Advertisement

ಸಾಹಿತ್ಯಕ್ಕೆ ‘ಪಂಚ ರತ್ನ’ನೀಡಿದ ವಿದ್ಯಾರಣ್ಯ ಶಾಲೆ

11:20 AM Jan 04, 2019 | |

ಧಾರವಾಡ: ವಿದ್ಯಾಕಾಶಿ ಧಾರವಾಡದ ವಿದ್ಯಾರಣ್ಯ ಮಾಧ್ಯಮಿಕ ಶಾಲೆಗೂ ಸಾಹಿತ್ಯ ಸಮ್ಮೇಳನಕ್ಕೂ ಅವಿನಾಭಾವ ನಂಟಿದೆ. ಇದೇ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಐವರು ಸಾಹಿತಿಗಳು ಹಿಂದೆ ನಡೆದ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿದ್ದಾರೆ ಎಂಬುದು ವಿಶೇಷ.

Advertisement

ಬಿ.ಎಂ.ಶ್ರೀಕಂಠಯ್ಯ, ಶಂ.ಬಾ.ಜೋಶಿ, ರಂಗನಾಥ ದಿವಾಕರ ಇಲ್ಲಿನ ಹೆಬ್ಬಳ್ಳಿ ಅಗಸಿ ಸಮೀಪದ ವಿದ್ಯಾರಣ್ಯ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರೆ, ದ.ರಾ.ಬೇಂದ್ರೆ ಇದೇ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರಲ್ಲದೇ ಮುಂದೆ ಪದವಿ ಪಡೆದುಕೊಂಡು ಬಂದು ಇಲ್ಲಿಯೇ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಕೆ.ಜಿ. ಕುಂದಣಗಾರ ಇದೇ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದರು.

ಕನ್ನಡದ ಕಣ್ವಮುನಿ ಬಿ.ಎಂ.ಶ್ರೀಕಂಠಯ್ಯ 1928ರಲ್ಲಿ ಕಲಬುರ್ಗಿಯಲ್ಲಿ ನಡೆದ ಅಖೀಲ ಭಾರತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರೆ, ರಂಗನಾಥ ದಿವಾಕರ 1938ರಲ್ಲಿ ಬಳ್ಳಾರಿಯಲ್ಲಿ ನಡೆದ 23ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅಂಬಿಕಾತನಯದತ್ತ ಕಾವ್ಯನಾಮದಿಂದ ಖ್ಯಾತರಾದ ದ.ರಾ.ಬೇಂದ್ರೆ 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕೆ.ಜಿ.ಕುಂದಣಗಾರ ಗದಗನಲ್ಲಿ 1961ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ದಿವಾಕರ ರಂಗನಾಥ ಅವರು 1916ರಲ್ಲಿ ವಿದ್ಯಾರಣ್ಯ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ದ.ರಾ.ಬೇಂದ್ರೆ 1918ರಲ್ಲಿ ಇದೇ ಶಾಲೆಯಲ್ಲಿ ಕಲಿತು ಮುಂದೆ ಪದವಿ ಪಡೆದ ನಂತರ 1925ರಿಂದ 1932ರವರೆಗೆ ವಿದ್ಯಾರಣ್ಯ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಶಂ.ಬಾ.ಜೋಶಿ 1928ರಿಂದ 1946ರವರೆಗೆ ಈ ಶಾಲೆಯಲ್ಲಿ ಬೋಧನೆ ಮಾಡಿದರು.

1882ರಲ್ಲಿ ಬಡವರಿಗೆ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ವಿಷ್ಣು ಲೇಲೆ ಆವರು ನ್ಯೂ ಇಂಗ್ಲಿಷ್‌ ಸ್ಕೂಲ್‌ ಆರಂಭಿಸಿದರು. ಬಾಲ ಗಂಗಾಧರ ತಿಲಕರ ವಿಚಾರಧಾರೆಯನ್ವಯ ರಾಷ್ಟ್ರೀಯ ಭಾವನೆಯನ್ನು ಜಾಗೃತಗೊಳಿಸುವುದು ಅವರ ಉದ್ದೇಶವಾಗಿತ್ತು. 1877ರಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ವಿಕ್ಟೋರಿಯಾ ಭಾರತದ ಚಕ್ರವರ್ತಿಯಾಗಿ ಅಧಿಕಾರ ವಹಿಸಿಕೊಂಡರು. ಅದರಿಂದಾಗಿ ಶಾಲೆಗೆ ವಿಕ್ಟೋರಿಯಾ ಹೈಸ್ಕೂಲ್‌ ಎಂದು ಹೆಸರಿಡಲಾಯಿತು. ಮುಂದೆ ಅದು ಸ್ವಾತಂತ್ರ್ಯಾನಂತರ ವಿದ್ಯಾರಣ್ಯ ಮಾಧ್ಯಮಿಕ ಶಾಲೆ ಎಂದು ಮರು ನಾಮಕರಣಗೊಂಡಿತು. ಆರ್ಥಿಕ ಸಂಕಷ್ಟದಿಂದಾಗಿ ಅಪಾರ ತೊಂದರೆ ಅನುಭವಿಸಿದ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಪ್ರಸಿದ್ಧಿ ಪಡೆದಿದೆ. ಬದ್ಧತೆಯ ಆಡಳಿತ ಮಂಡಳಿ ಹಾಗೂ ಸಮರ್ಥ ಶಿಕ್ಷಕರಿಂದಾಗಿ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡಿದ್ದಾರೆ.

1913ರಿಂದ 1920ರವರೆಗೆ ಸಂಸ್ಥೆ ಅಗಾಧ ಪ್ರಗತಿ ಹೊಂದಿತು. ಹೊಸ ಚೈತನ್ಯದಿಂದ ಮುನ್ನುಗ್ಗಿ ಕನ್ನಡ ದಿಗ್ಗಜರನ್ನು ತನ್ನೆಡೆಗೆ ಆಕರ್ಷಿಸಿದ್ದು ಸಂಸ್ಥೆಯ ಬಲವರ್ಧನೆಗೆ ಸಹಾಯಕವಾಯಿತು. ದ.ರಾ.ಬೇಂದ್ರೆ, ದಿವಾಕರ ರಂಗರಾಯರು, ಆದ್ಯ ಅನಂತಾಚಾರ್ಯ, ಟಿ.ಬಿ.ಹರ್ಡಿಕರ, ಎಸ್‌.ಟಿ.ಪಪ್ಪು, ಸು.ಶಿ.ದೇಸಾಯಿ ಮೊದಲಾದವರು ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಏಳ್ಗೆಯಲ್ಲಿ ಮಹತ್ವದ ಪಾತ್ರ ನೀಡಿದರು. ವಿದ್ಯಾರಣ್ಯ ಶಾಲೆಯ ಆವರಣದಲ್ಲಿ 1944ರಲ್ಲಿ ಕೆ.ಇ. ಬೋರ್ಡ್ಸ್‌ ಕಲಾ ಮಹಾವಿದ್ಯಾಲಯ ಆರಂಭಗೊಂಡಿತು.

Advertisement

ಬಿ.ಎಂ.ಶ್ರೀಕಂಠಯ್ಯ ಇದರ ಪ್ರಾಚಾರ್ಯರಾದರು. ಸೇವಾ ನಿವೃತ್ತಿ ನಂತರ ಕೂಡ ವಿದ್ಯಾರಣ್ಯ ಶಾಲೆಗೆ ಬರುತ್ತಿದ್ದರು. 1946ರಲ್ಲಿ ಕಚೇರಿಯಲ್ಲಿಯೇ ಅವರು ನಿಧನರಾದರು. ಸಾಹಿತ್ಯ ಸಮ್ಮೇಳನಕ್ಕೆ ಬಂದವರು 136 ವರ್ಷಗಳ ಇತಿಹಾಸ ಹೊಂದಿದ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅನಘ್ಯರ್ ರತ್ನಗಳನ್ನು ನೀಡಿದ ಶಾಲೆಯನ್ನು ವೀಕ್ಷಿಸಬಹುದಾಗಿದೆ.

136 ವರ್ಷಗಳಷ್ಟು ಹಳೆಯದಾದ ನಮ್ಮ ವಿದ್ಯಾರಣ್ಯ ಶಾಲೆ ಭವ್ಯ ಪರಂಪರೆ ಹೊಂದಿದೆ. ಸಾಕಷ್ಟು ತೊಂದರೆಗಳ ಮಧ್ಯೆಯೂ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಶಾಲೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ನಮ್ಮ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಐವರು ಗಣ್ಯ ಸಾಹಿತಿಗಳು ಅಖೀಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದುದು ನಮಗೆ ಹೆಮ್ಮೆಯ ಸಂಗತಿ.
•ಸಿಂಧು ಶಿರೂರ,
ಉಪಪ್ರಾಚಾರ್ಯರು,
ವಿದ್ಯಾರಣ್ಯ ಮಾಧ್ಯಮಿಕ ಶಾಲೆ, ಧಾರವಾಡ

ಕನ್ನಡ ನಾಡಿಗೆ ಹಲವಾರು ಸಾಹಿತಿಗಳನ್ನು ನೀಡಿದ್ದು ವಿದ್ಯಾರಣ್ಯ ಶಾಲೆಯ ಹೆಗ್ಗಳಿಕೆ. ಸಾಹಿತ್ಯಾಸಕ್ತ ಬೋಧಕರು ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿದರು. ಇದರಿಂದ ಹಲವಾರು ಮಕ್ಕಳು ಸಹಜವಾಗಿಯೇ ಆಸಕ್ತಿ ಬೆಳೆಸಿಕೊಂಡು ಮುಂದೆ ಸಾಹಿತ್ಯ ಕೃಷಿ ಮಾಡಿದರು. ಇಲ್ಲಿ ಕಲಿತ ಹಲವು ವಿದ್ಯಾರ್ಥಿಗಳು ಸಾಹಿತ್ಯದ ಸಾಧನೆಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೊಂದು ಅಪೂರ್ವ ಶಿಕ್ಷಣ ಸಂಸ್ಥೆಯಾಗಿದೆ.
•ಹರ್ಷ ಡಂಬಳ,
ಹಿರಿಯ ಸಾಹಿತಿಗಳು

•ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next