ಹಾಸನ: ಮಳೆಯ ಬಿಡುವು, ರಜಾದಿನದ ಹಿನ್ನೆಲೆಯಲ್ಲಿ ಭಾನುವಾರ ಹಾಸನಾಂಬೆಯ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದು ಬಂದಿತು. ದೇವಿಯ ದರ್ಶನಕ್ಕೆ ರಾಜ್ಯ ಹೈಕೋರ್ಟ್‌ನ ನ್ಯಾಯಾಧೀಶರು, ರಾಜಕಾರಣಿಗಳು ಸೇರಿದಂತೆ ಗಣ್ಯರ ದಂಡು ಆಗಮಿಸಿದ ಹಿನ್ನೆಲೆಯಲ್ಲಿ ದೇವಿಯ ದರ್ಶನ ವಿಳಂಬವಾದರೂ ಸರದಿಯ ಸಾಲಿನಲ್ಲಿ ಭಕ್ತರು ಶಾಂತಿಯಾಗಿ ಸಾಗಿ ಸುಸೂತ್ರವಾಗಿ ದೇವಿಯ ದರ್ಶನ ಪಡೆದರು.
ಶನಿವಾರ ಮಧ್ಯಾಹ್ನದವರೆಗೂ ನಿರೀಕ್ಷಿಸಿದಷ್ಟು ಭಕ್ತರು ಬರಲಿಲ್ಲ. ಆದರೆ ಸಂಜೆಯ ವೇಳೆಗೆ ಭಕ್ತ ಸಾಗರವೇ ದೇವಾಲಯದತ್ತ ಹರಿದು ಬಂದಿತ್ತು. ಹಾಗೆಯೇ ಭಾನುವಾರ ಬೆಳಗ್ಗೆಯಿಂದ ರಾತ್ರಿವರೆಗೂ ಭಕ್ತರು ತಂಡೋಪತಂಡವಾಗಿ ದೇವಾಲಯದತ್ತ ಸಾಗಿ ಬಂದು ದೇವಿಯ ದರ್ಶನಕ್ಕೆ ಸರದಿ ಸಾಲಿನಲ್ಲಿ ಕಾದರು. ಹೆಚ್ಚು ಬಿಸಿಲಿನ ತಾಪವಿಲ್ಲದೇ, ಮಳೆಯ ಕಾಟವಿಲ್ಲದಿದ್ದರಿಂದ ಭಕ್ತರು ನೆಮ್ಮದಿಯಿಂದ ದೇವಿಯ ದರ್ಶನ ಪಡೆದರು. ಸಂಜೆ 7.30 ರ ನಂತರ ಮಳೆ ಆರಂಭವಾಯಿತು.
ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೆ ದೇವಿಗೆ ನೈವೇದ್ಯ ನೀಡುವ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲು ಹಾಕಿದ್ದರಿಂದ ಸಾವಿರಾರು ಭಕ್ತರ ಸಾಲು ಬೆಳೆಯುತ್ತಾ ಹೋಯಿತು. ಸಂಜೆಯಾಗುತ್ತಲೂ ಭಕ್ತರ ಸರದಿಯ ಸಾಲು ಬೆಳೆಯುತ್ತಲೇ ಇತ್ತು. ಇಡೀ ರಾತ್ರಿ ಭಕ್ತರು ಬರಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಸನ್ನದ್ಧರಾಗಿದ್ದರು.
ಸರದಿಯ ಸಾಲುಗಳನ್ನು ಈ ಬಾರಿ ಸುಸಜ್ಜಿತವಾಗಿ ಮಾಡಿರುವುದರಿಂದ ಪೊಲೀಸರಿಗೆ ಭಕ್ತರನ್ನು ನಿಯಂತ್ರಿಸುವ ಒತ್ತಡ ಕಡಿಮೆಯಾಗಿದೆ. ಆದರೆ ಪ್ರಧಾನ ಪವೇಶ ದ್ವಾರದಲ್ಲಿ ಗಣ್ಯರ ಜೊತೆ ಬರುವವರು, ಶಿಫಾರಸು ತರುವವರು, ಪ್ರಭಾವ ಬೀರುವವರನ್ನು ನಿಯಂತ್ರಿಸುವುದು ಪೊಲಿಸರಿಗೆ ಕಷ್ಟವಾಗುತ್ತಿದೆ. ಇನ್ನುಳಿದಂತೆ ಸರದಿಯ ಸಾಲಿನಲ್ಲಿ ಸಾಗುವವರು ಸಲೀಸಾಗಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.
ದೇವಿ ದರ್ಶನ ಪಡೆದ ರೇವಣ್ಣ: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಮೂರ್‍ನಾಲ್ಕು ಮಂದಿ ಪುರೋಹಿತರೊಂದಿಗೆ ಭಾನುವಾರ ದೇವಿಯ ದರ್ಶನ ಪಡೆದರು. ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ರೇವಣ್ಣ ಅವರು ದೇವಾಲಯದ ಆವರಣದಲ್ಲಿರುವ ದರ್ಬಾರ್ ಗಣಪತಿ ಹಾಗೂ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿಯೂ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ನಂತರ ದೇವಾಲಯದ ಪ್ರಧಾನ ದ್ವಾರದಲ್ಲಿ ಕೆಲಕಾಲ ಕುಳಿತು ವಿಶ್ರಮಿಸಿಕೊಂಡ ರೇವಣ್ಣ ಅವರು ಅಧಿಕಾರಿಗಳಿಂದ ಜಾತ್ರೋತ್ಸವದ ಮಾಹಿತಿಯನ್ನು ಪಡೆದುಕೊಂಡರು.
ಹಾಸನಾಂಬೆ ದರ್ಶನ ಪಡೆದ ಬಿ.ಸಿಪಾಟೀಲ್: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರೂ ಭಾನುವಾರ ಹಾಸನಾಂಬೆಯ ದರ್ಶನ ಪಡೆದರು. ತಮ್ಮ ಕೆಲ ಸ್ನೇಹಿತರೊಂದಿಗೆ ಪಾಟೀಲ್‌ಅವರು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಶನಿವಾರ ರಾತ್ರಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಬಂದು ಹಾಸನಾಂಬೆಗೆ ಪೂಜೆ ಸಲ್ಲಿಸಿದರು. ಅನರ್ಹ ಶಾಸಕ ಎಚ್. ವಿಶ್ವನಾಥ್ ಅವರೂ ಶನಿವಾರ ರಾತ್ರಿ ಹಾಸನಾಂಬೆಯ ದರ್ಶನ ಪಡೆದರು.