Advertisement

ಸಾಹಿತ್ಯ ಸಂಭ್ರಮದಲ್ಲಿ ಸೈನ್ಯದ ಅವಹೇಳನ ಗದ್ದಲ

11:33 AM Jan 20, 2019 | Team Udayavani |

ಧಾರವಾಡ: ಗಡಿಗಳಲ್ಲಿ ನಮ್ಮ ಸೈನಿಕರು ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ಮಾಡುತ್ತಿದ್ದಾರೆ. ಇದರಿಂದಾಗಿ ಗಡಿಭಾಗದ ಜನರು ಸೇನೆಯನ್ನು ವಿರೋಧಿಸುತ್ತಾರೆ. ಗಡಿ ಭಾಗದ ಜನರೊಂದಿಗೆ ಕ್ರೂರವಾಗಿ ವರ್ತಿಸುತ್ತಾರೆ ಎಂದು ಹಿರಿಯ ಸಾಹಿತಿ ಡಾ| ಶಿವ ವಿಶ್ವನಾಥನ್‌ ಹೇಳಿಕೆ ಸಾಹಿತ್ಯ ಸಂಭ್ರಮದಲ್ಲಿ ವಾಗ್ವಾದಕ್ಕೆ ಕಾರಣವಾಯಿತು.

Advertisement

ಸಾಹಿತ್ಯ ಸಂಭ್ರಮದ ‘ರಾಷ್ಟ್ರೀಯತೆ: ಸಮಕಾಲಿನ ಸಂದರ್ಭದಲ್ಲಿನ ವಾಗ್ವಾದಗಳು’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರ, ಅಸ್ಸಾಂ ಸೇರಿದಂತೆ ಮಹಿಳೆಯರ ಮೇಲೆ ಸೈನಿಕರಿಂದ ಅತ್ಯಾಚಾರ ನಡೆಯುತ್ತಿರುವ ಘಟನೆಗಳು ನಡೆಯುತ್ತಿವೆ. ಕಾಶ್ಮೀರದಲ್ಲಿ ನಡೆಯುವ ಗಲಭೆಯ ಒಂದು ಮುಖದ ದರ್ಶನ ಮಾತ್ರ ನಮಗೆ ಆಗುತ್ತಿದೆ. ಹಿಂದಿನ ಸತ್ಯಗಳನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗುತ್ತಿದೆ ಎಂದರು.

ಇದಕ್ಕೆ ಕೆಲ ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿ, ಕೇವಲ ಭಾರತೀಯ ಸೈನ್ಯದ ಲೋಪಗಳನ್ನಷ್ಟೇ ಹೇಳಿ, ಪಾಕಿಸ್ತಾನದ ಯಾವುದೇ ತಪ್ಪಿನ ಕುರಿತು ಮಾತನಾಡದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿ ಮಾತನಾಡದಂತೆ ತಡೆದರು. ಮೇಜರ್‌ ಸಿದ್ಧಲಿಂಗಯ್ಯ, ಡಾ|ಎಚ್.ಎಸ್‌.ಎಂ.ಪ್ರಕಾಶ ಸಹ ಶಿವ ವಿಶ್ವನಾಥನ್‌ ಹೇಳಿಕೆ ಖಂಡಿಸಿದರು. ಭಾರತೀಯ ಸೈನ್ಯಕ್ಕೆ ಅಪಮಾನವಾಗಿದೆ. ಇಂತಹ ಹೇಳಿಕೆಗಳಿಂದ ಜನರಿಗೆ ತಪ್ಪು ಸಂದೇಶ ರವಾನಿಸಲಾಗುತ್ತಿದೆ ಎಂದು ವಿರೋಧಿಸಿದರು. ಆದರೆ ಶಿವ ವಿಶ್ವನಾಥನ್‌, ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಲ್ಲದೆ, ಭಾರತೀಯ ಸೈನ್ಯದಲ್ಲಿ ಇಂಥ ಹಲವಾರು ಘಟನೆಗಳು ನಿರಂತರ ನಡೆಯುತ್ತಿವೆ ಎಂದರು. ಗೊಂದಲ ಉಂಟಾದಾಗ ಡಾ| ಗಣೇಶ ದೇವಿ ಮಾತನಾಡಿ, ಡಾ| ಶಿವ ಚರ್ಚೆ ಹುಟ್ಟು ಹಾಕಿದ್ದಾರೆ. ಅವರ ವಿಚಾರಗಳನ್ನು ನಾವೆಲ್ಲ ಗೌರವಿಸಬೇಕು ಎಂದು ಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಕೆ.ವಿ.ಅಕ್ಷರ ಗೋಷ್ಠಿ ನಿರ್ದೇಶನ ಮಾಡಿದರು.

ನಾಗರಿಕತೆಯಿಲ್ಲದ ರಾಷ್ಟ್ರೀಯತೆ ಅರ್ಥಹೀನ
ನಾಗರಿಕತೆಯಿಲ್ಲದ ರಾಷ್ಟ್ರೀಯತೆ ಅರ್ಥ ಹೀನವಾಗಿದ್ದು, ರಾಷ್ಟ್ರೀಯತೆಯ ಅರ್ಥವನ್ನು ಸಂಕುಚಿತಗೊಳಿಸುವ ಷಡ್ಯಂತ್ರ ನಿರಂತರ ನಡೆದಿದೆ. ರಾಷ್ಟ್ರೀಯತೆಗೆ ವಿಶಾಲಾರ್ಥವಿದೆ. ಅದನ್ನು ನಾವು ತಿಳಿದುಕೊಳ್ಳಬೇಕು. ನಾಗರಿಕತೆಯನ್ನು ಕಡೆಗಣಿಸುವುದು ಸಲ್ಲ ಎಂದು ಡಾ| ಶಿವ ವಿಶ್ವನಾಥನ್‌ ಹೇಳಿದರು. ದೇಶ ವಿಭಜನೆ ನಂತರ ನಮ್ಮಲ್ಲಿ ರಾಷ್ಟ್ರೀಯತೆ ಎಂಬ ಪದ ಮಹತ್ವ ಪಡೆದುಕೊಂಡಿತು. ರಾಷ್ಟ್ರೀಯತೆಯ ಮೌಲ್ಯ ಅಪಾರವಾಗಿದ್ದು, ಅದನ್ನು ಲಘುವಾಗಿಸುವುದು ಸರಿಯಲ್ಲ. ವಿಭಜನೆ ಸಂದರ್ಭದಲ್ಲಿ ನಡೆದ ಹಿಂಸೆಯ ಹಿಂದಿನ ಸತ್ಯಗಳನ್ನು ನಾವು ತಿಳಿಯುವುದು ಅವಶ್ಯ. ಧರ್ಮಾಧಾರಿತವಾಗಿ ಕಟ್ಟು ಕತೆಗಳನ್ನಷ್ಟೇ ಹೇಳುತ್ತ ಬರಲಾಗುತ್ತಿದೆ. ಇವುಗಳೇ ಸತ್ಯ ಎಂದು ನಂಬಿಕೊಳ್ಳುವ ಸ್ಥಿತಿ ಉಂಟಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಧರ್ಮಾಧಾರಿತ ದೃಷ್ಟಿಯಿಂದ ನೋಡಿ ಸುಳ್ಳು ಸುದ್ದಿಗಳನ್ನೇ ಪ್ರಚಾರ ಮಾಡುತ್ತ ಬಂದಿದ್ದಾರೆ. ದೇಶಾಭಿಮಾನ, ರಾಷ್ಟ್ರೀಯತೆಗಳನ್ನು ಧರ್ಮಾಧಾರಿತವಾಗಿ ಅವಲೋಕಿಸುವುದು ಸಮಂಜಸವಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next