ಹೊಸದಿಲ್ಲಿ: ಝಾರ್ಖಂಡ್‌ನ ಧನ್‌ಬಾದ್ ನಗರದಲ್ಲಿ ಬುಧವಾರ ನಡೆದಿದ್ದ “ಹಿಟ್-ಆ್ಯಂಡ್-ರನ್’ ಪ್ರಕರಣಲ್ಲಿ ಮೃತರಾದ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಉತ್ತಮ್ ಆನಂದ್‌ರ ಪ್ರಕರಣವನ್ನು ತಾವು ಗಮನಿಸುತ್ತಿದ್ದು, ಇದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾ| ಆನಂದ್‌ರವರ ಸಾವಿನ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸ್ವಯಂಪ್ರೇರಿತ ವಿಚಾರಣೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಆಗ್ರಹಿಸಿದ ಹಿನ್ನೆಲೆಯಲ್ಲಿ, ಗುರುವಾರ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು. ಕಲಾಪದ ವೇಳೆ ಮಾತನಾಡಿದ ಸಿಜೆಐ ಎನ್.ವಿ. ರಮಣ, “ಝಾರ್ಖಂಡ್ ಹೈಕೋರ್ಟ್‌ನಲ್ಲಿ ಈ ಪ್ರಕರಣ ದಾಖಲಾಗಿದೆ. ನಾನೀಗಾಗಲೇ ಅಲ್ಲಿನ ಮುಖ್ಯ ನ್ಯಾಯಮೂರ್ತಿ ಜತೆಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪ್ರಕರಣವನ್ನು ಸೂಕ್ತ ರೀತಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ’ ಎಂದರು.
ಆಟೋ ಢಿಕ್ಕಿ ವೀಡಿಯೋ: ಸಿಸಿಟಿವಿ ದೃಶ್ಯಗಳ ಪ್ರಕಾರ, ಬುಧವಾರ ಬೆಳಗಿನ ಜಾವ ಧನಬಾದ್‌ನ ರಸ್ತೆಯ ಪಕ್ಕ ಜಾಗಿಂಗ್ ಮಾಡುತ್ತಿದ್ದ ನ್ಯಾ| ಆನಂದ್ ಅವರಿಗೆ ಹಿಂಬದಿಯಿಂದ ವೇಗವಾಗಿ ಬಂದ ಪ್ಯಾಸೆಂಜರ್ ಆಟೋ ಢಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದೆ. ಇದರ ಆಧಾರದಲ್ಲಿ, ಇದನ್ನು ಆಕಸ್ಮಿಕ ಅಪಘಾತ ಪ್ರಕರಣವೆಂದು ದಾಖಲಿಸಿಕೊಂಡಿದ್ದ ಪೊಲೀಸರು, ಅನಂತರ ಇದನ್ನು ಕೊಲೆ ಪ್ರಕರಣವೆಂದು ಬದಲಾಯಿಸಿದ್ದಾರೆ. ಮತ್ತೂಂದೆಡೆ, ಪ್ರಕರಣ ಮಾರ್ಪಾಟು ಮಾಡಲು ಪೊಲೀಸರು ಮಂದಗತಿ ಅನುಸರಿಸಿದ್ದಾಗಿ ನ್ಯಾ| ಆನಂದ್ ಕುಟುಂಬ ಸದಸ್ಯರು ಆರೋಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಝಾರ್ಖಂಡ್ ಮುಖ್ಯ ನ್ಯಾಯಮೂರ್ತಿ ರವಿ ರಂಜನ್, “ಈ ಆರೋಪಗಳು ನಿಜವೇ ಆಗಿದ್ದಲ್ಲಿ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಲಿ’ ಎಂದಿದ್ದಾರೆ.
ಇಬ್ಬರ ಬಂಧನ: ಪ್ರಕರಣ ಸಂಬಂಧ, ಝಾರ್ಖಂಡ್ ಪೊಲೀಸ್ ವಿಶೇಷ ದಳ ಅಪಘಾತ ನಡೆದಾಗ ಆಟೋದಲ್ಲಿದ್ದ ಚಾಲಕ ಹಾಗೂ ಆತನ ಜತೆಯಿದ್ದ ಇನ್ನಿಬ್ಬರನ್ನು ಬಂಧಿಸಿದೆ. ತನಿಖೆಯಲ್ಲಿ ನ್ಯಾ| ಆನಂದ್ ಅವರಿಗೆ ಢಿಕ್ಕಿ ಹೊಡೆದ ಆಟೋ ಕೆಲವೇ ಗಂಟೆಗಳ ಹಿಂದೆ ಧನಬಾದ್‌ನಲ್ಲಿ ಕಳುವಾಗಿದ್ದ ಅಂಶ ಬಹಿರಂಗವಾಗಿದ್ದು, ಪ್ರಕರಣ ಜಟಿಲವಾಗಿದೆ. ಇನ್ನು, ನ್ಯಾಯಮೂರ್ತಿಗಳ ಕೊಲೆಗೆ ಅವರು ನಿರ್ವಹಿಸುತ್ತಿದ್ದ ನ್ಯಾಯಾಲಯದ ಪ್ರಕರಣಗಳೇ ಕಾರಣವಿರಬಹುದೆಂಬ ಅನುಮಾನವಿದ್ದು ಪೊಲೀಸರು ಆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.