ಹುಬ್ಬಳ್ಳಿ: ನೀರಿನ ಮಟ್ಟ ಕುಸಿಯುತ್ತಿರುವ ಇಂತಹ ಸಮಯದಲ್ಲಿ, ಅಂತರ್ಜಲ ಮೇಲೆತ್ತುವ ಕಾರ್ಯದಲ್ಲಿ ಯುವ ಬ್ರಿಗೇಡ್ ತಂಡ ಹಳೇ ಹುಬ್ಬಳ್ಳಿ ಕಪಿಲಾ ಬಾವಿ ಹೂಳೆತ್ತುವ ಮೂಲಕ ಮಾಡಿ ತೋರಿಸಿರುವು ದು ಹೆಮ್ಮೆಯ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಹು-ಧಾ ಮಹಾನಗರ ಪಾಲಿಕೆ ವಾರ್ಡ್ 41 ರಲ್ಲಿ ಬರುವ ಶ್ರೀನಗರ ಕಪಿಲಾ ಬಾವಿ ದೀಪೋತ್ಸವ ಹಾಗೂ ಉದ್ಯಾನವನಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಳೆದ ಹಲವು ದಿನಗಳಿಂದ ಶ್ರೀನಗರದಲ್ಲಿರುವ ಕಪಿಲಾ ಬಾವಿಗೆ ಪುನರ್ ಜೀವ ನೀಡಬೇಕೆಂದು ಯುವ ಬ್ರಿಗೇಡ್ ತಂಡ ಅತ್ಯುತ್ತಮ ಕಾರ್ಯ ಮಾಡಿದೆ. ಒಬ್ಬರಲ್ಲ, ಇಬ್ಬರಲ್ಲ ನೂರಾರು ಜನರು ಸ್ವಪ್ರೇರಣೆಯಿಂದ ಆಗಮಿಸಿ ಹಾಳಾಗಿ ಹೋಗಿದ್ದ ಕಪಿಲಾ ಬಾವಿ ಮರು ಜೀವ ನೀಡಿದ್ದಾರೆ. ಇದಕ್ಕೆ ಪ್ರೇರಣೆ ಎನ್ನುವಂತೆ ಸ್ಥಳೀಯರು ಕೂಡಾ ಸಾಥ್ ನೀಡುವ ಮೂಲಕ ನೂರಾರು ವರ್ಷಗಳ ಹಳೇಯದಾಗಿದ್ದ ಬಾವಿಗೆ ಹೊಸ ಸ್ಪರ್ಶ ನೀಡಿದ್ದು, ಅವರ ಕಾರ್ಯ ಮೆಚ್ಚುವಂತಹದ್ದು ಎಂದು ಶೆಟ್ಟರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಪಿಲಾ ಬಾವಿಯ ಪಕ್ಕದಲ್ಲಿರುವ ಜಾಗದಲ್ಲಿ ಉತ್ತಮ ಉದ್ಯಾನವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದ್ದು, ಅದಕ್ಕಾಗಿ ಮಹಾನಗರ ಪಾಲಿಕೆಯಿಂದ 20 ಲಕ್ಷ ರೂ. ಅನುದಾನ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರ ಇಂಧನ ಕಂಪನಿಗಳಿಂದ 19 ಲಕ್ಷ ರೂ.ಗಳ ಅನುದಾನ ನೀಡುವ ಭರವಸೆ ನೀಡಿದ್ದು, ಒಟ್ಟು ಸುಮಾರು 40 ಲಕ್ಷ ರೂ.ಗಳಲ್ಲಿ ಶ್ರೀನಗರದಲ್ಲಿ ಉತ್ತಮ ಉದ್ಯಾನವನ ನಿರ್ಮಿಸೋಣ ಎಂದರು.
ಯುವ ಬ್ರಿಗೇಡ್ ಮುಖಂಡ ಸುಭಾಸಸಿಂಗ್ ಜಮಾದಾರ ಮಾತನಾಡಿ, ಕಪಿಲಾ ಬಾವಿ ಸ್ವಚ್ಛತೆಯಲ್ಲಿ ಯಶಸ್ವಿಯಾಗಿದ್ದೇವೆ. ನಗರದ ವಿವಿಧ ಪ್ರದೇಶಗಳಲ್ಲಿ ಇಂತಹ ಕಾರ್ಯದ ಯೋಜನೆ ಇದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಪಾಲಿಕೆ ಸದಸ್ಯ ಲಕ್ಷ್ಮಣ ಗಂಡಗಾಳೇಕರ, ಬಡಾವಣೆಯ ಅಧ್ಯಕ್ಷ ರಂಜನ್ ಅಣ್ವೇಕರ ಹಾಗೂ ಇನ್ನಿತರರು ಮಾತನಾಡಿದರು. ವಿಠ್ಠಲ ಶೆಟ್ಟಿ, ಹೆಗಡೆ ಸೇರಿದಂತೆ ನೂರಾರು ಮಹಿಳೆಯರು ಇದ್ದರು. ಕೊನೆಯಲ್ಲಿ ಕಪಿಲಾ ಬಾವಿ ಸುತ್ತಲೂ ದೀಪ ಹಚ್ಚುವ ಮೂಲಕ ದೀಪೋತ್ಸವ ಆಚರಿಸಲಾಯಿತು.