Advertisement

Dharmasthala: ಇಂದು ಡಾ.ಡಿ.ವೀರೇಂದ್ರ ಹೆಗ್ಗಡೆಯವರ 57ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

05:25 AM Oct 24, 2024 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಇಂದು (ಅ.24) 57ನೇ ವಸಂತದ ಪಟ್ಟಾಭಿಷೇಕ ವರ್ಧಂತ್ಯುತ್ಸವ ಹೊಸ್ತಿಲಲ್ಲಿದ್ದಾರೆ.

Advertisement

ಧರ್ಮಸ್ಥಳದ ನೆಲ್ಯಾಡಿ ಬೀಡಿನಲ್ಲಿ ಡಿ. ವೀರೇಂದ್ರ ಕುಮಾರ್‌ 1968ರ ಅ. 24ರಂದು 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತ ರಾಗಿದ್ದರು. ಶ್ರೀ ಕ್ಷೇತ್ರದಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಚತುರ್ವಿಧ ದಾನ ಪರಂಪರೆಗೆ ಕಾಲದ ಆದ್ಯತೆಗೆ ಅನುಗುಣವಾಗಿ ಕ್ಷೇತ್ರದ ಹಾಗೂ ಸಮಾಜದ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ಹೊಸ ರೂಪುರೇಷೆ ನೀಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪರಂಪರೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿ ಕ್ಷೇತ್ರವಾಗಿ ಜನಮನ್ನಣೆಗೆ ಪಾತ್ರವಾಗಿಸಿದವರು ಡಾ.ವೀರೇಂದ್ರ ಹೆಗ್ಗಡೆಯವರು.

57ನೇ ವರ್ಧಂತಿಯು ಸಂಭ್ರಮದ ವಾತಾವರಣ ಮೂಡಿಸಿದೆ. ಊರಿನ ನಾಗರಿಕರು ದೇಗುಲ ನೌಕರರು ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳ ನೌಕರರು, ಆಪ್ತರು, ಬಂಧುಗಳು, ಅಭಿಮಾನಿಗಳು ಹಾಗೂ ಧರ್ಮಸ್ಥಳದ ಭಕ್ತರು ಹೆಗ್ಗಡೆಯವರಿಗೆ ಶ್ರದ್ಧಾಭಕ್ತಿಯಿಂದ ಗೌರವಾರ್ಪಣೆ ಮಾಡುವರು. ಈ ಪ್ರಯುಕ್ತ ಗುರುವಾರ ಬೆಳಗ್ಗೆ 10ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ದೇಗುಲದ ನೌಕರರಿಗೆ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿದೆ.

ಸಂಜೆ 4 ಗಂಟೆಗೆ ಮಹೋತ್ಸವ ಸಭಾಭವನದಲ್ಲಿ ನಡೆಯುವ ಅಭಿನಂದನ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ| ಸಿ.ಎನ್‌.ಮಂಜುನಾಥ್‌ ಅಧ್ಯಕ್ಷತೆ ವಹಿಸುವರು. ಶಾಸಕರಾದ ಹರೀಶ್‌ ಪೂಂಜ ಮತ್ತು ಕೆ. ಪ್ರತಾಪಸಿಂಹ ನಾಯಕ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಶುಭಾಶಂಸನೆ ಮಾಡುವರು.

ಚಂದ್ರನಾಥ, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ
ಈ ಪ್ರಯುಕ್ತ ಅ.24ರಂದು ಬೆಳಗ್ಗೆ ಭಗವಾನ್‌ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ಜರಗಲಿವೆ. ಗಣ್ಯರು, ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು, ಸಂಘ-ಸಂಸ್ಥೆಯವರು, ನಾಗರಿಕರು ಸಹಿತ ಅನೇಕ ಮಂದಿ ಹೆಗ್ಗಡೆ ಯವರಿಗೆ ಭಕ್ತಿಪೂರ್ವಕ ಅಭಿನಂದನೆ ಹಾಗೂ ಗೌರವ ಸಲ್ಲಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next