Advertisement

ಕುಂದುತ್ತಿದೆ ಧಾರವಾಡ ಕೃಷಿ ವಿವಿ ವರ್ಚಸ್ಸು

05:52 PM Jan 29, 2022 | Team Udayavani |

ಹುಬ್ಬಳ್ಳಿ: ಗೋಧಿ, ಜೋಳ, ಹತ್ತಿ ತಳಿಗಳ ಅಭಿವೃದ್ಧಿ, ಬೀಜೋತ್ಪಾದನೆ, ಬೆಳೆ ಪ್ರಯೋಗ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ವರ್ಚಸ್ಸು ಹೊಂದಿದ್ದ, ಒಂದು ಕಾಲಕ್ಕೆ ಇಡೀ ಉತ್ತರ ಕರ್ನಾಟಕಕ್ಕೆ ಏಕೈಕ ಕೃಷಿ ವಿಶ್ವವಿದ್ಯಾಲಯ ಎಂಬ ಖ್ಯಾತಿ ಪಡೆದಿದ್ದ ಧಾರವಾಡ ಕೃಷಿ ವಿಶ್ವವಿದ್ಯಾಲಯ ತನ್ನ ಸಾಧನೆ ಮೂಲಕ ರಾಷ್ಟ್ರಮಟ್ಟದಲ್ಲಿ 3-4ನೇ ರ್‍ಯಾಂಕಿಂಗ್‌ ನಲ್ಲಿ ಇತ್ತಲ್ಲದೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಆದರೆ ವಿವಿಯಲ್ಲಿನ ಇತ್ತೀಚೆಗಿನ ಬೆಳವಣಿಗೆ ಗಮನಿಸಿದರೆ ವಿವಿ ತನ್ನ ವರ್ಚಸ್ಸು ಕಳೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಮೂಡತೊಡಗಿದೆ.

Advertisement

ವಿವಿಧ ಸಂಶೋಧನೆ, ಪ್ರತಿಷ್ಠಿತ ವಿವಿ-ಸಂಸ್ಥೆಗಳೊಂದಿಗೆ ಒಡಂಬಡಿಕೆ, ಹಲವು ಮಾದರಿ ಕಾರ್ಯಕ್ರಮ, ಜಾಗತಿಕ ಮಟ್ಟದ ಸಮ್ಮೇಳನ ಮೂಲಕ ದೇಶ-ವಿದೇಶಗಳ ಗಮನ ಸೆಳೆದಿರುವ, ರಾಜ್ಯದಲ್ಲಿಯೇ ಬಹುದೊಡ್ಡ ಕೃಷಿ ಮೇಳ ಆಯೋಜನೆ ಖ್ಯಾತಿ ಹೊಂದಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸಂಶೋಧನೆ, ಅಭಿವೃದ್ಧಿ ವಿಚಾರಗಳ ಜಾಗದಲ್ಲಿ ವಿವಾದ, ಅನ್ಯಾಯ, ನಿಯಮಗಳ ಉಲ್ಲಂಘನೆಯ ಆಡಳಿತ ನಿರ್ವಹಣೆ, ಹೋರಾಟದ ಧ್ವನಿ ಕೇಳಿ
ಬರತೊಡಗಿದೆ. ಪರಿಣಾಮ ರಾಷ್ಟ್ರಮಟ್ಟದಲ್ಲಿಯೇ ಕೃವಿವಿ ರ್‍ಯಾಂಕಿಂಗ್‌ ತೀವ್ರ ಕುಸಿತ ಕಂಡಿದೆ.

ಸ್ಥಾನ ಕುಸಿತ: ಹೋರಾಟದ ಫಲವಾಗಿಯೇ 1986, ಅ.1ರಂದು ಅಸ್ತಿತ್ವಕ್ಕೆ ಬಂದಿರುವ ಧಾರವಾಡ ಕೃಷಿ ವಿವಿ 5 ಕಾಲೇಜು, 27 ಸಂಶೋಧನಾ ಕೇಂದ್ರ, 6 ವಿಸ್ತರಣಾ ಘಟಕ, 6 ಕೃಷಿ ವಿಜ್ಞಾನ ಕೇಂದ್ರಗಳನ್ನು ಹೊಂದಿದ್ದು, ಬೆಳಗಾವಿ ವಿಭಾಗ ಮಟ್ಟದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ.

ದೇಶದಲ್ಲಿ ಒಟ್ಟು 65 ಕೃಷಿ ವಿಶ್ವವಿದ್ಯಾಲಯಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಮೂರ್‍ನಾಲ್ಕು, ಐದನೇ ಸ್ಥಾನದಲ್ಲಿ ಇರುತ್ತಿತ್ತು. ವಿವಿಧ ಕಾರಣಗಳಿಂದ ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿತ್ತಾದರೂ 2019-20ರಲ್ಲಿ 9ನೇ ಸ್ಥಾನದಲ್ಲಿದ್ದ ಕೃವಿವಿ 2020-21ರಲ್ಲಿ 17ನೇ ಸ್ಥಾನಕ್ಕೆ ಕುಸಿದಿದೆ. ದೇಶದ ಪ್ರತಿಷ್ಠಿತ ಪ್ರಶಸ್ತಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರಶಸ್ತಿ ಸೇರಿದಂತೆ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ-ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದೆ. ಪ್ರತಿ ವರ್ಷವೂ ವಿವಿಧ ದೇಶಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅವಕಾಶ ಕಲ್ಪಿಸುತ್ತಿದ್ದ, ರೈತರ ಪಾಲಿಗೆ ಬೀಜಗಳ ಕಣಜವಾಗಿದ್ದ ಧಾರವಾಡ ಕೃಷಿ ವಿವಿ ಇದೀಗ ವಿವಾದಗಳ ಕೇಂದ್ರ ಬಿಂದುವಾಗಿದೆ. ಕುಲಪತಿ ಹಾಗೂ ಶಿಕ್ಷಕರ ಸಂಘದ ನಡುವಿನ ತಿಕ್ಕಾಟ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಕುಲಪತಿ ಅವರ ಏಕಪಕ್ಷೀಯ ಆಡಳಿತ ಹಾಗೂ ಗುಂಪುಗಾರಿಕೆ ಕುರಿತಾದ ಆರೋಪ ದೊಡ್ಡ ಮಟ್ಟದಲ್ಲಿ ಕೃವಿವಿ ವ್ಯಾಪ್ತಿಯಲ್ಲಿ ಸುಳಿದಾಡ ತೊಡಗಿದೆ.

ಮುಖ್ಯವಾಗಿ ಕೃಷಿ ವಿವಿಯಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕರ ಅನುಪಾತದಲ್ಲಿ ದೊಡ್ಡ ಕಂದಕ ಸೃಷ್ಟಿಯಾಗಿದ್ದು, ಶೇ.40 ಬೋಧಕ ಹುದ್ದೆಗಳು ಖಾಲಿ ಉಳಿದಿವೆ. ಕೃಷಿ ವಿವಿ ವ್ಯಾಪ್ತಿಯಲ್ಲಿ 8 ಡಿಪ್ಲೊಮಾ ಕಾಲೇಜುಗಳಿದ್ದು, ಒಂದೇ ಒಂದು ಬೋಧಕ ಹುದ್ದೆ ಮಂಜೂರಾತಿಯಾಗಿಲ್ಲ. ಹಿರಿಯ ಪ್ರಾಧ್ಯಾಪಕರು ತಮ್ಮ ಸಂಶೋಧನೆ ಜತೆಯಲ್ಲಿಯೇ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕಿದೆ. ಇದು ಗುಣಮಟ್ಟದ ಸಂಶೋಧನೆ ಮೇಲೆ ಪರಿಣಾಮ ಬೀರುತ್ತದೆ ಎಂಬ
ಅಳಲು ಹಲವು ಪ್ರಾಧ್ಯಾಪಕರದ್ದಾಗಿದೆ.

Advertisement

ಕೃವಿವಿಗೆ ಐಡಿಪಿ-ಎನ್‌ಎಎಚ್‌ಇಪಿ ಪ್ರೊಜೆಕ್ಟ್ ಅಡಿಯಲ್ಲಿ ಕೆಲ ಯೋಜನೆಗಳು ಬಂದಿದ್ದು, ಯೋಜನೆ ಅನುಷ್ಠಾನ ಸಮರ್ಪಕ ಆಗುತ್ತಿಲ್ಲ ಎಂಬ ಆರೋಪದ ಜತೆಗೆ ಕುಲಪತಿ ಹಾಗೂ ಕೃಷಿ ವಿವಿ ಆಡಳಿತ ಮಂಡಳಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಆಡಳಿತ ಮಂಡಳಿ ಹಲವು ಸದಸ್ಯರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯಪಾಲರಿಗೆ ಭ್ರಷ್ಟಾಚಾರ ಕುರಿತಾಗಿ ದೂರು ನೀಡಿದ್ದಾರೆಂದು ಹೇಳಲಾಗುತ್ತಿದೆ.

ಸಮರ್ಪಕ ಆಡಳಿತ ನಿರ್ವಹಣೆ ಕೊರತೆ ಹಾಗೂ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಕಾಳಜಿ ಇಲ್ಲವಾಗಿದೆ. ಐಸಿಎಆರ್‌ನಿಂದ ಕೃಷಿ ವಿವಿ ಬೋಧಕರು ಹೆಚ್ಚಿನ ಪ್ರೊಜೆಕ್ಟ್ಗಳನ್ನು ತರುವ ನಿಟ್ಟಿನಲ್ಲಿ ಪ್ರೋತ್ಸಾಹ, ಉತ್ತೇಜನ ಕ್ರಮಗಳು ದೊರೆಯುತ್ತಿಲ್ಲ ಎಂಬ ಕೂಗು ಕೇಳಿ ಬರುತ್ತಿದೆ. ಕೃಷಿ ವಿವಿಯಲ್ಲಿನ ಪ್ರಯೋಗಾಲಯಗಳು ಹೆಚ್ಚಿನ ಅಭಿವೃದ್ಧಿ ಕಂಡಿಲ್ಲವಾಗಿವೆ.

ಧಾರವಾಡ ಕೃವಿವಿ ಅಭಿವೃದ್ಧಿಪಡಿಸುವ ಜೋಳ, ಗೋಧಿ, ಕಡಲೆ, ಮೆಕ್ಕೆಜೋಳ, ಕುಸುಬೆ ಹೀಗೆ ವಿವಿಧ ರೀತಿಯ ಬಿತ್ತನೆ ಬೀಜಗಳಿಗೆ ರೈತರಿಂದ ದೊಡ್ಡಮಟ್ಟದ ಬೇಡಿಕೆ ಇದೆ. ಕೃವಿವಿಯಲ್ಲಿ ಪ್ರಮಾಣೀಕೃತ ಹಾಗೂ ಗುಣಮಟ್ಟದ ಬೀಜಗಳು ದೊರೆಯುತ್ತಿವೆ ಎಂಬ ನಂಬಿಕೆ ರೈತರದ್ದಾಗಿದೆ. ಪ್ರತಿ ವರ್ಷದ ಕೃಷಿ ಮೇಳ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣ ಬೀಜಗಳು ಖರೀದಿ ಆಗುತ್ತಿದ್ದವು. ಕೃಷಿ ವಿವಿ ಕೈಗೊಂಡ ಬೆಳೆಗಳ ಪ್ರಯೋಗದ ಕ್ಷೇತ್ರೋತ್ಸವ ವೀಕ್ಷಣೆ ಮಾಡುತ್ತಿದ್ದ ರೈತರು, ಕೃಷಿ ವಿವಿಯವರಿಂದ ಬೆಳೆ, ಇಳುವರಿ ಮಾಹಿತಿ ಪಡೆದು ತಮಗೆ ಬೇಕಾದ ಬೀಜ ಪಡೆದು ಹೋಗುತ್ತಿದ್ದರು. ಆದರೆ, ಇತ್ತೀಚೆಗೆ ಕೃಷಿ ವಿವಿ ಬೀಜೋತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿಲ್ಲ ಎಂದೇ ಹೇಳಲಾಗುತ್ತಿದೆ ಈ ಎಲ್ಲ ಕಾರಣಗಳು ಕೃಷಿ ವಿವಿಯ ರ್‍ಯಾಂಕಿಂಗ್‌ ಕುಸಿತಕ್ಕೆ ತಮ್ಮದೇ ಕೊಡುಗೆ ನೀಡಿವೆ ಎನ್ನಲಾಗುತ್ತಿದೆ.

ಸಿಎಂ-ಕೃಷಿ ಸಚಿವರು ಗಮನಹರಿಸಲಿ
ಒಂದು ಕಾಲಕ್ಕೆ ರಾಜ್ಯಕ್ಕೆ ಮಾದರಿಯಾದ, ದೇಶದಲ್ಲಿಯೇ ತನ್ನದೇ ಖ್ಯಾತಿ-ವರ್ಚಸ್ಸು ಹೊಂದಿದ್ದ ಧಾರವಾಡ ಕೃಷಿ ವಿವಿ ವರ್ಚಸ್ಸು ಕುಗುತ್ತಿದೆ. ವಿಶೇಷವಾಗಿ ಗೋಧಿ ಸಂಶೋಧನೆಯಲ್ಲಿ ದೇಶವ್ಯಾಪಿ ತನ್ನದೇ ಪ್ರಭಾವ ಹೊಂದಿದ್ದ ಕೃಷಿ ವಿವಿ ಇಂದು ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಈ ಬಗ್ಗೆ ಸಿಎಂ ಹಾಗೂ ಕೃಷಿ ಸಚಿವರು ಗಮನಹರಿಸಿ ಆಡಳಿತ ಸುಧಾರಣೆ, ಪಾರದರ್ಶಕತೆ, ಸಂಶೋಧನೆಗೆ ಹೆಚ್ಚು ಒತ್ತು ನೀಡದಿದ್ದರೆ ಕೃಷಿ ವಿವಿ ಇನ್ನಷ್ಟು ವರ್ಚಸ್ಸು ಕಳೆದುಕೊಳ್ಳಲಿದೆ. ಕೆಲವರ ಅನಿಸಿಕೆಯಂತೆ ಕೃಷಿ ವಿವಿ ಸಂಶೋಧನೆ-ಅಭಿವೃದ್ಧಿ ದೃಷ್ಟಿಯಿಂದ ಹಲವು ವರ್ಷ ಹಿಂದಕ್ಕೆ ಹೋಗಿದ್ದು, ಇದೇ ಸ್ಥಿತಿ ಮುಂದುವರಿದರೆ ಇನ್ನಷ್ಟು ಹಿಂದಕ್ಕೆ ಹೋಗಲಿದೆ. ರೈತರ ಧ್ವನಿಯಾಗಿರುವ, ತಳಿ ಸಂರಕ್ಷಣೆ-ಸಂವರ್ಧನೆ ಕಾಯಕದಲ್ಲಿ ತನ್ನದೇ ಹೆಜ್ಜೆ ಗುರುತು ಮೂಡಿಸಿರುವ ಕೃಷಿ ವಿವಿ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮ ತೋರಬೇಕಿದೆ.

*ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next