Advertisement
ನೇತ್ರಾವತಿ ನದಿ ಮತ್ತು ಸ್ನಾನ ಘಟ್ಟದಲ್ಲಿ ಬೆಳಗ್ಗೆ ಗಂಟೆ 6ರಿಂದ 9ರ ವರೆಗೆ ದೇವಸ್ಥಾನದ ನೌಕರರು, ವಾಹನ ಚಾಲಕರು-ಮಾಲಕರು, ಗ್ರಾಮಾಭಿವೃದ್ಧಿ ನೌಕರರು, ಮಹಿಳಾ ಸಂಘಟನೆಗಳು, ಊರವರು, ಗ್ರಾ.ಪಂ., ಕೆ.ಎಸ್.ಆರ್.ಟಿ.ಸಿ. ಹಾಗೂ ವಿವಿಧ ಸಂಘಟನೆಗಳ ಸುಮಾರು 500ಕ್ಕೂ ಹೆಚ್ಚಿನ ಜನರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಪ್ರವಾಸಿಗರು ನದಿಗೆ ಎಸೆದ ಬಟ್ಟೆ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಂಗ್ರಹಿಸಿ 6 ಲಾರಿ, 3 ಟ್ರ್ಯಾಕ್ಟರ್‌ಗಳಲ್ಲಿ ಸಾಗಿಸಲಾಯಿತು. ಸ್ವಚ್ಛತೆಯಲ್ಲಿ ಪಾಲ್ಗೊಂಡ 500ಕ್ಕೂ ಹೆಚ್ಚು ಮಂದಿಗೆ ದೇವಸ್ಥಾನ ವತಿಯಿಂದ ತಿಂಡಿ ಹಾಗೂ ಗಂಜಿ ಚಟ್ನಿ ವಿತರಿಸಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾಧ್ಯಮದವರೊಂದಿಗೆ ಮಾತನಾಡಿ, ಸ್ವಚ್ಛತೆ ಬಹಳ ಅಗತ್ಯವಿತ್ತು. ಜನರಿಗೆ ಪ್ರಜ್ಞಾವಂತಿಕೆ ಕೊಡುವುದೇ ಬಹಳ ಮುಖ್ಯ. ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆ ಪರಿಣಾಮಕಾರಿಯಾಗಿ ದೇಶದಲ್ಲಿ ಶೇ. 50 ಯಶಸ್ವಿಯಾಗಿದೆ. ಪ್ರತಿ ಮನೆಯಲ್ಲೂ ಈ ಭಾವನೆ ಮೂಡಬೇಕು. ಹೊರ ರಾಜ್ಯದಿಂದ ಕ್ಷೇತ್ರಕ್ಕೆ ಬರುವವರಿಗೆ ಸ್ವಚ್ಛತೆ ಪ್ರಜ್ಞೆ ಕಡಿಮೆ ಇದೆ. ಈಗಾಗಲೇ ಬದಲಾವಣೆಯಾಗಿದ್ದು, ಸತತ ಪ್ರಯತ್ನದಿಂದ ಜನಜೀವನದಲ್ಲಿ ಇನ್ನಷ್ಟು ಬದಲಾವಣೆಯಾಗಬೇಕಿದೆ ಎಂದರು. ಊರವರು ಮತ್ತು ಧರ್ಮಸ್ಥಳ ಕ್ಷೇತ್ರದ ಮಂದಿ ನೇತ್ರಾವತಿ ಶುದ್ಧೀಕರಣದಲ್ಲಿ ಪಾಲ್ಗೊಂಡಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.