Advertisement

ಭಟ್ಟರು-ಶರೀಫರ ತತ್ವಗಳು ಇಂದಿಗೂ ಅನುಕರಣೀಯ

05:11 PM Nov 19, 2018 | |

ಧಾರವಾಡ: ಹಿಂದೂ, ಮುಸ್ಲಿಂ ಸಾಮರಸ್ಯದ ಸಂಕೇತವಾಗಿರುವ ಗುರು ಗೋವಿಂದ ಭಟ್ಟರು ಹಾಗೂ ಶರೀಫರ ಸಂದೇಶಗಳ ಪಾಲನೆಯಿಂದ ಸಮಾಜದಲ್ಲಿನ ಸಾಕಷ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು. ಕೃಷಿ ವಿವಿಯ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸಂತ ಶಿಶುನಾಳ ಶರೀಫರ ದ್ವಿ ಶತಮಾನೋತ್ಸವ ಹಾಗೂ ರಾಜ್ಯೋತ್ಸವ ಪ್ರಯುಕ್ತ ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಶರೀಫರ ಮತ್ತು ಗೋವಿಂದ ಭಟ್ಟರ ತತ್ವಪದಗಳ ಆಧಾರಿತ ‘ತತ್ವ ರಸಾಯನ’ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಗುರು ಗೋವಿಂದ ಭಟ್ಟರು ಹಾಗೂ ಸಂತ ಶಿಶುನಾಳ ಶರೀಫರ ತತ್ವಗಳು ಇಂದಿಗೂ ಅನುಕರಣೀಯ. ಸಮಾಜದ ಇಂದಿನ ವ್ಯವಸ್ಥೆಯಲ್ಲಿ ಶರೀಫರ ಮಾರ್ಗದರ್ಶನ ಅಗತ್ಯ. ಇದರಿಂದ ಜನ ಶಾಂತಿ, ಸಹಬಾಳ್ವೆಯಿಂದ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.

ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಮನುಜರೇ ಮಾಡಿರುವ ಈ ಧರ್ಮಗಳು ಆತನನ್ನು ಉತ್ತರೋತ್ತರಕ್ಕೆ ತೆಗೆದುಕೊಂಡು ಹೋಗಬೇಕು. ಆದರೆ ಅದೇ ಧರ್ಮಕ್ಕೆ ಕುರೂಪದ ಆಯಾಮಗಳೂ ಇವೆ. ಇದು ಭಾರತದ ಚಿತ್ರಣ ಮಾತ್ರವಲ್ಲ, ಜಗತ್ತಿನಲ್ಲೂ ಧರ್ಮದ ಈ ಮುಖ ದರ್ಶನ ಇತ್ತೀಚಿನ ದಿನಗಳಲ್ಲಾಗುತ್ತಿದೆ. ಆ ಕುರೂಪದಲ್ಲಿನ ಕೋಮುವಾದಿತನ ಮತ್ತು ಭಯೋತ್ಪಾದನೆ ಸಲ್ಲದು. ಧರ್ಮಗಳ ಆಚಾರ-ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಗುರು ಗೋವಿಂದ ಭಟ್ಟ ಮತ್ತು ಶಿಶುನಾಳ ಶರೀಫರ ಗುರು-ಶಿಷ್ಯ ಸಂಬಂಧ ಮನುಕುಲಕ್ಕೆ ಸಂದೇಶವಾಗಬೇಕು ಎಂದು ಹೇಳಿದರು.

ಹಿರಿಯ ಕವಿ ಚೆನ್ನವೀರ ಕಣವಿ ಮಾತನಾಡಿ, ರಸಾಯನಕ್ಕೆ ಎಲ್ಲ ಹಣ್ಣುಗಳನ್ನು ಹಾಕಿದಂತೆ ಶರೀಫರ ತತ್ವಪದಗಳಲ್ಲಿ ಎಲ್ಲ ವಿಷಯಗಳಿದ್ದರೂ ಅವುಗಳ ರುಚಿ ಬೇರೆಯೇ ಆಗಿರುತ್ತದೆ. ಸೂಫಿ, ಶಿಶುನಾಳಧೀಶನ ಅಂಕಿತ, ಅಲ್ಲಮನ ಬೆಡಗಿನ ವಚನಗಳು ಎಲ್ಲವೂ ಅವರ ತತ್ವಪದಗಳಲ್ಲಿ ಇವೆ. ಆದರೆ ಎಲ್ಲಿಯೂ ಮೂಲ ಗುಣ ಕಳೆದುಕೊಳ್ಳುವುದಿಲ್ಲ ಎಂದರು.

ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿಡಸೋಸಿಯ ಶಿವಲಿಂಗೇಶ್ವರ ಸ್ವಾಮೀಜಿ, ಬಾಷಾ ಪೀರ, ಭಾರತೀಯ ಸೇನೆ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಗುರುಜಿತ್‌ಸಿಂಗ್‌  ಲ್ಲೋನ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಕೃವಿವಿ ಕುಲಪತಿ ಮಹದೇವ ಚೆಟ್ಟಿ, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಪಾಲ್ಗೊಂಡಿದ್ದರು. ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಸ್ವಾಗತಿಸಿದರು. ಸ್ಥಳೀಯ ಕಲಾವಿದರು ಶರೀಫರ ತತ್ವ ಪದಗಳನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳು ನೃತ್ಯ ಪ್ರಸ್ತುತಪಡಿಸಿದರು.

Advertisement

ಹಳ್ಳು ಕಡಿದಂಗಾತು: ಪಾಪುಗೆ ಚಂಪಾ ತಿರುಗೇಟು
ನೆರೆಯ ಎಲ್ಲ ರಾಜ್ಯಗಳಲ್ಲಿನ ಮುಸ್ಲಿಂ ಬಾಂಧವರು ಅಲ್ಲಿನ ಸ್ಥಳೀಯ ಭಾಷೆಯಲ್ಲೇ ಮಾತನಾಡುತ್ತಾರೆ. ಕರ್ನಾಟಕದಲ್ಲಿ ಸಹ ಇಂತಹ ಪರಂಪರೆ ಪ್ರಾರಂಭವಾಗಬೇಕು. ಈ ಕೆಲಸಕ್ಕೆ ಧರ್ಮ ಗುರುಗಳೇ ಕರೆ ನೀಡಬೇಕು ಎಂದು ನಾಡೋಜ ಡಾ| ಪಾಟೀಲ ಪುಟ್ಟಪ್ಪ ಹೇಳಿದರು. ಆದರೆ ಇದಕ್ಕೆ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದ ಚಂಪಾ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಧರ್ಮ ಗುರುಗಳು ಅವರವರ ಭಾಷೆಯಲ್ಲಿ ತಮ್ಮ ಸಂದೇಶ ನೀಡಿದರು. ಆದರೆ ಮುಸ್ಲಿಮರು ಕನ್ನಡ ಮಾತನಾಡಬೇಕು ಎಂದು ಹೇಳಿದ ಪರಮಪೂಜ್ಯ ಹಿರಿಯರ ಮಾತು ಹಳ್ಳು ಕಡಿದಂಗಾಯಿತು. ಈ ಸಂದರ್ಭದಲ್ಲಿ ಅವರು ಈ ರೀತಿ ಮಾತನಾಡಬಾರದಿತ್ತು ಎಂದು ಹೇಳಿದರು.

ಧಾರವಾಡ ಸಂಗೀತ, ಸಾಹಿತ್ಯದಂತೆ ಸಂಘರ್ಷದ ನಗರವೂ ಆಗಿದೆ. ಬರೀ ಸಂಘರ್ಷ ಅಂದರೆ ಅನುಸಂಧಾನವೂ ಆಗಲಿದೆ. ಎರಡು ವಿಭಿನ್ನ ವಿಚಾರದ ವ್ಯಕ್ತಿಗಳು ಕುಳಿತು ತಮ್ಮ ವಿಚಾರ ಮಂಡಿಸಿ ಒಮ್ಮತಕ್ಕೆ ಬರಲು ಸೂಕ್ತ ವಾತಾವಾರಣ ಇಲ್ಲಿದೆ ಎಂದು ಸಾಹಿತಿ ಚಂಪಾ ಪರೋಕ್ಷವಾಗಿ ಸಮ್ಮೇಳನ ಸ್ಥಳ ನಿಗದಿ ಕುರಿತು ಟಾಂಗ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next