ಬೀದರ: ಸತತ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಧರಿನಾಡು ಬೀದರ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ತಾಲೂಕುಗಳು ನಲುಗಿ ಹೋಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಾವಿರಾರು ಹೆಕ್ಟೇರ್ ಪ್ರದೇಶದ ಬೆಳೆಗಳು ನೀರು ಪಾಲಾಗಿದ್ದರೆ, ವಿವಿಧ ಸೇತುವೆಗಳ ಮೇಲಿಂದ ನೀರು ಹರಿಯುತ್ತಿವೆ.
ಇನ್ನೊಂದೆಡೆ ಗಡಿ ರಾಜ್ಯ ಮಹಾರಾಷ್ಟ್ರದಲ್ಲಿ ಮಳೆ ಆರ್ಭಟ ಹಿನ್ನೆಲೆ ಧನೇಗಾಂವ್ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿ ಬಿಡುತ್ತಿರುವುದರಿಂದ ನಾರಂಜಾ ನದಿಯಲ್ಲಿ ನೀರಿನ ಹರಿವು ಹೆಚ್ಚಿದೆ. ಹೀಗಾಗಿ ಭಾಲ್ಕಿ ತಾಲೂಕಿನ ಸಾಯಿಗಾಂವ್ ಸಮೀಪದ ಬಳಿ ನಿರ್ಮಿಸಿರುವ ಹೊಸ ಸೇತುವೆ ಮೇಲಿಂದ ಏಳೆಂಟು ಫೀಟ್ ಎತ್ತರದಲ್ಲಿ ನೀರು ಹರಿದು ಹೋಗುತ್ತಿದ್ದು, ಸಾಯಿಗಾಂವ್ ವ್ಯಾಪ್ತಿಯ ಹಲ್ಸಿ ತೂಗಾಂವ್, ಕೊಂಗಳಿ, ಜೀರಗ್ಯಾಳ್, ಭಾಟಸಾಂಗವಿ, ಲಖನಗಾಂವ್ ಸೇರಿ ಇನ್ನಿತರ ಗ್ರಾಮಗಳಲ್ಲಿ ರೈತರು ಬೆಳೆದ ಸಾವಿರಾರು ಎಕರೆ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ. ಜತೆಗೆ ಈ ಪ್ರದೇಶದಲ್ಲಿ ಸಂಪರ್ಕ ಕಡಿತಗೊಂಡಿದೆ.
ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8ಗಂಟೆಯಿಂದ ಹಿಂದಿನ 24ಗಂಟೆಯ ಅವ ಧಿಯಲ್ಲಿ 7.1 ಮಿ.ಮೀ. (ವಾಡಿಗೆ ಮಳೆ 5.9 ಮಿ.ಮೀ.) ಮಳೆ ಬಿದ್ದಿದೆ. ಬೀದರ ತಾಲೂಕಿನಲ್ಲಿ ಅತಿ ಹೆಚ್ಚು 14.8 ಮಿ.ಮೀ. ಮಳೆ ಬಿದ್ದಿದರೆ ಬಸವಕಲ್ಯಾಣ ತಾಲೂಕಿನ ಅತಿ ಕಡಿಮೆ 1.6 ಮಿ.ಮೀ. ಮಳೆ ಆಗಿದೆ. ಇನ್ನುಳಿದಂತೆ ಔರಾದ 8.3 ಮಿ.ಮೀ., ಭಾಲ್ಕಿ 4.7 ಮಿ.ಮೀ., ಹುಮನಾಬಾದ್ 6.3 ಮಿ.ಮೀ., ಚಿಟಗುಪ್ಪ 12.8 ಮಿ.ಮೀ., ಕಮಲನಗ 4.8 ಮಿ.ಮೀ. ಮತ್ತು ಹುಲಸೂರು ತಾಲೂಕಿನಲ್ಲಿ 3 ಮಿ.ಮೀ. ಮಳೆ ಆಗಿರುವುದು ವರದಿಯಾಗಿದೆ.
ಈವರೆಗೆ 28,183 ಹೆಕ್ಟೇರ್ ಬೆಳೆಹಾನಿ ಅಂದಾಜಿಸಲಾಗಿದೆ. ಭಾಲ್ಕಿ ಔರಾದ, ಹುಮನಾಬಾದ್ ಮತ್ತು ಬೀದರ ತಾಲೂಕಿನಲ್ಲಿ ಹಾನಿ ಪ್ರಮಾಣ ಹೆಚ್ಚಾಗಿದೆ. ಜತೆಗೆ ವಾಣಿಜ್ಯ ಬೆಳೆ ಕಬ್ಬು ಸಹ ನೆಲಸಮಗೊಂಡಿದ್ದು, ರೈತರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಮಳೆಯ ರುದ್ರ ನರ್ತನಕ್ಕೆ ಜಿಲ್ಲೆಯ ವಿವಿಧೆಡೆ ಸೇತುವೆಗಳು ಮುಳುಗಡೆಯಾಗಿದ್ದರೆ, ಕೆಲವೆಡೆ ಕುಸಿದು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದಲ್ಲದೇ ಕೆಲ ಗಂಟೆಗಳ ಕಾಲ ಹಲವು ಗ್ರಾಮಗಳ ಸಂಪರ್ಕ
ಕಡಿತಗೊಳ್ಳುವಂತೆ ಮಾಡಿತು. ಮಳೆ ಅಬ್ಬರದಿಂದ ಬೀದರ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಸೋಮವಾರ ರಾತ್ರಿವಿಡೀ ಭಾರಿ ಮಳೆಯಿಂದ ತಗ್ಗು ಪ್ರದೇಶದ ಅಂಗಡಿ ಮುಂಗಟ್ಟು, ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿತ್ತು. ಸೋಮವಾರ ಮಧ್ಯಾಹ್ನದಿಂದ ಮಳೆ ಆಗಿದ್ದು, ಮೋಡ ಕವಿದ ವಾತಾವರಣ ಇದೆ.
ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಭಾಲ್ಕಿ ತಾಲೂಕಿನ ಕಾರಂಜಾ ಜಲಾಶಯದ ಒಡಲು ಭರ್ತಿಯಾಗಿದ್ದು, ಕಳೆದ ಮೂರು ದಿನಗಳಿಂದ 4 ಗೇಟ್‌ಗಳ ಮೂಲಕ ಹೆಚ್ಚುವರಿ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. 7.691 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 7.686 ಟಿಎಂಸಿ ಅಡಿ ನೀರು ಸಂಗ್ರಹ ಇದೆ. ಜಲಾಶಯದ ಒಳ ಹರಿವು 3110 ಕ್ಯೂಸೆಕ್ ಮತ್ತು ಹೊರ ಹರಿವು 3910 ಕ್ಯೂಸೆಕ್ ದಾಖಲಾಗಿದೆ. ಅಧಿ ಕ ಪ್ರಮಾಣದಲ್ಲಿ ನದಿಗೆ ನೀರು ಬಿಡುತ್ತಿರುವುದರಿಂದ ನದಿ ಪಾತ್ರದ ಗ್ರಾಮಗಳಲ್ಲಿ ನೀರು ನುಗ್ಗುವ ಆತಂಕ ಹೆಚ್ಚಿದೆ.