ಧಾರವಾಡ: ಜಾಗತಿಕ ಜೀವವೈವಿಧ್ಯ ದಿನವನ್ನು ಮೇ 22ರಂದು ಎಲ್ಲ ತಾಲೂಕು, ಗ್ರಾಮ ಹಾಗೂ ಜಿಲ್ಲಾ ಪಂಚಾಯತಿಗಳಲ್ಲಿ ಆಚರಿಸಬೇಕು. ಅದೇ ದಿನ ರಾಜ್ಯ ಜೀವವೈವಿಧ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜೀವವೈವಿಧ್ಯ, ಅರಣ್ಯ, ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ವಿಶೇಷ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಜೀವವೈವಿಧ್ಯ ಸಮಿತಿಗಳನ್ನು ರಚಿಸಲಾಗಿದ್ದು, ಕೆರೆ, ಗುಡ್ಡ-ಬೆಟ್ಟ, ಕಾಡು-ಕಣಿವೆ, ಕೃಷಿ ಭೂಮಿ ಸೇರಿದಂತೆ ಪರಿಸರ ಸಂರಕ್ಷಣೆಯ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ. ಜೀವವೈವಿಧ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಗ್ರಾಮ ಪಂಚಾಯತಿಯ ಶೇ. 5ರಷ್ಟು ಅನುದಾನ ಬಳಸಿಕೊಳ್ಳಬೇಕು ಎಂದರು.
ತಾಲೂಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನೈಸರ್ಗಿಕ ಪ್ರದೇಶ, ಕೆರೆ ಹಾಗೂ ಇತರೆ ಪಾರಂಪರಿಕ ತಾಣಗಳನ್ನು ಗುರುತಿಸಿ, ಘೋಷಣೆ ಮಾಡುವ ಅಧಿಕಾರವನ್ನು ಆಯಾ ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.
ಜಿ.ಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಜಲಾಮೃತ ಯೋಜನೆಗೆ ರಾಜ್ಯ ಸರ್ಕಾರವು ಕೆರೆ ಹೂಳೆತ್ತುವಿಕೆಗಾಗಿ 2.78 ಲಕ್ಷ ರೂ. ಅನುದಾನ ನೀಡಲಾಗಿದ್ದು, 195 ಕೆರೆಗಳ ಹೂಳೆತ್ತುವಿಕೆ ಮತ್ತು ಹಸರೀಕರಣ ಕಾರ್ಯ ಮಾಡಲಾಗುತ್ತದೆ. ವಿಶ್ವ ಪರಿಸರ ದಿನವಾದ ಜೂ. 5ರಂದು 37 ಸಾವಿರ ಗಿಡಗಳನ್ನು ಹಾಗೂ ಜೂ.
11ರ ಹೊತ್ತಿಗೆ ಮತ್ತೆ 10 ಸಾವಿರ ಗಿಡಗಳನ್ನು ನೆಡುವ ಮೂಲಕ ಹಸಿರುಯುಕ್ತ ಪರಿಸರ ನಿರ್ಮಾಣಕ್ಕೆ ಆದ್ಯತೆ ಕೊಡಲಾಗಿದೆ ಎಂದರು.
ಸಾಮಾಜಿಕ ಅರಣ್ಯ ಅಧಿಕಾರಿ ಶ್ರೀನಿವಾಸ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.