ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವೃಷಭ ಮಾಸದ 10ನೇ ದಿನ ಪತ್ತನಾಜೆ (ಹತ್ತನಾವಧಿ) ಪ್ರಯುಕ್ತ ಮೇ 25ರಂದು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಸ್ವಾಮಿಗೆ ರಂಗ ಪೂಜೆ, ಬಲಿ ಉತ್ಸವ, ವಸಂತ ಪೂಜೆ, ಅಷ್ಟಾವಧಾನ ಸೇವೆ ನಡೆದು, ಧ್ವಜಮರ ಅವರೋಹಣದೊಂದಿಗೆ ಶ್ರೀ ದೇವರ ಉತ್ಸವ ಮೂರ್ತಿ ಗರ್ಭ ಗುಡಿ ಪ್ರವೇಶಿಸುವ ಮೂಲಕ ಉತ್ಸವ ನೆರವೇರಿತು.
ಮುಂದಿನ ಕಾರ್ತಿಕ ಮಾಸದ ದೀಪಾವಳಿಯವರೆಗೆ ಕ್ಷೇತ್ರದಲ್ಲಿ ಯಾವುದೇ ವಿಶೇಷ ಸೇವೆಗಳು, ಉತ್ಸವ ಗಳು ನಡೆಯುವುದಿಲ್ಲ.
ಧರ್ಮಸ್ಥಳ ಮೇಳದ ತಿರುಗಾಟ ಸಮಾಪ್ತಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ತಿರುಗಾಟ ಪತ್ತನಾಜೆಯಂದು ಸಮಾಪನಗೊಂಡಿತು. ಮೇಳದ ಶ್ರೀ ಮಹಾಗಣಪತಿ ದೇವರನ್ನು ಮೇ 25ರಂದು ಸಂಜೆ ಬಿಡಾರದ ಮಣೆಗಾರರ ಮನೆಯಿಂದ ವೈಭವ ಪೂರ್ಣ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಅಲಂಕೃತ ಶ್ರೀ ಮಹಾಗಣಪತಿ ದೇವ ರನ್ನು ಸಕಲ ಗೌರವಗಳೊಂದಿಗೆ ನರ್ತನ ಸೇವೆಯಲ್ಲಿ ಕರೆತರಲಾಯಿತು.
ಕ್ಷೇತ್ರದ ಆನೆಗಳು, ಬಸವ, ಹೂವಿನ ಕೋಲು, ವಾದ್ಯ ಮೇಳ, ಚೆಂಡೆ ಮೇಳ, ಶಂಖ ಜಾಗಟೆ ವಾದನಗಳೊಂದಿಗೆ ರಥಬೀದಿಯಲ್ಲಿ ಸಾಗಿಬಂದು ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಅಮ್ಮನವರ ಸನ್ನಿಧಿ ಮುಂಭಾಗದಲ್ಲಿ ದರ್ಶನ ಸೇವೆ ನಡೆಸಿ ಬಳಿಕ ಛತ್ರ ಮಹಾಗಣಪತಿ ಗುಡಿಗೆ ಪ್ರವೇಶಿಸಲಾಯಿತು.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಮೇಳದ ಯಜಮಾನ ಡಿ. ಹಷೇìಂದ್ರ ಕುಮಾರ್, ಹೆಗ್ಗಡೆ ಕುಟುಂಬಸ್ಥರು, ಕ್ಷೇತ್ರ ಹಾಗೂ ಮೇಳದ ಸಿಬಂದಿ ವರ್ಗ ಹಾಗೂ ಭಕ್ತರು ಭಾಗವಹಿಸಿದ್ದರು.