Advertisement

ಧರ್ಮಸ್ಥಳ ಸಂಚಾರಿ ಆಸ್ಪತ್ರೆ ಶಿಬಿರ ಉದ್ಘಾಟನೆ

03:48 PM Nov 08, 2017 | Team Udayavani |

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮತ್ತು ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ಮೆಡಿಕಲ್‌ ಟ್ರಸ್ಟ್‌ನ ಸಹಯೋಗದೊಂದಿಗೆ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯದ ಸಹಕಾರದೊಂದಿಗೆ ಕೋಡಿಂಬಾಳದ ರಾಮ ನಗರ ಶ್ರೀರಾಮ ಭಜನ ಮಂದಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಚಾರಿ ಆಸ್ಪತ್ರೆಯ ಉಚಿತ ಚಿಕಿತ್ಸಾ ಶಿಬಿರವು ಮಂಗಳವಾರ ಉದ್ಘಾಟನೆಗೊಂಡಿತು.

Advertisement

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೋಡಿಂಬಾಳದ ಓಂತ್ರಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ
ಮುಖ್ಯಶಿಕ್ಷಕ ತುಕಾರಾಮ ಗೌಡ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳವು ಅನ್ನದಾನ, ವಿದ್ಯಾದಾನ, ಆರೋಗ್ಯದಾನ ಮುಂತಾದ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮಾಜದ ಉನ್ನತಿಗೆ ಪೂರಕವಾದ ಕಾರ್ಯವನ್ನು ಮಾಡುತ್ತಿದೆ. ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಜನಜಾಗೃತಿ ವೇದಿಕೆಯು ಸಮಾಜದಲ್ಲಿನ ದುಶ್ಚಟಗಳ ವಿರುದ್ಧ ಸಮರ ಸಾರುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಸದುಪಯೋಗ ಪಡೆಯಿರಿ
ಸಂಚಾರಿ ಆಸ್ಪತ್ರೆಯ ಮೂಲಕ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ದಾನ ಮಾಡುವ ಈ ಉಚಿತ ಚಿಕಿತ್ಸಾ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಬದಲಾವಣೆಯ ಕ್ರಾಂತಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಪಂಚಾಯತ್‌ ಸದಸ್ಯ ಫಝಲ್‌ ಕೋಡಿಂಬಾಳ ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆಯನ್ನು ತರಲಾಗಿದೆ. ಮಹಿಳೆಯರು ಸಾಮಾಜಿಕವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಮೈಗೂಡಿಸಿಕೊಳ್ಳಲು ಗ್ರಾಮಾಭಿವೃದ್ಧಿ ಯೋಜನೆಯು ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಯೋಜನೆಯ ಮೂಲಕ ಗ್ರಾಮಗಳಲ್ಲಿ ಆರ್ಥಿಕ ಶಿಸ್ತು, ಸಾಮರಸ್ಯ ಹಾಗೂ ಸೌಹಾರ್ದ ವಾತಾವರಣ ನಿರ್ಮಾಣವಾಗಿದ್ದು, ಸಮಾಜದಲ್ಲಿ ಬದಲಾವಣೆಯ ಕ್ರಾಂತಿ ಉಂಟಾಗಿದೆ ಎಂದರು.

ಓಂತ್ರಡ್ಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾಧವ ಭಟ್‌, ಕಡಬ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಬಾಬು ರೈ ಪಾಜೋವು, ಕುಟ್ರಾಪ್ಪಾಡಿ ಗ್ರಾಮ ಪಂಚಾಯತ್‌ ಸದಸ್ಯ ಶಿವಪ್ರಸಾದ್‌ ರೈ ಮೈಲೇರಿ ಅತಿಥಿಗಳಾಗಿ ಆಗಮಿಸಿದರು. ಕೋಡಿಂಬಾಳ ಎ ಒಕ್ಕೂಟದ ಅಧ್ಯಕ್ಷ ಆನಂದ ಹಾಗೂ ಸೇವಾಪ್ರತಿನಿಧಿ ನೇತ್ರಾ ಉಪಸ್ಥಿತರಿದ್ದರು. ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯ ಮೇಲ್ವಿಚಾರಕ ರಾಜು ಗೌಡ ಸ್ವಾಗತಿಸಿ, ಪ್ರಸ್ತಾವನೆಗೈದರು. ಸೇವಾ ಪ್ರತಿನಿಧಿ ನಳಿನಿ ನಿರೂಪಿಸಿ, ವಂದಿಸಿದರು.

Advertisement

ವಾರಕ್ಕೆರಡು ಸಲ ಶಿಬಿರ 
ಎಸ್‌ಡಿಎಂ ಮೆಡಿಕಲ್‌ ಟ್ರಸ್ಟ್‌ ವತಿಯಿಂದ ಕಳೆದ ಹಲವು ದಶಕಗಳಿಂದ ಗ್ರಾಮೀಣ ಭಾಗಗಳಲ್ಲಿ ಸಂಚಾರಿ ಆಸ್ಪತ್ರೆಯ ಶಿಬಿರಗಳನ್ನು ನಡೆಸುವ ಮೂಲಕ ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ. ಕೋಡಿಂಬಾಳದಲ್ಲಿಯೂ ವಾರಕ್ಕೆರಡು ಸಲದಂತೆ ಪ್ರತೀ 3 ದಿನಗಳಿಗೊಮ್ಮೆ 2 ತಿಂಗಳ ಶಿಬಿರವು ನಡೆಯಲಿದೆ. ಎಲ್ಲ ತರಹದ ಕಾಯಿಲೆ ಹಾಗೂ ವ್ಯಾದಿಗಳಿಗೆ ಸರಿಯಾದ ಪರೀಕ್ಷೆ ನಡೆಸಿ ಸೂಕ್ತ ಔಷಧ, ಸಲಹೆಗಳನ್ನು ಧರ್ಮಾರ್ಥವಾಗಿ ನೀಡಲಾಗುತ್ತದೆ ಎಂದು ಸಂಚಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ನಾರಾಯಣ ಪ್ರಭು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next