ಧಾರವಾಡ: ಉತ್ತರ ಕರ್ನಾಟಕದ ಜಾಗೃತ ಸ್ಥಳಗಳಲ್ಲಿ ಒಂದಾದ ಮುರುಘಾಮಠದ ಶ್ರೀಮದಥಣಿ ಮುರುಘೇಂದ್ರ ಮಹಾ ಶಿವಯೋಗಿಗಳವರ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ರವಿವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ನಾಡಿನ ಮಠಾಧೀಶರ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಠದ ಆವರಣದಿಂದ ಆರಂಭಗೊಂಡ ಮೆರವಣಿಗೆ ಬಸ್ ಡೀಪೊ ಸರ್ಕಲ್‌ವರೆಗೆ ತೆರಳಿ ನಂತರ ಮರಳಿ ಮಠದ ಆವರಣಕ್ಕೆ ಬಂತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಥದತ್ತ ಲಿಂಬೆಹಣ್ಣು, ಉತ್ತತ್ತಿ, ಬಾಳೆಹಣ್ಣು ಎಸೆದು ಮನದಿಚ್ಛೆ ನೆರವೇರಿಸುವಂತೆ ಪ್ರಾರ್ಥಿಸಿದರು. ರಥದ ಹತ್ತಿರ ಬಿದ್ದ ನಿಂಬೆಹಣ್ಣು ಹಾಗೂ ಉತ್ತತ್ತಿ ಆಯ್ದುಕೊಳ್ಳಲು ಯತ್ನಿಸುತ್ತಿದ್ದ ಹುಡುಗರನ್ನು ತಡೆಯಲು ಪೊಲೀಸರು ಶ್ರಮಿಸಬೇಕಾಯಿತು. ಪೊಲೀಸರೊಂದಿಗೆ ಮಠದ ಕೆಲ ಭಕ್ತರು ರಥಗಳ ಗಾಲಿಯ ಹತ್ತಿರ ಬರದಂತೆ ತಡೆಯುವ ಕಾರ್ಯದಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು.
ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ವೀರಗಾಸೆ, ನಂದಿಕೋಲು ಕುಣಿತ, ವಾದ್ಯಮೇಳ, ಹೆಜ್ಜೆಮೇಳ, ಜಗ್ಗಲಿಗೆ ಮೇಳ ಪ್ರದರ್ಶನ ನಡೆಯಿತು. ಹಲವಾರು ಭಜನಾ ಮಂಡಳಿಗಳ ವತಿಯಿಂದ ಭಜನೆ ಜರುಗಿತು. ಭಕ್ತರು ಹರ..ಹರ..ಮಹಾದೇವ…ಎಂದು ಘೋಷಣೆ ಕೂಗುತ್ತ ರಥ ಎಳೆದರು. ಮಠದ ಆವರಣದಿಂದ ಆರಂಭಗೊಂಡ ಮೆರವಣಿಗೆ ಬಸ್ ಡೀಪೊ ಸರ್ಕಲ್‌ವರೆಗೆ ತೆರಳಿ ನಂತರ ಮರಳಿ ಮಠದ ಆವರಣಕ್ಕೆ ಬಂತು.
ಬಂದೋಬಸ್ತ್: ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಥೋತ್ಸವ ಜರುಗುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸಂಚರಿಸಬೇಕಿದ್ದ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು.
ವಿವಿಧೆಡೆಯಿಂದ ಬಂದಿದ್ದ ಭಕ್ತರು: ಧಾರವಾಡ, ಹುಬ್ಬಳ್ಳಿ, ನವಲಗುಂದ, ನರಗುಂದ, ಗದಗ, ಹಾವೇರಿ, ಹಳಿಯಾಳ ಸೇರಿದಂತೆ ವಿವಿಧೆಡೆಗಳಿಂದ ಮಠದ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಧಾರವಾಡ ಮತ್ತು ಸವದತ್ತಿ ತಾಲೂಕಿನ ಹಳ್ಳಿಗರು ಕೊಲ್ಲಾರಿ ಕಟ್ಟಿಕೊಂಡು ಬಂದು ಭಾಗವಹಿಸಿದ್ದು ವಿಶೇಷವಾಗಿತ್ತು. ಶ್ರೀಮಠದ ಹಿಂಬದಿ ಆವರಣದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೂ ಅನ್ನ ಸಂತರ್ಪಣೆ ನೆರವೇರಿತು.
ಲಿಂಗದೀಕ್ಷೆ: ಮುರಘೇಂದ್ರ ಮಹಾ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ರವಿವಾರ ಬೆಳಿಗ್ಗೆ ಜಂಗಮ ವಟುಗಳಿಗೆ ಹಾಗೂ ಭಕ್ತರಿಗೆ ಲಿಂಗದೀಕ್ಷೆ ಕಾರ್ಯಕ್ರಮ ನೆರವೇರಿತು. ಶೀ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ 100ಕ್ಕೂ ಮಕ್ಕಳಿಗೆ ಲಿಂಗದೀಕ್ಷೆ ಮಾಡಲಾಯಿತು.