ಹೀರೋ ಆಗಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ, ಈಗ ವಿಲನ್ ಆಗಿಯಾದರೂ ಸಿಗುತ್ತಾ ನೋಡೋಣ … ಸದ್ಯ ಇಂತಹ ಮನಸ್ಥಿತಿಯಲ್ಲಿರುವ ನಟ ಧನಂಜಯ್ ಅವರಿಗೆ ಈಗ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ “ಟಗರು’ ಚಿತ್ರ. ಹೌದು, ಸೂರಿ ನಿರ್ದೇಶನದ, ಶಿವರಾಜಕುಮಾರ್ ನಾಯಕರಾಗಿರುವ ಚಿತ್ರದಲ್ಲಿ ಧನಂಜಯ್ ವಿಲನ್ ಆಗಿ ನಟಿಸಿದ್ದಾರೆ.
“ಡೈರೆಕ್ಟರ್ ಸ್ಪೆಷಲ್’ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟ ಧನಂಜಯ್, ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ ಇಲ್ಲಿವರೆಗೆ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಕ್ಕಿಲ್ಲ. ಈಗ “ಟಗರು’ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಯಾದ “ಟಗರು’ ಟ್ರೇಲರ್‌ನಲ್ಲಿ ಧನಂಜಯ್ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ.
ಟ್ರೇಲರ್ ನೋಡಿದ ಚಿತ್ರ ಪ್ರೇಮಿಗಳು ಸೋಶಿಯಲ್ ಮೀಡಿಯಾದಲ್ಲಿ ಧನಂಜಯ್ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. “ನಿಮ್ಮ ಲುಕ್ ಸಖತ್ ಟೆರಿಫಿಕ್ ಆಗಿದೆ. ಈ ಪಾತ್ರ ನಿಮಗೆ ಹೊಂದಿಕೊಂಡಿದೆ’ ಎಂದು ಸಂದೇಶ ರವಾನಿಸುವ ಮೂಲಕ ಧನಂಜಯ್‌ಗೂ ಚಿತ್ರದ ಮೇಲೆ ವಿಶ್ವಾಸ ಮೂಡಿದೆ.
ಈ ಚಿತ್ರದಲ್ಲಿ ಧನಂಜಯ್ ಡಾಲಿ ಎಂಬ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಸೂರಿ ನಿರ್ದೇಶನದ ಸಿನಿಮಾ ಇದಾಗಿರುವುದರಿಂದ ಪಕ್ಕಾ ರಗಡ್ ಆಗಿರುವ ಜೊತೆಗೆ ಸೂರಿ ಶೈಲಿಯಲ್ಲೇ ಮೂಡಿಬಂದಿದೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಶಿವರಾಜಕುಮಾರ್ ಈ ಚಿತ್ರದಲ್ಲಿ ಲಾಂಗ್ ಹಿಡಿದಿದ್ದಾರೆ.
ಶಿವಣ್ಣ ಲಾಂಗ್ ಹಿಡಿದರೆ ಸಿನಿಮಾ ಹಿಟ್ ಆಗುತ್ತದೆ ಎಂಬ ಮಾತು ಗಾಂಧಿನಗರದಲ್ಲಿದೆ. ಈ ಚಿತ್ರದಲ್ಲಿ ಶಿವಣ್ಣ ಕೂಡಾ ಲಾಂಗ್ ಬೀಸಿದ್ದಾರೆ. ಅಂದಹಾಗೆ, ಶಿವಣ್ಣ ಇಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಪೊಲೀಸ್ ಆಫೀಸರ್‌ಗೂ ಲಾಂಗ್‌ಗೂ ಎತ್ತಣಿಂದೆತ್ತ ಸಂಬಂಧ ಎಂಬುದನ್ನು ತಿಳಿಯಲು ಜನವರಿವರೆಗೆ ಕಾಯಲೇಬೇಕು.