Advertisement
ವಿವಿದೆಡೆಗಳಿಂದ ಆಗಮಿಸಿದ ಭಕ್ತರು ವಿವಿಧ ವಲಯಗಳ ಹೆಸರಿನ ತಂಡಗಳೊಂದಿಗೆ ನಡೆಯುತ್ತಿದ್ದರು. ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಚಾರ್ಮಾಡಿ, ಕೊಕ್ಕಡ, ಮಡಂತ್ಯಾರು, ಗುರುವಾಯನಕೆರೆ, ಹೊಸಂಗಡಿ, ವೇಣೂರು, ಅಳದಂಗಡಿ, ನಾರಾವಿ ಮತ್ತು ಕಣಿಯೂರು ವಲಯಗಳ ತಂಡಗಳು ಒಟ್ಟಾಗಿ ಹೆಜ್ಜೆ ಹಾಕಿದವು.
ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಬೋಧಕೇತೆ ಸಿಬ್ಬಂದಿ ಪಾಲ್ಗೊಂಡಿದ್ದರು. ಉಜರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆಯು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಸಮಾರೋಪಗೊಂಡಿತು. ವಿವಿಧ ಕಡೆಗಳಿಂದ ಆಗಮಿಸಿದ ಭಕ್ತವೃಂದ ಶಿವಧ್ಯಾನ, ಭಜನೆ ಹಾಡುತ್ತಾ ಹೆಜ್ಜೆ ಇರಿಸಿದರು. ಕಣ್ಣು ಹಾಯಿಸಿದ ಕಡೆಗೆಲ್ಲಾ ಭಕ್ತರು. ಅಮ್ಮನ ಕೈ ಹಿಡಿದ ಕಂದಮ್ಮ, ತಂದೆಯ ಹೆಗಲೇರಿದ ಬಾಲಕ, ಪಿಸುಗುಡುತ್ತಾ ಸಾಗುತ್ತಿದ್ದ ತರುಣಿಯರು, ದೇಹ ಸ್ಪಂದಿಸದಿದ್ದರೂ ಮಂಜುನಾಥನ ಕಾಣುವ ತವಕದಿಂದ ನಡೆದು ಬರುತ್ತಿದ್ದ ಮುನ್ನಡೆದ ಹಿರಿಯರು. ಎಲ್ಲರ ಮೊಗದಲ್ಲಿ ಭಕ್ತಿಯ ಭಾವವೇ ಎದ್ದುಕಾಣುತ್ತಿತ್ತು.
Related Articles
Advertisement
ಧರ್ಮಸ್ಥಳದಲ್ಲಿ ಪಾದಯಾತ್ರೆ ಸಮಾರೋಪಗೊಂಡ ನಂತರ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾತುಗಳು ಭಕ್ತವೃಂದದ ಮನಗೆದ್ದವು. ಲಕ್ಷದೀಪೋತ್ಸವದ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ನಡೆದು ಶ್ರೀ ಮಂಜುನಾಥೇಶ್ವರ ಸನ್ನಿಧಿಗೆ ತಲುಪಿಕೊಳ್ಳುವುದನ್ನು ಭಾವೈಕ್ಯತೆಯ ವೈಶಿಷ್ಟ್ಯ ಎಂದು ಅವರು ವಿಶ್ಲೇಸಿದರು. ಇಡೀ ವರ್ಷದ ಬದುಕಿಗೆ ಬೇಕಾಗುವ ದೈಹಿಕ ಶಕ್ತಿಯನ್ನು ಪಡೆಯುವುದಕ್ಕೆ ಈ ಪಾದಯಾತ್ರೆ ನೆರವಾಗುತ್ತದೆ ಎಂದು ಹೇಳಿದ್ದು ಪಾದಯಾತ್ರಿಗಳೊಳಗೆ ಹೊಸ ಹುಮ್ಮಸ್ಸು ಮೂಡಿಸಿತು.
ಬರಹ: ಧೃತಿ ಅಂಚನ್ ; ಚಿತ್ರ: ಶಿವಪ್ರಸಾದ್ ಹಳುವಳ್ಳಿ