ಬಾಗಲಕೋಟೆ: ಸರ್ಕಾರ, ಜನಪ್ರತಿನಿಧಿಗಳ ಅನುದಾನಕ್ಕಾಗಿ ಕಾಯದೇ ಬೀದಿಯಲ್ಲಿ ಭಿಕ್ಷೆ ಬೇಡಿ ಬಂದ ಹಣದಿಂದಲೇ ಸಾಯಿ ಮಂದಿರ ನಿರ್ಮಿಸಿದ್ದು, 10 ವರ್ಷಗಳಿಂದ ನಡೆಯುತ್ತಿದ್ದ ಶ್ರಮವೀಗ ಸಾರ್ಥಕತೆ ಕಂಡಿದೆ.
ಕುಷ್ಠರೋಗಿಗಳೆಂದು ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗಿ ಊರ ಹೊರಗೆ ಕಳುಹಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿದ ಇಲ್ಲಿಯ ಜನ ಸಾಯಿ ಮಂದಿರ ನಿರ್ಮಿಸುವುದರ ಮೂಲಕ ಸರ್ವರಿಗೂ ಮಾದರಿಯಾಗಿದ್ದಾರೆ.ಅನುದಾನ ಸಿಗಲಿಲ್ಲ: 10 ವರ್ಷಗಳ ಹಿಂದೆ ಕುಷ್ಠರೋಗಿಗಳ ಕಾಲೋನಿ ಜನ ಸೇರಿ ಸಾಯಿ ಮಂದಿರ ನಿರ್ಮಿಸಲು ಸಂಕಲ್ಪ ತೊಟ್ಟಿದ್ದರು. ಅದಕ್ಕಾಗಿ ಶಾಸಕರು, ಸಂಸದರ ಬಳಿಗೆ ಹೋಗಿ, ಅನುದಾನ ಕೇಳಿದ್ದರು. ಅದಕ್ಕೆ ಯಾರೂ ಸ್ಪಂದಿಸಲಿಲ್ಲ. ಜಾಗೆಯ ಉತಾರ (ಪಹಣಿ ಪತ್ರ) ತೆಗೆದುಕೊಂಡು ಬಂದರೆ ಅನುದಾನ ಕೊಡುವುದಾಗಿ ಕೆಲ ಜನಪ್ರತಿನಿಧಿಗಳು ಹೇಳಿದ್ದರಂತೆ. ಆದರೆ ಕುಷ್ಠರೋಗಿಗಳ ಕಾಲೋನಿಗೆ 1 ಎಕರೆ 20 ಗುಂಟೆ ಜಾಗೆ ಕೊಟ್ಟಿದ್ದು, ಅದರಲ್ಲಿ ಕಲ್ಯಾಣ ಮಂಟಪ, 32 ಮನೆಗಳನ್ನು ಸರ್ಕಾರ ನಿರ್ಮಿಸಿ ಕೊಟ್ಟಿದೆ. ಆದರೆ, ಪ್ರತ್ಯೇಕ ಉತಾರ ಇಲ್ಲದ ಕಾರಣ ಜನಪ್ರತಿನಿಧಿಗಳ ಅನುದಾನ ಪಡೆಯಲು ಸಾಧ್ಯವಾಗಲಿಲ್ಲ.
ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ: ಜನಪ್ರತಿನಿಧಿಗಳ ಅನುದಾನ ದೊರೆಯದ್ದಕ್ಕೆ ಅವರು ತಮ್ಮ ಸಂಕಲ್ಪದಿಂದ ಹಿಂದೆ ಸರಿಯಲಿಲ್ಲ. ನಿತ್ಯ ಭಿಕ್ಷೆ ಬೇಡುವುದು ಹಿರಿಯರ ಪದ್ಧತಿಯಾಗಿದ್ದು, ಅದರಿಂದ ಬರುವ ಹಣವನ್ನೇ ಕೂಡಿಡಲು ಆರಂಭಿಸಿದರು. ಜತೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರು 1 ಲಕ್ಷ, ಇಲ್ಲಿನ ಸಮಾಜದ ಹಿರಿಯ ನಿಜಲಿಂಗಪ್ಪ ಚಲವಾದಿ ನಿಧನ ಬಳಿಕ ಅವರು ಕೂಡಿಟ್ಟಿದ್ದ 2 ಲಕ್ಷ (ಅವರಿಗೆ ವಾರಸದಾರರು ಇರಲಿಲ್ಲ), ಕೆಲವು ಭಕ್ತರು 5ರಿಂದ 10 ಸಾವಿರ ಸೇರಿ ಒಟ್ಟು 1ಲಕ್ಷ, ಇನ್ನು ಕಮೀಟಿ ಹೆಸರಿಗೆ ಇಟ್ಟಿದ್ದ 3 ಲಕ್ಷ ಸೇರಿ ಒಟ್ಟು ಏಳು ಲಕ್ಷ ಕೂಡಿತು. ಅಲ್ಲಿದ್ದ 32 ಮನೆಯವರು ತಲಾ 10 ಸಾವಿರದಂತೆ 3.20 ಲಕ್ಷ ಕೂಡಿಸಿದರು. ಬಳಿಕ ಬಾಗಲಕೋಟೆ, ವಿಜಯಪುರ, ಕಲಬುರಗಿ, ದೆಹಲಿ ಹೀಗೆ ಹಲವು ಮಹಾನಗರಗಳಿಗೆ ಹೋಗಿ ಭಿಕ್ಷೆ ಬೇಡಿದ್ದರು. ಅದರಿಂದ ಬಂದ ಹಣ ಸೇರಿ ಒಟ್ಟು 20 ಲಕ್ಷ ವೆಚ್ಚದಲ್ಲಿ ಮಂದಿರ ನಿರ್ಮಿಸಿದ್ದಾರೆ.
ಹಲವರ ಶ್ರಮ: ಮಂದಿರ ನಿರ್ಮಾಣಕ್ಕೆ ಇಲ್ಲಿನ ಹಲವಾರು ಜನರು ಶ್ರಮದಾನ ಮಾಡಿದ್ದಾರೆ. ಇಲ್ಲಿರುವ ಬಹುತೇಕರು ಕಟ್ಟಡ ಕಾರ್ಮಿಕರಾಗಿದ್ದರಿಂದ ಮಂದಿರ ನಿರ್ಮಾಣ ಕೆಲಸದ ಖರ್ಚು-ವೆಚ್ಚವೂ ಕಡಿಮೆಯಾಗಿದೆ. ಪ್ರತಿಯೊಬ್ಬರೂ ಸಿಮೆಂಟ್, ಇಟ್ಟಿಗೆ, ಕಬ್ಬಿಣ, ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ. ಹಣದ ಕೊರತೆಯಿಂದ ಒಂದಿಷ್ಟು ವಿಳಂಬವಾಗಿದ್ದು ಬಿಟ್ಟರೆ ಎಲ್ಲವೂ ಸರಾಗವಾಗಿ ನಡೆದಿದೆ ಎನ್ನುತ್ತಾರೆ ಕುಷ್ಠ ರೋಗಿಗಳ ಕಾಲೋನಿಯ ಹಿರಿಯರಾದ ನಾಗಪ್ಪ ಹನಮಪ್ಪ ಬೊಮ್ಮನ್ನವರ.
ಕಮೀಟಿಯ ಹಣ, ನಾಗೇಶ ಪತ್ತಾರ ಅವರ ವಿಶೇಷ ಕಾಳಜಿ ಹಾಗೂ ನಾವು ಕಳೆದ ಹತ್ತು ವರ್ಷದಿಂದ ಭಿಕ್ಷೆ ಬೇಡಿದ ಹಣವೆಲ್ಲ ಸೇರಿ ಸಾಯಿ ಮಂದಿರ ನಿರ್ಮಿಸಿದ್ದೇವೆ. ಧರ್ಮಸ್ಥಳದ ಡಾ|ವೀರೇಂದ್ರ ಹೆಗ್ಗಡೆ ಅವರು 1ಲಕ್ಷ ರೂ.ನೀಡಿದ್ದಾರೆ. ಸರ್ಕಾರ-ಜನಪ್ರತಿನಿಧಿಗಳಿಂದ ಯಾವುದೇ ಅನುದಾನ ಪಡೆದಿಲ್ಲ.
–ನಾಗಪ್ಪ ಬೊಮ್ಮನವರ, ಕುಷ್ಠರೋಗಿಗಳ ಕಾಲೋನಿ ಹಿರಿಯ ಮುಖಂಡರು.
ಸುಮಾರು ವರ್ಷಗಳ ಹಿಂದೆ ನಗರದ ಹಳೆಯ ಎಪಿಎಂಸಿ ಹತ್ತಿರ ಕುಷ್ಠರೋಗಿಗಳ ಕಾಲೋನಿ ನಿರ್ಮಾಣಗೊಂಡಿದೆ. ಇಲ್ಲಿ ಒಟ್ಟು 32 ಮನೆಗಳಿದ್ದು, ಹಿರಿಯರಿಗೆ ರೋಗ ಅಂಟಿಕೊಂಡಿದ್ದರಿಂದ ಅವರನ್ನು ಪ್ರತ್ಯೇಕವಾಗಿ ಇಡಲಾಗಿತ್ತು. ಆದರೆ, ಅವರ ಮಕ್ಕಳಿಗೆ ಈಗ ಯಾವುದೇ ರೋಗವಿಲ್ಲ. ಅವರೆಲ್ಲ ನಿತ್ಯ ಗೌಂಡಿ ಕೆಲಸ ಸಹಿತ ವಿವಿಧ ಕೂಲಿ ಕೆಲಸ ಮಾಡಿಕೊಂಡು ಬದುತ್ತಿದ್ದಾರೆ. ಹಿರಿಯರು, ಭಿಕ್ಷೆ ಬೇಡಿ ಉಪ ಜೀವನ ನಡೆಸುವುದು ಅವರ ಪದ್ಧತಿ.
-ಶ್ರೀಶೈಲ ಕೆ. ಬಿರಾದಾರ