ಹುಬ್ಬಳ್ಳಿ: ಲಿಂಗಾಯತ ಧರ್ಮ ಒಡೆಯಲು ಮುಂದಾಗಿರುವ ಗೃಹ ಸಚಿವ ಎಂ.ಬಿ.ಪಾಟೀಲ ಅಪಾಯಕಾರಿಯಾಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಾಗಿ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರ ಕುರಿತಾಗಿ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಒತ್ತಾಯಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ರಚನೆಯಿಂದ ಬಿಜೆಪಿಗೆ ಹೋಗುವ ಲಿಂಗಾಯತ ಮತಗಳನ್ನು ತಡೆಯಬಹುದಾಗಿದ್ದು, ಪ್ರತ್ಯೇಕ ಧರ್ಮ ವಿಚಾರದಲ್ಲಿ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಂಘಟನೆಗಳಿಂದ ಬಳಕೆ ಮಾಡಿಕೊಳ್ಳಲಾಗುವುದು ಎಂದು ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಎಂ.ಬಿ.ಪಾಟೀಲ ಉಲ್ಲೇಖೀಸಿದ್ದಾರೆ. ಈ ಪತ್ರ ನಕಲಿ ಎಂದು ಎಂ.ಬಿ.ಪಾಟೀಲರು ಹೇಳಬಹುದು. ಅವರೇ ಗೃಹ ಸಚಿವರಾಗಿದ್ದು, ಪತ್ರ ನಕಲಿಯೋ, ಅಸಲಿಯೋ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಸಿ, ವರದಿ ಬಹಿರಂಗ ಪಡಿಸಲಿ ಎಂದರು.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಸೋಲುಣ್ಣಲಿದ್ದು, ಚುನಾವಣೆ ನಂತರ ಒಂದೋ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯುತ್ತದೆ, ಇಲ್ಲವೆ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಕೊನೆ ಅಸ್ತ್ರವೆಂದರೆ ಕಣ್ಣೀರು. ಅವರು ಏನೇ ಕಣ್ಣೀರು ಹಾಕಿದರೂ ಈ ಬಾರಿ ದೇವೇಗೌಡರ ಕುಟುಂಬವನ್ನು ಮನೆಗೆ ಕಳುಹಿಸಲು ಜನರು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಲೋಕಸಭೆಯಲ್ಲಿ ಸೋಲಿನ ಅರಿವಾಗಿದೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಹಾಗೂ ಎಚ್ .ಡಿ. ದೇವೇಗೌಡ ಅವರು ನಮ್ಮ ಅಭ್ಯರ್ಥಿಗಳು ಸೋತರೆ ಸಮ್ಮಿಶ್ರ ಸರ್ಕಾರ ಉಳಿಯದು ಎಂದು ಪರಸ್ಪರ ಬೆದರಿಕೆ ಹಾಕುತ್ತಿದ್ದಾರೆ ಎಂದರು.
ಸೋನಿಯಾಗೆ ಬರೆದ ಪತ್ರ ನಕಲಿ-ದೂರು
ವಿಜಯಪುರ: ತಾವು ಅಧ್ಯಕ್ಷರಾಗಿರುವ ಬಿಎಲ್‌ಡಿಇ ಸಂಸ್ಥೆಯ ಲೆಟರ್ ಪ್ಯಾಡ್ ಹಾಗೂ ತಮ್ಮ ಸಹಿ ಪೋರ್ಜರಿ ಮಾಡಿ ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ಕುರಿತು ತನಿಖೆ ನಡೆಸುವಂತೆ ಸ್ವಯಂ ಗೃಹ ಸಚಿವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಘಟನೆ ಜರುಗಿದೆ.
ಮಂಗಳವಾರ ಆದರ್ಶ ನಗರ ಪೊಲೀಸ್ ಠಾಣೆಗೆ ತೆರಳಿದ ಗೃಹ ಸಚಿವ ಎಂ.ಬಿ. ಪಾಟೀಲ ರಾಜಕೀಯ ದುರುದ್ದೇಶದಿಂದ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಹಿನ್ನಡೆ ಮಾಡುವ ದುರುದ್ದೇಶದಿಂದ ಬಿಎಲ್‌ಡಿಇ ಸಂಸ್ಥೆಯ ಹೆಸರಿನಲ್ಲಿ ನಕಲಿ ಲೆಟರ್ ಪ್ಯಾಡ್ ಸೃಷ್ಟಿಸಿದ ಪ್ರಕರಣದ ಕುರಿತು ತನಿಖೆ ನಡೆಸುವಂತೆ ದೂರು ನೀಡಿ ಮನವಿ ಮಾಡಿದರು. ಬಿಎಲ್ ಡಿಇ ಸಂಸ್ಥೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಎಂ.ಬಿ. ಪಾಟೀಲ ತಾವು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ 10.7.2017ರಂದು ಕ್ರ.ಸಂ. 1414/ ಸಿಕೆ/2017ಯ ಪತ್ರ ಸೋನಿಯಾ ಗಾಂಧಿ ಅವರಿಗೆ ಬರೆದಿರುವ ಪತ್ರ ಬರೆದಂತೆ ನಕಲಿ ದಾಖಲೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ನಾನು ಇಂಥ ಯಾವುದೇ ಪತ್ರವನ್ನು ಬರೆಯದಿದ್ದರೂ ಬಿಎಲ್ ಡಿಇ ಸಂಸ್ಥೆಯ ಖೊಟ್ಟಿ ಲೆಟರ್ ಪ್ಯಾಡ್ ಹಾಗೂ ನನ್ನ ಸಹಿಯನ್ನು ನಕಲು ಮಾಡಿ ಬಳಸಲಾಗಿದೆ ಎಂದು ದೂರಿದರು.