ತಿರುವನಂತಪುರಂ: ದೇಶದಾದ್ಯಂತ ಕೊರೊನಾ ಕಳವಳ ಹೆಚ್ಚಾಗುತ್ತಿದ್ದು, ದೇವರ ನಾಡು ಕೇರಳ ಅಕ್ಷರಶಃ ನಲುಗಿದೆ. ಕೇರಳದಲ್ಲಿ ಇದುವರೆಗೆ 12 ಜನರಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢವಾಗಿದ್ದು, ಇನ್ನಷ್ಟು ಜನರಿಗೆ ಹಬ್ಬದಂತೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಕೇರಳದಲ್ಲಿ ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾರ್ಚ್ 31ರವರೆಗೆ ಚಿತ್ರ ಮಂದಿರಗಳು, ಶಾಲೆ- ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ. ಇದೇ ರೀತಿ ಧಾರ್ಮಿಕ ಉತ್ಸವಗಳು ಬೇಡ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ.
ಇದೇ ವೇಳೆ ಧಾರ್ಮಿಕ ಕ್ಷೇತ್ರ ಶಬರಿಮಲೆಗೆ ಭೆಟಿ ನೀಡುವುದನ್ನು ಮುಂದೂಡುವಂತೆ ಮನವಿ ಮಾಡಲಾಗಿದೆ. ಕೊರೊನಾ ಸೋಂಕಿನ ಪರಿಣಾಮ ದೇಗುಲಕ್ಕೆ ಭಕ್ತರು ಬರದಿರುವುದು ಒಳಿತು ಎಂದು ಸಲಹೆ ನೀಡಿರುವುದಾಗಿ ವರದಿಯಾಗಿದೆ.
ಕೊರೊನಾ ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಿರುಮಲ ದೇವಸ್ಥಾನ ಮಂಡಳಿ ಕೂಡ ದೇವಸ್ಥಾನ ಭೇಟಿಯನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದೆ. ಅಷ್ಟಲ್ಲದೇ ವಿದೇಶಿಯರು ಮತ್ತು ಅನಿವಾಸಿ ಭಾರತೀಯರು ತಿರುಪತಿಗೆ ಭೇಟಿ ನೀಡುವುದನ್ನು ಕೆಲದಿನಗಳ ಮಟ್ಟಿಗೆ ನಿಷೇಧಿಸಿದೆ.
ಕರ್ನಾಟಕದಲ್ಲೂ ಮಂಗಳವಾರ ಮೂರು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ, ಇದರೊಂದಿಗೆ ಕರ್ನಾಟಕದಲ್ಲಿ ನಾಲ್ವರಿಗೆ ಸೋಂಕು ದೃಢವಾಗಿದೆ. ದೇಶದಲ್ಲಿ ಒಟ್ಟು 58 ಜನರಲ್ಲಿ ಸೋಂಕು ದೃಢವಾಗಿದ್ದು, ಸರಕಾರ ಮುನ್ನೆಚ್ಚರಿಕೆ ವಹಿಸುತ್ತಿದೆ.