Advertisement

ಮಾತು-ಕೃತಿ ಮುಖಾಮುಖಿಯಾದಾಗ…

11:29 PM Oct 23, 2021 | Team Udayavani |

ಉಡುಪಿಯ ಕೃಷ್ಣನ ನಾಡಿನಲ್ಲೊಂದು ಹೆಸರಾಂತ ಸಾಹಿತಿಯೊಬ್ಬರ ಉಪನ್ಯಾಸ ಏರ್ಪಾಡಾಗಿತ್ತು. ಅತಿಥಿಗಳು ವೇದಿಕೆ ಏರಿದ ಬಳಿಕ ಪೋಸ್ಟ್‌ ಮ್ಯಾನ್‌ ಟೆಲಿಗ್ರಾಮ್‌ ಒಂದನ್ನು ಸಾಹಿತಿಗಳ ಕೈಗಿತ್ತ. ಟೆಲಿಗ್ರಾಮ್‌ ಓದಿ ಮಡಚಿ ಕಿಸೆಗೆ ಹಾಕಿಕೊಂಡರು. ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುವ “ಸ್ಥಿತಪ್ರಜ್ಞತೆ’ ಕುರಿತು ಗೀತೋಪದೇಶದ ಸಾರವನ್ನು ನಿರರ್ಗಳವಾಗಿ ಉಪನ್ಯಾಸ ಮಾಡಿದರು..

Advertisement

ಟೆಲಿಗ್ರಾಮ್‌ ಅವರ ಹಿರಿಯ ಮಗನ ಸಾವಿನ ಸುದ್ದಿ ಹೊತ್ತು ತಂದಿತ್ತು. ಸ್ಥಿತಪ್ರಜ್ಞೆಯನ್ನು ಪ್ರಾಕ್ಟಿಕಲ್‌ ಆಗಿ ಅನುಭವಿಸಿ ಸಾರಿದ ಸಾಹಿತಿ ದೇವುಡು ನರಸಿಂಹಶಾಸ್ತ್ರಿ.

ಉಡುಪಿಗೆ ಮಡದಿ ಗೌರಮ್ಮ, ಇನ್ನೊಬ್ಬ ಸಾಧಕ ಬೆಳಗೆರೆ ಕೃಷ್ಣ ಶಾಸ್ತ್ರಿಗಳೂ ಬಂದಿದ್ದರು. ಕಾಲಮಾನವನ್ನು ತಾಳೆ ಹಾಕಿ ನೋಡಿದಾಗ ಇದು 1952-53ರ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಮೊದಲ ಪರ್ಯಾಯವೆಂದು ತಿಳಿಯುತ್ತದೆ.

ಟೆಲಿಗ್ರಾಂ ಬಂದಾಕ್ಷಣವೇ ಉಪನ್ಯಾಸದ ಬಳಿಕ ತುರ್ತು ಕಡೂರಿನವರೆಗೆ ಕಾರಿನಲ್ಲಿ ಬಿಡಲು ಸಂಘಟಕರಿಗೆ ದೇವುಡು ಹೇಳಿದರು. ಕಡೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ತೆರಳಿದರು. “ಉಪನ್ಯಾಸ ಹೇಗಿತ್ತು?’ ಎಂದು ದೇವುಡು ಕೇಳಿದಾಗ ಪತ್ನಿ “ಇಂತಹ ಉಪನ್ಯಾಸವನ್ನು ಹಿಂದೆಂದೂ ಕೇಳಿರಲಿಲ್ಲ’ ಎಂದುತ್ತರಿಸಿದರು. ತಂತಿ ಸಂದೇಶದಲ್ಲಿದ್ದ ಪುತ್ರ, ಚಿಂತಾಮಣಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದ ಡಿ.ಎನ್‌. ರಾಮುವಿನ ಸಾವಿನ ಸುದ್ದಿಯನ್ನು ಬಹಿರಂಗಪಡಿಸಿದ್ದು ರೈಲ್ವೇ ನಿಲ್ದಾಣ ತಲುಪಿದ ಬಳಿಕ. ಹೇಗೆ ಉಪನ್ಯಾಸ ಮಾಡಿದಿರಿ? ಎಂದಾಗ “ನನಗೆ ನಾನೇ ಸ್ಥಿತಪ್ರಜ್ಞೆ ಕುರಿತು ಉಪದೇಶ ಮಾಡಿಕೊಂಡೆ’ ಎಂದರು. ಕೃಷ್ಣ ಶಾಸ್ತ್ರಿಗಳು ಹೌಹಾರಿದರು. ಪತ್ನಿ ಗೌರಮ್ಮ ಮೂಛಿìತರಾದರು. ಆ ಹೊತ್ತಿಗೆ ಅಂತ್ಯ ಸಂಸ್ಕಾರವೂ ಮುಗಿದಿತ್ತು. ಕೃಷ್ಣ ಶಾಸ್ತ್ರಿಗಳು ಮನೆಗೆ ಮರಳುವಾಗ ದೇವುಡು ಹೇಳಿದ ಮಾತಿದು: “ಯಾರಿದ್ದು ಏನು ಮಾಡುವುದಿದೆ? ನೀವಿನ್ನು ಹೊರಡಿ’.

ಇಳಿವಯಸ್ಸಿನಲ್ಲಿ ಕಾಲಿಗೆ ಗಾಯವಾಗಿ ಕಾಲನ್ನೇ ಕತ್ತರಿಸಬೇಕಾಯಿತು. ಎರಡು ತಿಂಗಳು ಆಸ್ಪತ್ರೆಯಲ್ಲಿದ್ದಾಗ “ಮಹಾಕ್ಷತ್ರಿಯ’ ಕಾದಂಬರಿ ಸಿದ್ಧಗೊಂಡಿತ್ತು. ಬೆಂಗಳೂರು ಜಯನಗರದ ನಾಲ್ಕನೆಯ ಬ್ಲಾಕಿನ ಒಂದು ಚಿಕ್ಕ ಮನೆಯಲ್ಲಿ ಬಾಡಿಗೆಯಲ್ಲಿದ್ದರು. ಅಲ್ಲಿ ವಿಶ್ರಾಂತಿಯಲ್ಲಿದ್ದಾಗ ಕೃಷ್ಣಶಾಸ್ತ್ರಿಗಳು ಆರೋಗ್ಯ ವಿಚಾರಿಸಲು ಹೋದರು. “ಬಹುಶಃ ಅಜಗರನಾಗಿ ಪಟ್ಟಪಾಡಿನಲ್ಲಿ ನನ್ನ ಕಷ್ಟ ಏನೂ ಅಲ್ಲ. ಅವನ ಕತೆಯೇ ಮಹಾಕ್ಷತ್ರಿಯದಲ್ಲಿ ಬರೆದಿದ್ದೇನೆ. ಅದೇ ನನ್ನನ್ನು ಸಂತೈಸುತ್ತಿದೆ. ನಾಳೆಯಿಂದ ಯಾಜ್ಞವಲ್ಕರ ಕುರಿತಾದ “ಮಹಾದರ್ಶನ’ ಆರಂಭ. ಅಷ್ಟಾದರೆ ದೇವುಡು ನಿರ್ಗಮನ’ ಎನ್ನುತ್ತ ನಕ್ಕರು. “ಮಹಾದರ್ಶನ’ದ ಬಳಿಕ ದೇವುಡು ಅಸ್ತಮಿಸಿದರು.

Advertisement

ಇದನ್ನೂ ಓದಿ:ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಮಹಾಭಾರತದ ವನಪರ್ವದಲ್ಲಿ ಅಜಗರ ವೃತ್ತಾಂತವಿದೆ. ಚಂದ್ರವಂಶದಲ್ಲಿ ಹುಟ್ಟಿದ ನಹುಶ ಇಂದ್ರಪಟ್ಟವನ್ನು ಏರಿ ಅಲ್ಲಿ ಮಾಡಿದ ತಪ್ಪಿನಿಂದ ಅಜಗರ= ಹೆಬ್ಟಾವು ಆಗಿ ಭೂಲೋಕದಲ್ಲಿ ಹುಟ್ಟಿ ಪಾಂಡವರ ಕಾಲದವರೆಗೆ ಇದ್ದು ಭೀಮನಿಂದ ಮುಕ್ತಿ ಪಡೆದ ಕಥಾನಕವಿದು. ಅವರವರ ಮಟ್ಟಿಗೆ ಅವರವರದು ಇಂದ್ರಪಟ್ಟವೆಂದು ಭಾವಿಸಿ ತಪ್ಪೆಸಗುವವರು ಬಹುತೇಕ ಮಂದಿ ಇರುವಾಗ ನಡವಳಿಕೆಯಲ್ಲಿ ಬಹಳ ಜಾಗರೂಕತೆ ಅಗತ್ಯ ಎಂಬ ಸಂದೇಶ ಇಲ್ಲಿದೆ. ಈ “ಮಹಾಕ್ಷತ್ರಿಯ’ ಕಾದಂಬರಿಗೆ 1963ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಬಂದರೂ ಅವರು 1962ರ ಅ. 27ರಂದು ಇಹಲೋಕ ತ್ಯಜಿಸಿದ್ದರು. ಅವರು ಅಗಲಿ ಒಂದು ಸಂವತ್ಸರ ಚಕ್ರ (60 ವರ್ಷ) ಉರುಳುವಾಗ ಇಂತಹವರೂ ಇದ್ದರು ಎಂಬುದನ್ನು ನೆನೆದರೆ ಮಾತ್ರ ಸಾಕೆ?

1892ರಲ್ಲಿ ಮೈಸೂರಿನಲ್ಲಿ ಜನಿಸಿದ ದೇವುಡು ಅನೇಕ ವರ್ಷ ಶಾಲಾ ಮುಖ್ಯಶಿಕ್ಷಕರಾಗಿ, ಆ ಹುದ್ದೆಗೆ ರಾಜೀನಾಮೆ ನೀಡಿ ಗಾಂಧೀಜಿ ಅನುಯಾಯಿಯಾಗಿ, 1937ರಲ್ಲಿ ಬೆಂಗಳೂರಿನ ಚಳವಳಿಯಲ್ಲಿ ಪೊಲೀಸರ ಲಾಠಿ ಏಟು ತಿಂದು, ಅನೇಕ ಪ್ರಕಾರದ ಸಾಹಿತ್ಯ ರಚನೆ ಮಾಡಿ, ರಂಗಭೂಮಿ ನಟರಾಗಿ, ನಾಟಕ ರಚನಕಾರರಾಗಿ, ಪಠ್ಯಪುಸ್ತಕ ಸಮಿತಿ ನಿರ್ದೇಶಕರಾಗಿ, 1948ರಲ್ಲಿ ಬೆಂಗಳೂರು ನಗರಪಾಲಿಕೆಯ ಸದಸ್ಯರಾಗಿ, ಕನ್ನಡ ಏಕೀಕರಣ ಚಳವಳಿಯಲ್ಲಿ ಸಕ್ರಿಯರಾಗಿ, ಪತ್ರಕರ್ತರಾಗಿ, ಪ್ರಸಿದ್ಧ ಉಪನ್ಯಾಸಕರಾಗಿ ಹೀಗೆ ಬಹುಮುಖ ಪ್ರತಿಭೆ ಹೊಂದಿದ್ದರೂ ಬಡತನದ ಜೀವನ ನಡೆಸಿದ್ದರು.

ಮಗನ ಸಾವಿನ ಸುದ್ದಿ ತಿಳಿದ ಮೇಲೂ ದೇವುಡು ಸುಖ-ದುಃಖಕ್ಕೆ ಸಮಾನ ಸ್ಥಾನ ಕೊಟ್ಟು ಉಪನ್ಯಾಸ ಮಾಡಿದ್ದು, ಸ್ವಂತ ಆರೋಗ್ಯ ಕೆಟ್ಟಾಗ ಅಜಗರನಷ್ಟು ಕಷ್ಟ ನಾನು ಪಟ್ಟಿಲ್ಲ ಎಂಬ ಉತ್ತರ ಪ್ರಾಯೋಗಿಕವಾಗಿತ್ತು. ಸುಖ-ದುಃಖವನ್ನು ಸಮನಾಗಿ ಕಾಣಬೇಕೆಂದು, ಪ್ರಪಂಚದ ವಿಷಯಗಳಲ್ಲಿ ನಿರ್ಲಿಪ್ತವಾಗಿರಬೇಕೆಂದು ಅಮೋಘ ಉಪನ್ಯಾಸ ಮಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವು ದಕ್ಕಿಂತ ಕಾರ್ಯರೂಪದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. ಆಗಲೇ ಸಾಧಕ ಗಳಿಸಿದ ಅಂಕ ತಿಳಿಯುತ್ತದೆ, ಆತನ ಪ್ರತೀ ಮಾತು “ಮಾಣಿಕ್ಯ’ ಆಗಬಹುದು. ಗೀತೆಯ ನೀತಿಯನ್ನು ಸ್ವತಃ ಜೀವನದಲ್ಲಿ ಅಳವಡಿಸಿ ಕೊಂಡದ್ದರಿಂದಲೇ ದೇವುಡು ಯಾವುದೇ ಸಂದರ್ಭ ದಲ್ಲಿಯೂ ವಿಚಲಿತರಾಗಲಿಲ್ಲ.

ಶ್ರೀಕೃಷ್ಣನೇ ದ್ವಾರಕೆ ಮುಳುಗುವುದನ್ನು ಮುನ್ನರಿತು ಪರಿವಾರದವರಿಗೆ ಸ್ಥಳಾಂತರಗೊಳ್ಳಲು ಸೂಚಿಸಿದ. ಆತನಿಗೆ ಅದರ ಮೇಲೆ ಯಾವುದೇ ಮೋಹ ಇರಲಿಲ್ಲ. ಅಲ್ಲಿದ್ದ ಕೃಷ್ಣನ ವಿಗ್ರಹವೇ ಉಡುಪಿಗೆ ಬಂತೆಂದು ಪೂರ್ವಿಕರು ಹೇಳುತ್ತಾರೆ. ಅಂತಹ ಕೃಷ್ಣತಾಣದಲ್ಲಿ ಕೃಷ್ಣ ಹೇಳಿದ್ದೇನು ಎಂದು ಕಾರ್ಯತಃ ತೋರಿಸಿದವರು ದೇವುಡು. ಸಾಧಕರಿಗೆ ನಿಜಜೀವನವೇ ಪ್ರಾಕ್ಟಿಕಲ್‌ ಪರೀಕ್ಷೆಯ ಕಾಲ. ನಮಗೆ ದೊಡ್ಡವರು, ಸಾಧಕರು ಎಂದು ಕಾಣುವುದು ನಿಜಜೀವನದ ಪರೀಕ್ಷೆಯಲ್ಲಿ ಪಾಸಾದ ವ್ಯಕ್ತಿಗಳನ್ನು ಕಂಡಾಗ ಮಾತ್ರ. ಸುಖ-ದುಃಖವನ್ನು ಸಮನಾಗಿ ಕಾಣದೆ ಇದ್ದರೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಕಳೆದುಕೊಂಡು ಜೀವನ ದುರ್ಭರವಾಗುವುದು ಮಾತ್ರವಲ್ಲ ಮನೆ, ಸಮುದಾಯ, ಸರಕಾರಕ್ಕೂ ಭಾರವಾಗುವ ಅಪಾಯವಿದೆ. ಆಗ ದುಃಖದ ಪ್ರಮಾಣ ಅತಿಯಾಗುತ್ತದೆ. ಆದ್ದರಿಂದ ಸುಖ-ದುಃಖವನ್ನು ಸಮನಾಗಿ ಕಾಣುವುದು ಬೇರೆ ಯಾರದೋ ಉದ್ಧಾರಕ್ಕೆ ಅಲ್ಲ, ನಮ್ಮದೇ ಜೀವನದ ಉದ್ಧಾರಕ್ಕೆ ಒಂದು ಉತ್ತಮ ಜೀವನತಂತ್ರವಾಗಿದೆ. ಇದಕ್ಕೆ ಬಹಳ ಕಷ್ಟವಿಲ್ಲ, ಮಾನಸಿಕ ತಯಾರಿ ಬೇಕಷ್ಟೆ.

-ಮಟಪಾಡಿ ಕುಮಾರಸ್ವಾಮಿ

 

Advertisement

Udayavani is now on Telegram. Click here to join our channel and stay updated with the latest news.

Next