ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾ ಪೋಷಿತ ಯಕ್ಷಗಾನ ಮಂಡಳಿಯ ಸೇವಾ ಬಯಲಾಟದ ತಿರುಗಾಟ ಡಿ. 5ರಂದು ಬೆಳಗ್ಗೆ ಕ್ಷೇತ್ರದ ಶ್ರೀ ಛತ್ರ ಗಣಪತಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಪ್ರಾರಂಭಗೊಂಡಿತು.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಕ್ಷೇತ್ರದ ಸಕಲ ಗೌರವದೊಂದಿಗೆ ಶ್ರೀ ಮಹಾಗಣಪತಿಯನ್ನು ಮೆರವಣಿಗೆ ಯಲ್ಲಿ ಶ್ರೀ ಮಂಜುಕೃಪಾ ಮಣೆಗಾರರ ಮನೆಗೆ ಕರೆತಂದು ಅಲ್ಲಿ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ ನಡೆಯಿತು.
ಮಧ್ಯಾಹ್ನ ಮೇಳದ ಶ್ರೀ ಮಹಾ ಗಣಪತಿಯನ್ನು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನ ಸೇವಾ ಬಯಲಾಟದ ಶಿಬಿರಕ್ಕೆ ಬೀಳ್ಕೊಡಲಾಯಿತು. ಈ ಸಂದರ್ಭ ಹೇಮಾವತಿ ವೀ. ಹೆಗ್ಗಡೆ, ಮೇಳದ ಯಜಮಾನರಾದ ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಮಣೆಗಾರ್ ವಸಂತ ಮಂಜಿತ್ತಾಯ, ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆ, ಪುಷ್ಪರಾಜ ಶೆಟ್ಟಿ, ಪ್ರಮುಖರಾದ ಸೀತಾರಾಮ ತೋಳ್ಪಡಿತ್ತಾಯ, ಬಿ. ಭುಜಬಲಿ, ಎ.ವೀರು ಶೆಟ್ಟಿ, ಪಾರುಪತ್ಯೆಗಾರ್ ಲಕ್ಷ್ಮೀನಾರಾಯಣ ರಾವ್, ಯಕ್ಷಗಾನ ಮೇಳದ ಕಲಾವಿದರು ಉಪಸ್ಥಿತರಿದ್ದರು.
ಇದನ್ನೂ ಓದಿ:ದೇಶೀಯ ಡ್ರೋನ್ ತಂತ್ರಜ್ಞಾನ ಶೀಘ್ರ: ಗೃಹ ಸಚಿವ ಅಮಿತ್ ಶಾ ಘೋಷಣೆ
6 ವರ್ಷಗಳಿಂದ ಕಾಲಮಿತಿ (ಸಂಜೆ 7ರಿಂದ 12) ಯಕ್ಷಗಾನ ಪ್ರದರ್ಶನ ನೀಡಲಾಗುತ್ತಿದೆ. ಕಲಾವಿದರಿಗೆ ವಿಶ್ರಾಂತಿ, ಆರೋಗ್ಯ ರಕ್ಷಣೆ ಹಾಗೂ ವೃತ್ತಿ-ಪ್ರವೃತ್ತಿಯಲ್ಲಿ ಹೆಚ್ಚಿನ ಸಾಧನೆ ಮಾಡಲು ಕಾಲಮಿತಿ ಪ್ರದರ್ಶನದಿಂದ ಅನುಕೂಲಕರವಾಗಿದೆ ಎಂದು ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪತ್ತನಾಜೆ ವರೆಗೆ ಸಂಚಾರ
ಡಿ. 4ರ ವರೆಗೆ ಧರ್ಮಸ್ಥಳ ಕ್ಷೇತ್ರದಲ್ಲೇ ಸೇವಾ ಹರಕೆ ಬಯಲಾಟ ಪ್ರದರ್ಶನಗಳು ನಡೆದಿದ್ದವು. ಡಿ. 5ರಂದು ಮಂಗಳೂರಿನಲ್ಲಿ ಪ್ರದರ್ಶನದೊಂದಿಗೆ ತಿರುಗಾಟ ಆರಂಭಗೊಂಡಿದೆ. ಮುಂದಿನ ಪತ್ತನಾಜೆ ವರೆಗೆ ಮೇಳವು ಕರಾವಳಿ, ದಕ್ಷಿಣೋತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಲಮಿತಿಯಲ್ಲಿ ಪೌರಾಣಿಕ ಪ್ರಸಂಗದ ಮೂಲಕ ಪ್ರದರ್ಶಿಸಲಿದೆ.