Advertisement

ಧರ್ಮಸ್ಥಳ ಗ್ರಾ. ಯೋಜನೆಗೆ ಐಎಫ್‌ಐ ಪ್ರಶಸ್ತಿ ಪ್ರದಾನ

11:12 AM Dec 13, 2017 | |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಿರು ಆರ್ಥಿಕ ಕ್ಷೇತ್ರದ ಪ್ರಗತಿಗೆ ನೀಡಿದ ಕೊಡುಗೆಯನ್ನು ಮನ್ನಿಸಿ ಆಕ್ಸೆಸ್‌ ಸಂಸ್ಥೆ ನೀಡಿರುವ ಇನ್‌ಕ್ಲೂಸಿವ್‌ ಫೈನಾನ್ಸ್‌ ಇಂಡಿಯಾ ಪ್ರಶಸ್ತಿಯನ್ನು ಹೆಗ್ಗಡೆಯವರ ಪರವಾಗಿ ಸಹೋದರ ಡಿ. ಸುರೇಂದ್ರ ಕುಮಾರ್‌ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ದಿಲ್ಲಿಯಲ್ಲಿ ಸೋಮ ವಾರ ಸ್ವೀಕರಿಸಿದರು.

Advertisement

ದಿಲ್ಲಿಯ ಅಶೋಕಾ ಹೊಟೇಲ್‌ನಲ್ಲಿ ಸಮಾರಂಭ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿರು ಆರ್ಥಿಕ ವ್ಯವಹಾರದ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ರಾಷ್ಟ್ರದ ಪ್ರತಿಷ್ಠಿತ ಇನ್‌ಕ್ಲೂಸಿವ್‌ ಫೈನಾನ್ಸ್‌ ಇಂಡಿಯಾ ಪ್ರಶಸ್ತಿ ನೀಡಲಾಗಿದೆ.

ವೈಯಕ್ತಿಕ ಪ್ರಶಸ್ತಿ
ಅನೇಕ ವಿಭಾಗಗಳಲ್ಲಿ ಸಂಸ್ಥೆಗಳು ಹಾಗೂ ವೈಯಕ್ತಿಕ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು ಭಾರತದಲ್ಲಿ ಆರ್ಥಿಕ ಸೇರ್ಪಡೆಗೆ ಬೆಂಬಲ ನೀಡುವ ದೀರ್ಘ‌ಕಾಲದ ಕೊಡುಗೆ ನೀಡುವ ವ್ಯಕ್ತಿಯಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರನ್ನು ವೈಯಕ್ತಿಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ರಾಷ್ಟ್ರದ ಶ್ರೇಷ್ಠ ಕಿರು ಆರ್ಥಿಕ ಸೇರ್ಪಡೆ ಸಂಸ್ಥೆಯಾಗಿ 2010ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಗೆ ಈ ಪ್ರಶಸ್ತಿ ದೊರೆತಿತ್ತು. ಈಚೆಗೆ ಇದೇ ಕಾರ್ಯಕ್ರಮ ಗುರುತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿ 12 ಲಕ್ಷ ಮಂದಿಗೆ ರೂಪೆ ಕಾರ್ಡ್‌ ನೀಡಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಕಿರು ಆರ್ಥಿಕ ಕ್ಷೇತ್ರದ ಬೆಳವಣಿಗೆ, ಸ್ವಾವಲಂಬನೆ ಮೂಲಕ ಕಿರು ಆರ್ಥಿಕ ವ್ಯವಹಾರವನ್ನು ವಿಸ್ತರಿಸಿ ಅದನ್ನು ಸ್ಥಿರವಾಗಿಸಿ, ಅಡೆತಡೆಗಳ ಹೊರತಾಗಿಯೂ ಅವಿಶ್ರಾಂತ ಪ್ರಯತ್ನಗಳ ಮೂಲಕ ಸಾಧನೆಗೆ ಕಾರಣವಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು 2009ರಿಂದ ನೀಡಲಾಗುತ್ತಿದೆ.

ಈ ಪ್ರಶಸ್ತಿಯನ್ನು ಮೊದಲು ಮೈಕ್ರೋ ಫೈನಾನ್ಸ್‌ ಇಂಡಿಯಾ ಅವಾರ್ಡ್ಸ್‌ ಎಂದು ಕರೆಯಲಾಗುತ್ತಿತ್ತು. ಈ ಬಾರಿ ಹೆಗ್ಗಡೆಯ
ವರನ್ನು ಕಿರು ಆರ್ಥಿಕ ಕ್ಷೇತ್ರದ ಬೆಳವಣಿಗೆ ಹಾಗೂ ಕಿರು ಆರ್ಥಿಕ ಸೇರ್ಪಡೆ ಮೂಲಕ ಸಮಾಜವನ್ನು ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದ್ದಕ್ಕಾಗಿ ನಿರ್ಣಾಯಕರ ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next