ಮೈಸೂರು: ದಕ್ಷಿಣದ ತಿರುಮಕೂಡಲು ಶ್ರೀ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ದೊರೆತಿದೆ.
ಉಚಿತ ಸಾರಿಗೆ ವ್ಯವಸ್ಥೆ: ದೂರದ ಊರುಗಳಿಂದ ಬರುವ ಭಕ್ತರಿಗಾಗಿ ತಿ.ನರಸೀಪುರದಲ್ಲಿ ನಾಲ್ಕು ಕಡೆಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಈ ನಿಲ್ದಾಣಗಳಿಂದ ದೇವಸ್ಥಾನ ಮತ್ತು ತ್ರಿವೇಣಿ ಸಂಗಮದ ಬಳಿಗೆ ಬರಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ಆಸ್ಪತ್ರೆ ಮತ್ತು ಆಯುಷ್ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ.
ಭಕ್ತರಿಗಾಗಿ ತಿ.ನರಸೀಪುರದ ಜೆಎಸ್‌ಎಸ್ ಸಭಾಭವನ, ಆದಿಚುಂಚನಗಿರಿ ಸಭಾ ಮಂಟಪಗಳಲ್ಲಿ ಭಕ್ತರ ದಾಸೋಹಕ್ಕೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಪಕ್ಕದಲ್ಲಿ ಪೊಲೀಸ್ ಸಿಬ್ಬಂದಿಗಾಗಿಯೇ ಪ್ರತ್ಯೇಕ ಟೆಂಟ್ ನಿರ್ಮಿಸಲಾಗಿದ್ದು, ಈ 3 ಸ್ಥಳಗಳಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ತ್ರಿವೇಣಿ ಸಂಗಮದ ಎರಡೂ ನಡುಗಡ್ಡೆಗಳ ಬಳಿ ಬ್ಯಾರಿಕೇಡ್‌ಗಳನ್ನಿರಿಸಿ ಮೇಳಕ್ಕೆ ಬರುವ ಭಕ್ತಾದಿಗಳ ಪುಣ್ಯಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಸುರಕ್ಷತೆಗಾಗಿ ನದಿಯ ಎರಡೂ ಬದಿಯಲ್ಲಿ ಯೋಧರನ್ನು ನಿಯೋಜಿಸ ಲಾಗಿದೆ. ಪಾಳಿಗಳಲ್ಲಿ ಯೋಧರು ದೋಣಿಗಳಲ್ಲಿ ಕುಳಿತು ಜಾಗೃತೆ ವಹಿಸಲಿದ್ದಾರೆ.
ನದಿಯ ಎರಡೂ ಬದಿಗಳಲ್ಲಿ 40ಕ್ಕೂ ಹೆಚ್ಚು ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ಅಗ್ನಿಶಾಮಕ ದಳದ ಸುಮಾರು 125 ಸಿಬ್ಬಂದಿಗಳಿದ್ದು, ನಾಲ್ಕು ಮೋಟಾರ್ ಬೋಟ್ ಸೇರಿದಂತೆ ಒಟ್ಟು ಏಳು ವಾಹನಗಳಿವೆ. ಎರಡು ರಕ್ಷಣಾ ವಾಹನಗಳು, ಮೂರು ಜಲವಾಹನಗಳು,ಒಂದು ಕ್ಷಿಪ್ರ ಕಾರ್ಯಾಚರಣೆ ವಾಹನ, ಒಂದು ಟೋಹಿಂಗ್ ವಾಹನ, 12 ಅಡ್ವಾನ್ಸ್ ಫೋಮ್‌ಸಿಲಿಂಡರ್,100 ಲೈಪ್ ಜಾಕೆಟ್. 17 ಅಗ್ನಿನಂದಕಗಳನ್ನು ಒದಗಿಸಲಾಗಿದೆ. ನದಿಯ ಎರಡೂ ಬದಿಯ ಮೆಟ್ಟಿಲುಗಳ ಮೇಲೆ ಮಹಿಳೆಯರು ಸ್ನಾನ ಮಾಡಿದ ನಂತರ ಬಟ್ಟೆ ಬದಲಿಸಲು ತಾತ್ಕಾಲಿಕ ಕೋಣೆಗಳನ್ನು ಮತ್ತು ತಾತ್ಕಾಲಿಕ ಶೌಚಾಲಯಗಳನ್ನು ಕಲ್ಪಿಸಲಾಗಿದೆ.