Advertisement

ಧರ್ಮಸ್ಥಳ: ಲಕ್ಷದೀಪೋತ್ಸವ ಸಂಭ್ರಮ: ಕಥಕ್‌ ನೃತ್ಯರೂಪಕ, ಸುಗಮ ಸಂಗೀತ ವೈಭವ

07:24 PM Nov 27, 2019 | mahesh |

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಸನ್ನಿಧಿಯ ಅಮೃತವರ್ಷಿಣಿ ವೇದಿಕೆಯಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ಮಂಗಳವಾರ ರಾತ್ರಿ ಬೆಂಗಳೂರಿನ ನಾಟ್ಯಾಂಜಲಿ ಕಲಾ ತಂಡ ಪ್ರಸ್ತುತಪಡಿಸಿದ ವಿಶಿಷ್ಟ ಕಥಕ್‌ ನೃತ್ಯರೂಪಕ ಮನಸೂರೆಗೊಂಡಿತು. ವಿದ್ವಾನ್‌ ಅಶೋಕ್‌ ಕುಮಾರ್‌, ಅದಿತಿ ಅಶೋಕ್‌ ಮತ್ತು ಸ್ಫೂರ್ತಿ ಅಶೋಕ್‌ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಂತಹ ನೃತ್ಯ ರೂಪಕ ಜನ ಮೆಚ್ಚುಗೆಗೆ ಪಾತ್ರವಾದವು.

Advertisement

ಅಮೃತವರ್ಷಿಣಿ ರಾಗದಲ್ಲಿ ಪುಷ್ಪಾಂ ಜಲಿ ಭರತನಾಟ್ಯ ಸಂಯೋಜನೆ ಮೂಲಕ ಪ್ರಾರಂಭವಾದ ಕೃಷ್ಣ ಲೀಲಾ ನೃತ್ಯದ ಮೂಲಕ ಕಲಾಸಕ್ತರನ್ನು ಮಂತ್ರಮುಗ್ಧ ಗೊಳಿಸಿತು. ಅದಿತಿ ಅಶೋಕ್‌ ಚೊಚ್ಚಲ ನಿರ್ದೇಶನದಲ್ಲಿ ಭರತನಾಟ್ಯ-ಕಥಕ್‌ ನೃತ್ಯಗಳ ಸಮ್ಮಿಲನದಲ್ಲಿ ಮೂಡಿಬಂದ ಗರುಡಗಮನ ಗರುಡ ಧ್ವಜ ನೃತ್ಯ ಚಪ್ಪಾಳೆ ಗಿಟ್ಟಿಸಿಕೊಂಡಿತು. ಉತ್ತರ ಭಾರತ ಶೈಲಿಯ ಕಥಕ್‌, ತರಾಣ, ದಕ್ಷಿಣ ಭಾರತದ ಸಂಗೀತ ರೂಪಕ ಸುಗ್ಗಿ, ಬಣ್ಣಗಳ ಆಟ ಹೋಲಿ ಹೋಲಿರೇ ಎಂದು ತಾಳಕ್ಕೆ ತಕ್ಕ ಹೆಜ್ಜೆ ಹಾಕುವುದರೊಂದಿಗೆ ಕಣ್ಮನ ಸೆಳೆಯಿತು.

ಶ್ರೀಕೃಷ್ಣನ ತುಂಟಾಟ, ಬಾಲ್ಯದ ಹಾರೈಕೆ, ರಾಕ್ಷಸಿ ಸಂಹಾರ, ಗೋಪಿಕೆಯ ರೊಂದಿಗಿನ ತುಂಟತನ ನೃತ್ಯರೂಪಕ ವಾಗಿದ್ದು ವಿಶೇಷವೆನಿಸಿತು. ಸುಮಾರು 27 ಕಲಾವಿದ‌ರ ತಂಡ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿತು.

ಸುಗಮ ಸಂಗೀತ
ಪುತ್ತೂರಿನ ಶ್ರೀ ಜನಾರ್ದನ ಬಿ. ನೇತೃತ್ವದ ಸ್ವರ ಮಾಧುರ್ಯ ಸಂಗೀತ ಬಳಗವು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಶರಣು ಬೆನಕನೆ ಶರಣು ಶರಣು ಹೇ ಬೆನಕನೆ ನಿನಗೆ ವಂದನೆ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭಿಸಿ, ಶಂಕರ ನಾದ ಶರೀರ ಪದ ವೇದ ಎಂಬ ಸಹಸ್ರನಾಮಲಿಂಗೇಶ್ವರನನ್ನು ನೆನೆಯುವಂತೆ ಮಾಡಿದರು. ಡಾ| ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ಗಾಯಕಿ ಸವಿತಾ ಪುತ್ತೂರು “ನ್ಯಾಯ ನೀತಿ ಮೂರ್ತಿ ಸತ್ಯ’ ಎಂಬ ಗೀತೆ ಮೂಲಕ ಮಂಜುನಾಥನನ್ನು ಕೊಂಡಾಡಿದರು. ಗಾಯಕ ಅಶೋಕ್‌ ಶೆಟ್ಟಿ ಪುತ್ತೂರು “ಎದ್ದೇಳು ಮಂಜುನಾಥ’ ಪ್ರಸ್ತುತಪಡಿಸಿದರು. ಇನ್ನೋರ್ವ ರಾಜ್ಯಮಟ್ಟದ ಕಲಾವಿದ ಅಶ್ವತ್ಥ ಚೋಮ ಜಾನಪದಗೀತೆ ಹಾಡಿದರು.

Advertisement

ಜನಾರ್ದನ ಪುತ್ತೂರು ತಬಲಾ ವಾದಕರಾಗಿ ಸಾಥ್‌ ನೀಡಿದರು. ರಿದಂ ವಾದಕರಾಗಿ ಸಚಿನ್‌ ಪುತ್ತೂರು ಹಾಗೂ ಕೀ ಬೋರ್ಡ್‌ ವಾದಕರಾಗಿ ಅಶ್ವಿ‌ನ್‌ ಸಾಥ್‌ ನೀಡಿದರು. ಸೋಮವಾರ ಅಮೃತವರ್ಷಿಣಿ ಸಭಾಭವನದಲ್ಲಿ ಕರ್ನಾಟಕ ಕಲಾಶ್ರೀ, ಗಾನ ಕಲಾಭೂಷಣ, ಸಂಗೀತ ಸರಸ್ವತಿ ವಿದ್ವಾನ್‌ ಡಾ| ಕೆ. ವಾಗೀಶ್‌ ತಂಡವು ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿತ್ತು.

ಕಲಾ ಸೇವೆ
ಮಂಗಳವಾರ ರಾತ್ರಿ 382 ತಂಡಗಳ 1,300 ಕಲಾವಿದರು ವಾಲಗ, ಡೋಲಕ್‌, ನಾಗಸ್ವರ ವಾದನ ಸೇವೆ ಮಾಡಿದರೆ, 76 ತಂಡಗಳ 326 ಮಂದಿ ಬ್ಯಾಂಡ್‌ಸೆಟ್‌, 215 ಮಂದಿ ಶಂಖ, 500 ಮಂದಿ ಡೊಳ್ಳು ಕುಣಿತ, 30 ತಂಡಗಳ 140 ಕಲಾವಿದರು ಕರಡಿ ಮೇಳ, ಚಿಕ್ಕಮೇಳ ಮತ್ತು 57 ತಂಡಗಳ 320 ಕಲಾವಿದರು ವೀರಗಾಸೆ ಕುಣಿತದ ಮೂಲಕ ಪ್ರತಿಫಲಾಪೇಕ್ಷೆ ಇಲ್ಲದೆ ಶ್ರೀ ಸ್ವಾಮಿಗೆ ರಾತ್ರಿ ಇಡೀ ಕಲಾಸೇವೆ ಅರ್ಪಿಸಿದ್ದಾರೆ. ಇದನ್ನು ಸ್ಮರಿಸಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕಲಾವಿದರಿಗೆ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next