Advertisement

ದೇವಿ ದರ್ಶನಕ್ಕೆ ಭಕ್ತರ ದಂಡು

12:33 PM Mar 29, 2019 | pallavi |

ಹರಿಹರ: ಐದು ವರ್ಷಗಳ ನಂತರ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿರುವ ನಗರದ ಊರಮ್ಮನ ಹಬ್ಬಕ್ಕೆ ಜನ ಜಾತ್ರೆಯೇ ನೆರೆದಿದೆ. ಕಳೆದೆರಡು ದಿನಗಳಿಗೆ ಹೋಲಿಸಿದರೆ ಗುರುವಾರ ದೇವಸ್ಥಾನಗಳ ಮುಂದೆ ಜನಜಂಗುಳಿ ಕಡಿಮೆ ಇದ್ದರೂ ಮಹಜೇನಹಳ್ಳಿ, ಕಸಬಾ ದೇವಸ್ಥಾನಗಳ ಮುಂದೆ ನೂರಾರು ಮಹಿಳೆಯರು ಸರತಿ ಸಾಲಲ್ಲಿ ನಿಂತು ಪೂಜೆ ಸಲ್ಲಿಸಿದರು. ನೆಂಟರಿಷ್ಟರೊಂದಿಗೆ ಹೊಸ ಬಟ್ಟೆ ಧರಿಸಿಕೊಂಡು ಬಂದು ದೇವಸ್ಥಾನ ರಸ್ತೆಯ ಚೌಕಿ ಮನೆಯಲ್ಲಿ ಸಿಂಗಾರಗೊಂಡಿರುವ ದೇವಿ ದರ್ಶನ ಪಡೆದರು.

Advertisement

ಚೌಕಿ ಮನೆ ಸೇರಿದಂತೆ ಊರಮ್ಮ ದೇವಸ್ಥಾನಗಳ ಮುಂದೆ ಭಕ್ತರು ಸಾಲಲ್ಲಿ ಬಂದು ಹೋಗಲು ಬ್ಯಾರಿಕೇಡ್‌ ನಿರ್ಮಿಸಿದ್ದರಿಂದ ಯಾವುದೇ ನೂಕು, ನುಗ್ಗಲು ಉಂಟಾಗಲಿಲ್ಲ. ಮಧ್ಯಾಹ್ನ ಬಿಸಿಲಿನ ತಾಪದಿಂದ ಭಕ್ತರ ಸಂಖ್ಯೆ ಕಡಿಮೆ ಇದ್ದರೂ ಸಂಜೆಯಾಗುತ್ತಿದ್ದಂತೆ ಹೆಚ್ಚಾಗುತ್ತ ಸಾಗಿತು.

ಜಾತ್ರೆ ಜೋರು: ದೇವಸ್ಥಾನ ರಸ್ತೆ, ಶಿವಮೊಗ್ಗ ವೃತ್ತ, ಚೌಕಿ ಮನೆ ಹಿಂಭಾಗದಲ್ಲಿ ಜಾತ್ರೆ ನಿಮಿತ್ತ ತಲೆ ಎತ್ತಿರುವ ನೂರಾರು ತಾತ್ಕಾಲಿಕ ಅಂಗಡಿ, ಮುಂಗಟ್ಟುಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಬಟ್ಟೆ, ಅಡುಗೆ ಸಾಮಾನು, ಮಕ್ಕಳ ಆಟಿಕೆ, ಶೃಂಗಾರ ಸಾಧನಗಳು, ಖಾರಾ, ಮಂಡಕ್ಕಿ, ತಿಂಡಿ-ತಿನಿಸು ಖರೀದಿಯಲ್ಲಿ ಮಹಿಳೆಯರು. ಮಕ್ಕಳು ತೊಡಗಿದ್ದರು. ಗಾಂಧಿ ಮೈದಾನದಲ್ಲಿ ಬೃಹತ್‌ ಜಾರು ಬಂಡಿ, ಜೋಕಾಲಿ ಇತರೆ ಆಟಿಕೆಗಳನ್ನು ಆಡಿದ ಮಕ್ಕಳು ಸಂತಸಪಟ್ಟರು.

ಮಂಗಳವಾರ ಸಸ್ಯಾಹಾರಿ ಭೋಜನ ಮುಗಿಸಿದವರು, ಬುಧವಾರ ಬಾಡೂಟ ಸವಿದವರು, ಗುರುವಾರ ಹೊಸದಾಗಿ ಬಂದವರೆಲ್ಲಾ ಒಟ್ಟಾಗಿ ಸಂಭ್ರಮದಿಂದ ಜಾತ್ರೆ ಮಾಡಿದರು.

ಟ್ರಾಫಿಕ್‌ ಜಾಮ್‌: ಹಬ್ಬದ ಮೇರು ದಿನವಾದ ಬುಧವಾರ ರಾತ್ರಿ ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ ಬಡಾವಣೆಯ ರಸ್ತೆಗಳಲ್ಲೂ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಮುಖ್ಯ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹಳೆ ಪಿ.ಬಿ.ರಸ್ತೆ, ಗಾಂಧಿ  ವೃತ್ತ, ಶಿವಮೊಗ್ಗ ರಸ್ತೆ, ಹರಪನಹಳ್ಳಿ ರಸ್ತೆಗಳಲ್ಲಿ ಬಸ್ಸು, ಲಾರಿಗಳಿರಲಿ ಲಘು ವಾಹನ ಸವಾರರು ಸಹ ಮುಂದೆ ಸಾಗಲು ಹರಸಾಹಸ ಪಟ್ಟರು.

Advertisement

ಮದ್ಯದ ಬಾಟಲಿ, ಪೌಚ್‌ಗಳ ರಾಶಿ: ಉತ್ಸವದ ನಿಮಿತ್ತ ಸಹಸ್ರಾರು ಜನರ ಸಿಹಿಯೂಟ, ಬಾಡೂಟಕ್ಕೆ ಬಳಸಿದ ಪ್ಲಾಸ್ಟಿಕ್‌ ತಟ್ಟೆ, ಲೋಟ ಇತರೆ ಪರಿಕರಗಳ ತ್ಯಾಜ್ಯ ಗಲ್ಲಿಗಲ್ಲಿಗಳಲ್ಲಿ, ಚರಂಡಿಗಳಲ್ಲಿ ಹರಡಿತ್ತು. ನಗರದ ಅಂಗಡಿ ಮುಂಗಟ್ಟುಗಳ ಆವರಣದಲ್ಲೆಲ್ಲಾ ಮದ್ಯದ ಬಾಟಲಿಗಳು, ಪೌಚ್‌ಗಳು ಬಿದ್ದಿದ್ದವು. ತಡರಾತ್ರಿವರೆಗೂ ಹಬ್ಬ ಆಚರಿಸಿದ್ದ ಪೌರಕಾರ್ಮಿಕರು ಕಸ ತುಂಬುವಲ್ಲಿ ಮಧ್ಯಾಹ್ನವಾಗಿದ್ದರಿಂದ
ಬಿಸಿಲಿನಿಂದಾಗಿ ದುರ್ವಾಸನೆ ಬೀರುತ್ತಿದ್ದವು.

ವಿವಿಧ ಕಾರ್ಯಕ್ರಮ: ಮಾ. 29 ರಂದು ಕಸಬಾದ ರೈತ ಬಾಂಧವರಿಂದ ಎತ್ತಿನ ಬಂಡಿ (ಗಾಡಾ) ಓಟದ ಸ್ಪರ್ಧೆ ನಡೆಯಲಿದೆ. ನಗರದ ಪಕ್ಕಿರಸ್ವಾಮಿ ಮಠದ ಹತ್ತಿರ ನಿರ್ಮಿಸಿರುವ ಭವ್ಯ ರಂಗಮಂಟಪದಲ್ಲಿ ಮಾ. 30ರವರೆಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು, ಮಾ. 29 ರಿಂದ 31ರವರೆಗೆ ಗಾಂಧಿ ಮೈದಾನದಲ್ಲಿ ಜಂಗೀ ಕುಸ್ತಿ ಹಮ್ಮಿಕೊಳ್ಳಲಾಗಿದೆ.

ಜನಮನ ಸೆಳೆದ ಬೆಲ್ಲದ ಬಂಡಿ
ಹರಿಹರ: ಗ್ರಾಮದೇವತೆ ಉತ್ಸವದ ಅಂಗವಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಬೆಲ್ಲದ ಬಂಡಿ ಮೆರವಣಿಗೆ ಜನಮನ ಸೆಳೆಯಿತು. ಸಂಜೆ ನಾಲ್ಕಕ್ಕೆ ಹೊಸಭರಂಪುರದ ಗ್ರಾಮದೇವತೆ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಹರಿಹರೇಶ್ವರ ದೇವಸ್ಥಾನಕ್ಕೆ ತೆರಳಿತು.

ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ನದಿಗೆ ತೆರಳಿ ಗಂಗಾ ಪೂಜೆ ನೆರವೇರಿಸಲಾಯಿತು. ನಂತರ ದೇವಸ್ಥಾನ ರಸ್ತೆಯ ಚೌಕಿಮನೆ, ಕಸಬಾ, ಮಹಜೇನಹಳ್ಳಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಕಸಬಾ ಹಾಗೂ ಮಹಜೇನಹಳ್ಳಿ ಗ್ರಾಮಸ್ಥರ ಎತ್ತುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಕಣ್ಣಿಗೆ ಕಾಡಿಗೆ, ಕೊಂಬಿಗೆ ಬಣ್ಣ ಹಚ್ಚಿದ, ಜ್ಯೂಲ ಧರಿಸಿದ ಜೋಡೆತ್ತುಗಳು ಒಂದರ ಹಿಂದೊಂದು ಸಾಲಾಗಿ ಸಾಗಿ ಕಣ್ಮನ ಸೆಳೆದವು. ಚೌಕಿ ಮನೆ ಎದುರು ರೈತರಿಂದ ಹುಲಸು ಒಡಿಯುವ ಕಾರ್ಯಕ್ರಮ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next