Advertisement

ಶೂಟಿಂಗ್‌ ಮುಗಿದ ಬಳಿಕ ಕಾರ್ಮಿಕರಿಗೆ ವಿಶೇಷ ಉಡುಗೊರೆ ಕೊಟ್ಟ ಧನಂಜಯ್‌

01:51 PM Oct 23, 2020 | Suhan S |

ಸಾಮಾನ್ಯವಾಗಿ ಸಿನಿಮಾಗಳ ಶೂಟಿಂಗ್‌ ಮುಗಿಯುತ್ತಿದ್ದಂತೆ, ಅನೇಕ ನಿರ್ಮಾಪಕರು ತಮ್ಮ ಚಿತ್ರದಲ್ಲಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಮತ್ತು ಕಾರ್ಮಿಕರಿಗೂ, ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಾರೆ. ಆದರೆ ಈ ವಿಷಯದಲ್ಲಿ ನಟ ಕಂ ನಿರ್ಮಾಪಕ ಡಾಲಿ ಧನಂಜಯ್‌ ತಮ್ಮ ವಿಭಿನ್ನ ಕೆಲಸದ ಮೂಲಕ ಅನೇಕ ನಿರ್ಮಾಪಕರಿಗೆ ಮಾದರಿಯಾಗಿದ್ದಾರೆ.

Advertisement

ಹೌದು, ಇತ್ತೀಚೆಗಷ್ಟೇ ನಟ ಡಾಲಿ ಧನಂಜಯ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಮತ್ತು ಚೊಚ್ಚಲ ಬಾರಿಗೆ ನಿರ್ಮಾಣ ಮಾಡುತ್ತಿರುವ “ಬಡವ ರಾಸ್ಕಲ್‌’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿತು. ಈ ವೇಳೆ ಧನಂಜಯ್‌ ತಮ್ಮ ಚಿತ್ರದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಬಹುಕಾಲ ನೆನಪಿನಲ್ಲಿ ಉಳಿಯುವಂಥ ಕೆಲಸ ಮಾಡಿದ್ದಾರೆ. ತಮ್ಮ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನಬಳಕೆಯ ವಸ್ತುಗಳಾದ ಕುಕ್ಕರ್‌, ತವ, ಹಾಟ್‌ ವಾಟರ್‌ ಬಾಟಲ್‌ ಮುಂತಾದ ಅಗತ್ಯ ವಸ್ತುಗಳನ್ನು ಉಡುಗೊರೆ ನೀಡಿ, ತಮ್ಮ ಚಿತ್ರದ ಚಿತ್ರೀಕರಣವನ್ನು ಸಂತಸದಿಂದ ಪೂರ್ಣಗೊಳಿಸಿದ್ದಾರೆ.

ಇನ್ನು ಇಂಥದ್ದೊಂದು ಕೆಲಸದ ಮೂಲಕ ಚಿತ್ರೀಕರಣ ಪೂರ್ಣಗೊಳಿಸಿರುವುದರ ಬಗ್ಗೆ ಮಾತನಾಡುವ ಧನಂಜಯ್‌, “ಚಿತ್ರರಂಗದ ಬಹುತೇಕ ಕಾರ್ಮಿಕರ ಜೀವನ ಶೂಟಿಂಗನ್ನು ಅವಲಂಭಿಸಿರುತ್ತದೆ. ಶೂಟಿಂಗ್‌ ಇಲ್ಲದಿದ್ದರೆ ಅನೇಕರಿಗೆ ಕೆಲಸವೇ ಇರುವುದಿಲ್ಲ. ಅದರಲ್ಲೂ ಕೊರೊನಾದಿಂದಾಗಿ ಸುಮಾರು ಐದಾರು ತಿಂಗಳು ಸಿನಿಮಾವನ್ನೇ ನಂಬಿಕೊಂಡಿದ್ದ ಅನೇಕ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗಿತ್ತು. ಇದರಿಂದ ಅನೇಕರಿಗೆ ಜೀವನ ನಿರ್ವಹಣೆ ಮಾಡೋದೇ ಕಷ್ಟವಾಗಿತ್ತು. ಇಂಥ ಸಮಯದಲ್ಲೂ ನಮ್ಮ ಅಣ್ಣ ಪ್ರೊಡಕ್ಷನ್‌ ಮಾಡ್ತಿದ್ದಾರೆ ಅಂಥ ಅದೆಷ್ಟೋ ಹುಡುಗರು ನಮ್ಮ ಸಿನಿಮಾಕ್ಕೆ ಹಗಲು – ರಾತ್ರಿ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಅವರ ಪ್ರೀತಿಗೆ ಬೆಲೆ ಕಟ್ಟಲಾಗದು. ಸಿನಿಮಾದ ಶೂಟಿಂಗ್‌ ಮುಗಿಯುವ ವೇಳೆ ಅವರಿಗೆ ಏನಾದ್ರೂ ಕೊಡಬೇಕು ಅಂಥ ಅನಿಸಿತು. ಅದಕ್ಕಾಗಿ ದಿನನಿತ್ಯದ ಬಳಕೆಗೆ ಅನುಕೂಲವಾಗುವಂಥ ಕೆಲ ವಸ್ತುಗಳನ್ನು ಅವರಿಗೆ ನೀಡಿದ್ದೇವೆ. ಇದು ನಮ್ಮ ಖುಷಿಗಾಗಿ ಮಾಡಿದ ಕೆಲಸವಷ್ಟೇ’ ಎನ್ನುತ್ತಾರೆ.

ಒಟ್ಟಾರೆ ಧನಂಜಯ್‌ ಮಾಡಿರುವ ಇಂಥದ್ದೊಂದು ಅಪರೂಪದ ಕೆಲಸದಿಂದ ಚಿತ್ರಕ್ಕಾಗಿ ದುಡಿದ ಕಾರ್ಮಿಕರು ಫ‌ುಲ್‌ ಖುಷ್‌ ಆಗಿದ್ದಾರೆ. ಚಿತ್ರರಂಗದ ಅನೇಕರು ಧನಂಜಯ್‌ ಅವರ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಇನ್ನು “ಬಡವ ರಾಸ್ಕಲ್‌’ ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಚಿತ್ರವಾಗಿದ್ದು, ಧನಂಜಯ್‌ ಇದರಲ್ಲಿಮಧ್ಯಮ ವರ್ಗದ ಕುಟುಂಬದ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಮೈಸೂರು, ಪಾಂಡವಪುರ ಸುತ್ತಮುತ್ತ ಸುಮಾರು 60 ದಿನಗಳ ಕಾಲ”ಬಡವ ರಾಸ್ಕಲ್‌’ ಶೂಟಿಂಗ್‌ ನಡೆಸಲಾಗಿದೆ. “ಬಡವ ರಾಸ್ಕಲ್‌’ ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕರಾದ ವಿಜಯ ಪ್ರಸಾದ್‌ ಮತ್ತು “ಮಠ’ ಗುರು ಪ್ರಸಾದ್‌ ಕೂಡ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಈ ಹಿಂದೆ ಗುರುಪ್ರಸಾದ್‌ ಹಾಗೂ ಧನಂಜಯ್‌ ನಡುವೆ “ಎರಡನೇ ಸಲ’ ಸಿನಿಮಾ ವಿಚಾರದಲ್ಲಿ ಮನಸ್ತಾಪವಾಗಿತ್ತು. ಒಬ್ಬರ ವಿರುದ್ಧಇನ್ನೊಬ್ಬರು ಹೇಳಿಕೆಗಳನ್ನು ಕೊಟ್ಟುಕೊಂಡು ಮುನಿಸಿಕೊಂಡಿದ್ದರು. ಆದರೆ, ಈಗ “ಬಡವ ರಾಸ್ಕಲ್‌’ ಚಿತ್ರದಲ್ಲಿ ಗುರು-ಶಿಷ್ಯ ಇಬ್ಬರೂ ಒಟ್ಟಾಗಿದ್ದಾರೆ. ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next