Advertisement

ಲೋಕ ಪ್ರಚಾರ ಜತೆ ಅಲೆ ಸೃಷ್ಟಿಗೆ ಕಸರತ್ತು

04:59 PM Apr 18, 2019 | Naveen |

ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ಲೋಕಸಭೆ ಚುನಾವಣೆ ಪ್ರಚಾರದ ಜತೆ ಜತೆಯಲ್ಲಿಯೇ ಕೇವಲ ಒಂದು ತಿಂಗಳಲ್ಲಿ ಎದುರಾಗುವ ವಿಧಾನಸಭೆ ಚುನಾವಣೆಗೆ ತಮ್ಮ ಪರ ಅಲೆ ಸೃಷ್ಟಿಗೆ ಆಕಾಂಕ್ಷಿಗಳು
ತೀವ್ರ ಕಸರತ್ತಿಗಿಳಿದಿದ್ದಾರೆ.

Advertisement

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌.ಶಿವಳ್ಳಿ ಅವರ ಅಕಾಲಿಕ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ, ನಿರೀಕ್ಷೆಗೂ ಮುನ್ನವೇ ಉಪ ಚುನಾವಣೆ ಘೋಷಣೆ ಆಗಿರುವುದು, ಸಹಜವಾಗಿಯೇ ರಾಜಕೀಯ
ಪಕ್ಷಗಳಲ್ಲಿ ತರಾತುರಿ ಸೃಷ್ಟಿಸಿದೆ. ಲೋಕಸಭೆ ಚುನಾವಣೆ ಮುಗಿದು 26 ದಿನಕ್ಕೆ ಉಪ ಚುನಾವಣೆ ಮತದಾನ ನಡೆಯಲಿದೆ.

ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ಅನಿವಾರ್ಯ ಆದರೆ ಅದಕ್ಕೆ ಇನ್ನಷ್ಟು ದಿನಗಳು ಬೇಕಾಗಬಹುದು ಎಂದು ಕೊಂಡಿದ್ದ ಟಿಕೆಟ್‌ ಆಕಾಂಕ್ಷಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಶಾಕ್‌ ನೀಡಿದೆ. ಸಿ.ಎಸ್‌. ಶಿವಳ್ಳಿ ಅವರು ನಿಧನವಾಗಿ ಒಂದು ತಿಂಗಳು ಸಹ ಪೂರ್ಣವಾಗುವ ಮುನ್ನವೇ ಕ್ಷೇತ್ರದ ಉಪ
ಚುನಾವಣೆ ಘೋಷಣೆ ಮಾಡಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಮುಂದಾಗಿದ್ದ, ಪ್ರಮುಖ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಇದೀಗ, ಸ್ವತಃ ತಮ್ಮ ಗೆಲುವಿಗೆ
ಬೆವರು ಸುರಿಸಬೇಕಾಗಿದೆ. ಇನ್ನೊಂದು ಕಡೆ ಟಿಕೆಟ್‌ ಪಡೆಯಲು ಸರ್ಕಸ್‌ ನಡೆಸಬೇಕಾಗಿದೆ.

ಕಾಂಗ್ರೆಸ್‌-ಬಿಜೆಪಿ ನಡುವೆ ಜಿದ್ದಾಜಿದ್ದಿ: ಕುಂದಗೋಳ ಕ್ಷೇತ್ರದಲ್ಲಿ ಸದ್ಯದ ಸ್ಥಿತಿಯಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌
ಹಾಗೂ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಡಲಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಅಭ್ಯರ್ಥಿ ಕಣಕ್ಕಿಳಿಯುತ್ತಾರೋ ಅಥವಾ ಜೆಡಿಎಸ್‌ ಪ್ರತ್ಯೇಕವಾಗಿ ಕಣಕ್ಕಿಳಿಯಲಿದೆಯೋ ಎಂಬುದರ ಬಗ್ಗೆ ಇನ್ನು ತೀರ್ಮಾನ ಆಗಬೇಕಿದೆ.

Advertisement

ಸದ್ಯದ ರಾಜಕೀಯ ಸ್ಥಿತಿ ಗಮನಿಸಿದರೆ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ.

ಕುಂದಗೋಳ ಕ್ಷೇತ್ರದಲ್ಲಿ ಕೆಲ ವರ್ಷಗಳಿಂದ ಫ‌ಲಿತಾಂಶ ಕಾಂಗ್ರೆಸ್‌, ಜನತಾ ಪರಿವಾರ, ಬಿಜೆಪಿ ನಡುವೆ ಹಾವು-ಏಣಿ ಆಟದ ರೀತಿಯಲ್ಲಿ ಸಾಗುತ್ತ ಬಂದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ
ಆಯ್ಕೆಯಾಗಿದ್ದ ಕಾಂಗ್ರೆಸ್‌ ಸಿ.ಎಸ್‌.ಶಿವಳ್ಳಿ ಅವರು ಸಚಿವ ಸ್ಥಾನ ಪಡೆದಿದ್ದರು. ಗೆಲುವು ನಮ್ಮದೇ ಎಂದುಕೊಂಡಿದ್ದ ಬಿಜೆಪಿಗೆ
ಅತ್ಯಲ್ಪ ಮತಗಳ ಸೋಲು ನೋವಿಗಿಂತ ಪಕ್ಷದೊಳಗಿನ ಒಳ ಹೊಡೆತದ ನೋವು ಹೆಚ್ಚು ಬಾಧಿಸುವಂತೆ ಮಾಡಿತ್ತು.

ಇದೀಗ ಉಪ ಚುನಾವಣೆಯಲ್ಲಿ ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್‌, ಕ್ಷೇತ್ರದ ಮೇಲೆ ಮತ್ತೆ ಹಿಡಿತ ಸಾಧಿಸಲು ಬಿಜೆಪಿ ಜಿದ್ದಾಜಿದ್ದಿಗಿಳಿಯಲಿವೆ ಎಂಬುದು ಸ್ಪಷ್ಟ. ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಿ.ಎಸ್‌.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೇಟು ನೀಡಿಕೆ ಬಹುತೇಕ ಖಚಿತವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅವರು
ಈಗಾಗಲೇ ಲೋಕಸಭೆ ಚುನಾವಣೆ ಪ್ರಚಾರ ಮೂಲಕ, ವಿಧಾನಸಭೆ ಉಪ ಚುನಾವಣೆ ತಯಾರಿಯಲ್ಲೂ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಿ.ಎಸ್‌.ಶಿವಳ್ಳಿ ಅವರ ಸಹೋದರ ಷಣ್ಮುಖ ಶಿವಳ್ಳಿ ಕೂಡ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್‌ನ ಬಹುತೇಕ ನಾಯಕರ ಒಲವು ಕುಸುಮಾ ಶಿವಳ್ಳಿ ಅವರನ್ನೇ ಅಭ್ಯರ್ಥಿಯನ್ನಾಗಿಸಬೇಕು. ಇದರಿಂದ ಅನುಕಂಪದ
ವಾತಾವರಣ ರಾಜಕೀಯಕವಾಗಿ ಲಾಭ ತಂದು ಕೊಡಲಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ.

ಬಿಜೆಪಿಯಲ್ಲಿ 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದರೂ ಎರಡನೇ ಸ್ಥಾನ ಪಡೆದ, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 634 ಮತಗಳಿಂದ ಅತ್ಯಲ್ಪ ಮತಗಳಿಂದ ಸೋಲು ಕಂಡ ಮಾಜಿ ಸಚಿವ
ಎಸ್‌.ಐ. ಚಿಕ್ಕನಗೌಡ್ರ ಬಿಜೆಪಿಯಿಂದ ಪ್ರಬಲ ಟಿಕೇಟ್‌ ಆಕಾಂಕ್ಷಿಯಾಗಿದ್ದು, 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದ ಎಂ.ಆರ್‌ .ಪಾಟೀಲರು ಸಹ ಟಿಕೇಟು ತಮಗೆ ಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇವರಿಬ್ಬರೂ
ಮುಖಂಡರು ಈಗಾಗಲೇ ಪಕ್ಷದ ವರಿಷ್ಠರ ಮೇಲೆ ತಮ್ಮದೇ ಒತ್ತಡ ತಂತ್ರ ಆರಂಭಿಸಿದ್ದಾರೆ. ಇಬ್ಬರು ಮುಖಂಡರ ಕಡೆಯವರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಟಿಕೇಟು ತಮಗೆ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಬಿಜೆಪಿ ಹೈಕಮಾಂಡ್‌ ಯಾರನ್ನು ಅಭ್ಯರ್ಥಿಯಾಗಿಸಲಿದೆ
ಎಂಬುದು ಕುತೂಹಲ ಮೂಡಿಸಿದೆ.

„ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next