ಸಾಗರ: ಭಾರತ ಜಗತ್ತಿನ ದೃಷ್ಟಿಯಲ್ಲಿ ಅಗ್ರಗಣ್ಯ ರಾಷ್ಟ್ರವಾಗಬೇಕು ಎನ್ನುವ ಪರಿಕಲ್ಪನೆಯಲ್ಲಿ ದೇಶದ ಲಕ್ಷಾಂತರ ಕಾರ್ಯಕರ್ತರು ತುರ್ತು ಪರಿಸ್ಥಿತಿ ವಿರೋಧಿಸಿ ಜೈಲಿಗೆ ಹೋಗಿದ್ದಾರೆ. ಇಂತಹ ಪ್ರಜಾಯೋಧರಿಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವಂತಹ ಪಿಂಚಣಿ ಯೋಜನೆಯನ್ನು ಕರ್ನಾಟಕ ಸರ್ಕಾರದಿಂದಲೂ ಆರಂಭಿಸಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಮಾಜಿ ಸಭಾಪತಿ, ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿದ ಡಾ. ಡಿ.ಎಚ್.ಶಂಕರಮೂರ್ತಿ ತಿಳಿಸಿದರು.
ಇಲ್ಲಿನ ಬಾಪಟ್ ಕಲ್ಯಾಣ ಮಂಟಪದಲ್ಲಿ ಶನಿವಾರ ಸೀತಾಬಾಯಿ ರಾಮರಾವ್ ಬಾಪಟ್ ಟ್ರಸ್ಟ್, ಸೇವಾಸಾಗರ, ಜೋಷಿ ಫೌಂಡೇಶನ್ ಮತ್ತು ಮಾತೃಭೂಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತುರ್ತು ಪರಿಸ್ಥಿತಿ-1975 ಅವಲೋಕನ ಮತ್ತು ಗೌರವಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ್, ಒರಿಸ್ಸಾ ಸೇರಿದಂತೆ ಐದಾರು ರಾಜ್ಯಗಳಲ್ಲಿ ಇಂತಹ ಗೌರವಧನ ನೀಡುವ ಯೋಜನೆ ಜಾರಿಯಲ್ಲಿದೆ ಎಂಬುದನ್ನು ಕೇಳಿದ್ದೇವೆ. ತುರ್ತು ಪರಿಸ್ಥಿತಿ ಹೋರಾಟದಲ್ಲಿ ಪಾಲ್ಗೊಂಡು ವರ್ಷಗಟ್ಟಲೆ ಜೈಲು ವಾಸ ಅನುಭವಿಸಿ ಈಗಲೂ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವವರು ಇದ್ದಾರೆ. ಅಂತವರಿಗೆ ಪಿಂಚಣಿ ಸಿಗಬೇಕಾದರೆ ಸಾಮೂಹಿಕವಾಗಿ ತುರ್ತು ಪರಿಸ್ಥಿತಿಯ ಪ್ರಜಾ ಯೋಧರಿಗೆ ಗೌರವ ಧನ ಯೋಜನೆ ಜಾರಿಯಾಗಬೇಕು. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ನನಗಿರುವ ಪ್ರಭಾವಗಳ ಹಿನ್ನೆಲೆಯಲ್ಲಿ ನನ್ನ ನೇತೃತ್ವದಲ್ಲಿಯೇ ಅಂತಹ ಪ್ರಯತ್ನ ನಡೆದಿದೆ ಎಂದು ಸ್ಪಷ್ಟಪಡಿಸಿದರು.
ಸದ್ಯ ಸಮಾಜಕ್ಕೆ ಬಡಿದಿರುವ ದೊಡ್ಡ ಸಿಡಿಲು ಎಂದರೆ ಭ್ರಷ್ಟಾಚಾರ. ಭವ್ಯ ಭಾರತ ನಿರ್ಮಾಣವಾಗಬೇಕಾದರೆ ಭ್ರಷ್ಟಾಚಾರರಹಿತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕಂಕಣಬದ್ಧರಾಗಬೇಕು. ಅಂದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ಮಾಡಿದವರಲ್ಲಿ ಬಹುತೇಕರಿಗೆ ದೈಹಿಕ ಶಕ್ತಿ ಕುಂದಿರಬಹುದು. ಆದರೆ ನಮ್ಮಲ್ಲಿ ಇನ್ನೂ ಮಾನಸಿಕ ಶಕ್ತಿ ಇದೆ. ನಮ್ಮ ಮಾನಸಿಕ ಶಕ್ತಿಯನ್ನು ಬಳಕೆ ಮಾಡಿಕೊಂಡು ಭವ್ಯ ಭಾರತ ನಿರ್ಮಾಣಕ್ಕೆ ಮುಂದಡಿ ಇರಿಸಬೇಕಾಗಿದೆ ಎಂದರು.
ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸವನ್ನು ಅನುಭವಿಸಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ತುರ್ತು ಪರಿಸ್ಥಿತಿಯ ಹೋರಾಟದ ಆರಂಭಕ್ಕೂ ಭ್ರಷ್ಟಾಚಾರವೇ ಮೂಲ ವಿಷಯವಾಗಿತ್ತು. ಆ ದಿನಗಳಲ್ಲಿಯೂ ಗುಜರಾತ್‌ನ ಹಾಸ್ಟೆಲ್ ಒಂದರಲ್ಲಿ ನಡೆದ ಭ್ರಷ್ಟಾಚಾರದ ವಿಷಯ ಮುಂದಿಟ್ಟುಕೊಂಡು ಅಲ್ಲಿನ ವಿದ್ಯಾರ್ಥಿಗಳು ಹೋರಾಟ ಆರಂಭಿಸಿದರು. ಒಂದು ಹಾಸ್ಟೆಲ್‌ನಿಂದ ಅದು ನೂರಾರು ಹಾಸ್ಟೆಲ್‌ಗಳಿಗೆ ವಿಸ್ತರಿಸಿ ಅವತ್ತಿನ ಗುಜರಾತ್ ಮುಖ್ಯಮಂತ್ರಿ ರಾಜೀನಾಮೆ ನೀಡುವ ಹಂತ ತಲುಪಿತು. ಮುಂದೆ ಆ ಹೋರಾಟ ದೇಶಾದ್ಯಂತ ಹಬ್ಬುವ ಆಯಾಮ ತೆಗೆದುಕೊಂಡಿತು ಎಂದರು.
ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದವರಿಗೆ ಅಭಿನಂದಿಸಿದರು. ಶಿಕ್ಷಣ ತಜ್ಞ ಅ.ಪು.ನಾರಾಯಣಪ್ಪ ಆಶಯದ ಮಾತುಗಳನ್ನಾಡಿದರು. ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿನಂದನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಹಿರಿಯ ಕಾರ್ಮಿಕ ಮುಖಂಡ ಡಿ.ಕೆ.ಸದಾಶಿವ, ಬಿ.ಎಚ್.ರಾಘವೇಂದ್ರ, ಅಬಸೆ ದಿನೇಶಕುಮಾರ್ ಜೋಷಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ 50 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಜಯ ಆರ್. ಪೈ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಾಜೇಂದ್ರ ಪೈ ಸ್ವಾಗತಿಸಿದರು. ಮ.ಸ.ನಂಜುಂಡಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ನಾರಾಯಣಮೂರ್ತಿ ಕಾನುಗೋಡು ವಂದಿಸಿದರು. ಗಣೇಶಪ್ರಸಾದ್ ಕೆ.ಆರ್. ನಿರೂಪಿಸಿದರು.