಟ್ಟದೇವರು, ಧಾರವಾಡ ಮುರುಘಾಮಠದ ಮ.ನಿ.ಪ್ರ.ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗೋ.ರು.ಚನ್ನಬಸಪ್ಪ ಅವರು ವಹಿಸಿದ್ದರು.

ಹೊಳೆದಾಟಿದವರು ಬಿಡುಗಡೆ : ಇನ್ನು ಕಾರ್ಯಕ್ರಮದಲ್ಲಿ ಅಲ್ಲಮ ಲೋಕ ಕೃತಿಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿದರು. ಇನ್ನು ಚಂದ್ರಕಾಂತ ಬೆಲ್ಲದ ಅವರ ಆತ್ಮಚರಿತ್ರೆ ದೊಡ್ಡ ಹೊಳೆ ದಾಟಿದವರು ಕೃತಿಯನ್ನು ಸಚಿವ ಸಂತೋಷ ಲಾಡ್ ಬಿಡುಗಡೆಗೊಳಿಸಿದರು.

ಬೆಲ್ಲದ ಅಭಿನಂದನಾ ಸಮಿತಿ ಅಧ್ಯಕ್ಷ ಸಂಶೋಧಕ ಡಾ.ವೀರಣ್ಣ ರಾಜೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಚಂದ್ರಕಾಂತ ಬೆಲ್ಲದ ಪತ್ನಿ ಲೀಲಾವತಿ ಬೆಲ್ಲದ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ್ ಅಬ್ಬಯ್ಯ, ಶ್ರೀನಿವಾಸ ಮಾನೆ , ಮಹೇಶ್ ಟೆಂಗಿನಕಾಯಿ, ಎಸ್.ವಿ.ಸಂಕನೂರ.ಸಾಹಿತಿಗಳಾದ ನಾ.ಮೊಗಸಾಲೆ, ಡಾ.ಶಂಭು ಬಳಿಗಾರ, ಸಾಹಿತಿ ರಂಜಾನ್ ದರ್ಗಾ, ಪ್ರೊ.ಶಶಿಧರ ತೋಡಕರ, ದಿವಾಕರ ಹೆಗಡೆ ಮತ್ತು ಚಿತ್ರಕಲಾವಿದ ಚಂದ್ರು ಗಂಗೊಳ್ಳಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು. ಬಸವಪ್ರಭು ಹೊಸಕೇರಿ ಸ್ವಾಗತಿಸಿದರು.ಅಭಿನಂದನಾ ಸಮಾರಂಭದಲ್ಲಿ ಬೆಲ್ಲದ ಕುಟುಂಬ ಪರಿಹಾರಮತ್ತು ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬೆಲ್ಲದ್125 ವರ್ಷ ಬದುಕಲಿ : ಜೋಶಿಗೆ ಸಿದ್ದು ಚಟಾಕಿ
ಅಭಿನಂದಾನ ಪರ ನುಡಿಗಳನ್ನು ಆಡುವಾಗ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಚಂದ್ರಕಾಂತ ಬೆಲ್ಲದವರಿಗೆ ಈಗ 86 ವರ್ಷ. ಅವರು ಇನ್ನು ಕನಿಷ್ಠ 14 ವರ್ಷ ಬದುಕಿ ಶತಕ ಬಾರಿಸಲಿ ಎಂದು ಹೇಳಿದರು. ತಮ್ಮ ಭಾಷಣದಲ್ಲಿ ಇದಕ್ಕೆ ಮಹಾತ್ಮಾ ಗಾಂಽಜಿ ಅವರ ಪತ್ರದ ಕಥೆ ಹೇಳಿ, ಬೆಲ್ಲದ್ ನೂರು ವರ್ಷ ಅಲ್ಲ 125 ವರ್ಷ ಬದುಕಬೇಕು. ಇದನ್ನು ನಾನು ಹೇಳಿಲ್ಲ, ಜೋಶಿ ಅವರೇ ಗಾಂಧಿಜಿಯನ್ನು ಯಾರೋ ಕೇಳಿದ್ದಾಗ ಹೇಳಿದ್ದರಂತೆ ಎಂದರು. ನೆರೆದ ಸಭಿಕರೆಲ್ಲ ನಗೆ ಗಡಲಲ್ಲಿ ತೇಲಿದರು.

ಬಸವಣ್ಣನವರ ಮನುಷ್ಯ ಪ್ರೀತಿ, ಜಾತಿ ತಾರತಮ್ಯ ವಿರೋಧಿ ವಿಚಾರಗಳಲ್ಲಿ ಬೆಲ್ಲದ್ ಅವರಿಗೆ ಅಪಾರ ನಂಬಿಕೆ ಇದೆ. ನಾನು ಚಂದ್ರಕಾಂತ ಬೆಲ್ಲದ್ ಗೋಕಾಕ್ ಚಳವಳಿಯ ಒಡನಾಡಿಗಳು. ಅವರು ಎಲ್ಲಾ ವರ್ಗದ ಜನರಿಂದ ಅಪಾರ ಪ್ರೀತಿ ಗಳಿಸಿದವರು. ಪ್ರಾಮಾಣಿಕಯೇ ಅವರನ್ನು ಎತ್ತರಕ್ಕೆ ಬೆಳೆಸಿದ್ದು, ಸಾರ್ಥಕ ಜೀವನ ಮೆಚ್ಚುವಂತದ್ದು.
-ಸಿದ್ದರಾಮಯ್ಯ, ಮುಖ್ಯಮಂತ್ರಿಗಳು

Advertisement

Udayavani is now on Telegram. Click here to join our channel and stay updated with the latest news.

Next