Advertisement
ಅವಿಶ್ವಾಸ ನಿರ್ಣಯದ ಮೇಲೆ ನಡೆದ ಮತದಾನದಲ್ಲಿ ನಿರ್ಣಯದ ಪರ 36 ಮತಗಳು ಬಂದರೆ, ನಿರ್ಣಯದ ವಿರುದ್ಧ 37 ಮತಗಳು ಬಿದ್ದವು. ಹೀಗಾಗಿ ಒಂದು ಮತದ ಅಂತರದಿಂದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿತು. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ವಿಜಯಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಗೆದ್ದು ಪಕ್ಷೇತರ ಸದಸ್ಯರಾಗಿ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ವಿಧಾನಸಭೆಯಿಂದ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಗೆದ್ದಿದ್ದ ಬಿಜೆಪಿಯ ಡಿ.ಯು. ಮಲ್ಲಿಕಾರ್ಜುನ್ ಅವಿಶ್ವಾಸ ನಿರ್ಣಯದ ಪರ ಮತ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಬ್ಬರೂ ಅವಿಶ್ವಾಸ ನಿರ್ಣಯದ ವಿರುದ್ಧ ಮತ ಹಾಕಿದರು.
ಪ್ರಶ್ನೋತ್ತರ ಕಲಾಪ ಹಾಗೂ ಶೂನ್ಯ ವೇಳೆ ಬಳಿಕ ಸದಸ್ಯರ ತಲೆ ಎಣಿಸುವ ಮೂಲಕ ಅವಿಶ್ವಾಸ ನಿರ್ಣಯಕ್ಕೆ ಮತದಾನ ನಡೆಸಲಾಯಿತು. ಉಪಸಭಾಪತಿ ಮರಿತಿಬ್ಬೇಗೌಡ, ಮಧ್ಯಾಹ್ನ 1.35ಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಿದರು. ಮೊದಲು ಸದನದ ನಾಲ್ಕು ಬಾಗಿಲುಗಳನ್ನು ತೆರೆಸಿದ ಉಪಸಭಾಪತಿ, ಮೂರು ನಿಮಿಷಗಳ ಕಾಲ ಬೆಲ್ ಹಾಕಲಾಗುವುದು, ಈ ಅವಧಿಯಲ್ಲಿ ಹೊರಗೆ ಹೋಗಬೇಕಾದವರು ಹೋಗಬಹುದು. ಅದೇ ರೀತಿ ಒಳಬರಬೇಕಾದವರು ಬರಬಹುದು ಎಂದು ಪ್ರಕಟಿಸಿದರು.
ಮೂರು ನಿಮಿಷದ ಬಳಿಕ ಬಾಗಿಲುಗಳನ್ನು ಮುಚ್ಚಲಾಯಿತು. ಬಳಿಕ ಮೊದಲು ನಿರ್ಣಯದ ಪರ ಇದ್ದ ಸದಸ್ಯರ ತಲೆ ಎಣಿಕೆ ಮಾಡಲಾಯಿತು. ಅನಂತರ ವಿರುದ್ಧ ಇದ್ದವರ ಎಣಿಕೆ ಮಾಡಲಾಯಿತು. ನಿರ್ಣಯದ ಪರ 36 ಮತ್ತು ವಿರುದ್ಧ 37 ಮತಗಳು ಬಿದ್ದಿರುವುದರಿಂದ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ ಎಂದು ಉಪಸಭಾಪತಿ ಪ್ರಕಟಿಸಿದರು. ಆಗ ಬಿಜೆಪಿ ಸದಸ್ಯರು ಸದನದಲ್ಲೇ ಸಂಭ್ರಮಿಸಿದರು.
Related Articles
ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ವಿರುದ್ಧ ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಆಗಿದ್ದರಿಂದ ಅವರಿಗೆ ಸದನದ ವಿಪಕ್ಷಗಳ ಕಡೆಯ ಎರಡನೇ ಸಾಲಿನಲ್ಲಿ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ ಅವರ ಪಕ್ಕದಲ್ಲಿ ಆಸನ ವ್ಯವಸ್ಥೆ ಮಾಡಿಕೊಡಲಾಗಿತ್ತು. ಶೂನ್ಯ ವೇಳೆಯಲ್ಲಿ ವಿಪಕ್ಷಗಳ ಗ್ಯಾಲರಿಯ ಕಡೆ ಇರುವ ಬಾಗಿಲಿನಿಂದ ನೀಲಿ ಬಣ್ಣದ ಸೂಟಿನಲ್ಲಿ ಸದನಕ್ಕೆ ಪ್ರವೇಶಿಸಿದ ಶಂಕರಮೂರ್ತಿ ತಮಗೆ ನಿಗದಿಪಡಿಸಿದ ಜಾಗದಲ್ಲಿ ಆಸೀನರಾದರು. ಸಾಮಾನ್ಯವಾಗಿ ಆ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕೊನೆಯ ಸಾಲಿನಲ್ಲಿ ತಾತ್ಕಾಲಿಕ ಆಸನದ ವ್ಯವಸ್ಥೆ ಮಾಡಿಕೊಡಲಾಗಿತ್ತು.
Advertisement