ಮುಂಬಯಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ 13 ದಿನಗಳ ಬಳಿಕ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಿವಸೇನೆಯ ಏಕನಾಥ ಶಿಂಧೆ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗಳಿಸಿಕೊಂಡಿದ್ದರೂ ಸಹ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾ ಗಿಯೇ ಉಳಿದುಕೊಂಡಿತ್ತು. ಹೀಗಾಗಿ ಹೊಸದಿಲ್ಲಿಯಲ್ಲಿ ನಿರಂತರವಾಗಿ ಸಭೆ ನಡೆಸಿದ ಬಳಿಕ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್‌ರನ್ನು ಆಯ್ಕೆ ಮಾಡಲಾಗಿತ್ತು. ಗುರುವಾರ ಫಡ್ನವೀಸ್ ಅವರು 3ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಮುಂಬಯಿಯ ಆಜಾದ್ ಮೈದಾನದಲ್ಲಿ ಆಯೋ ಜಿಸಲಾಗಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರು ಪ್ರಮಾಣವಚನ ಬೋಧಿಸಿ ದರು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರ ದಂಡೇ ನೆರೆದಿತ್ತು. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಫಡ್ನವೀಸ್ ಮೊದಲ ಸಂಪುಟ ಸಭೆಯನ್ನು ನಡೆಸಿದರು.
ಎನ್‌ಡಿಎ ಶಕ್ತಿ ಪ್ರದರ್ಶನ: ಮಹಾರಾಷ್ಟ್ರದಲ್ಲಿ ಎನ್‌ಡಿಎ ಮೈತ್ರಿಕೂಟ ದಾಖಲೆಯ ಗೆಲುವು ಸಾಧಿಸಿದ ಬಳಿಕ ನಡೆಸಲಾದ ಬೃಹತ್ ಕಾರ್ಯಕ್ರಮ ಕೇವಲ ಮಹಾಯುತಿಯದ್ದಷ್ಟೇ ಅಲ್ಲದೇ, ಇಡೀ ಎನ್‌ಡಿಎ ಕೂಟದ ಶಕ್ತಿ ಪ್ರದರ್ಶನದಂತಿತ್ತು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಜೆ.ಪಿ.ನಡ್ಡಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ನಿತೀಶ್ ಕುಮಾರ್, ಹಿಮಂತ ಬಿಸ್ವಾ ಶರ್ಮಾ ಸೇರಿ ಎನ್‌ಡಿಎ ಅಧಿಕಾರದಲ್ಲಿರುವ ಸಿಎಂಗಳು ಭಾಗಿಯಾಗಿದ್ದರು.
ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ರಣಬೀರ್ ಕಪೂರ್ ಸೇರಿದಂತೆ ಬಾಲಿವುಡ್ ನ ಟಾಪ್ ಸ್ಟಾರ್ ಗಳು ಈವೆಂಟ್ ನಲ್ಲಿ ಭಾಗವಹಿಸಿದ್ದರು. ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ಅನಿಲ್ ಅಂಬಾನಿ, ಅನಂತ್ ಅಂಬಾನಿ ಮತ್ತು ಕುಮಾರ್ ಮಂಗಳಂ ಬಿರ್ಲಾ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅವರ ಪತ್ನಿ ಅಂಜಲಿ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.
42,000 ಮಂದಿ ಭಾಗಿ:
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ 42,000 ಮಂದಿ ಭಾಗಿಯಾಗಿದ್ದರು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ 2,000 ಮಂದಿ ವಿವಿಐಪಿಗಳಿಗೂ ಸಹ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ 4000 ಮಂದಿ ಪೊಲೀಸ್ ಸಿಬಂದಿಯನ್ನು ನೇಮಕ ಮಾಡಲಾಗಿತ್ತು. ಇದರಲ್ಲಿ 15 ಡಿಸಿಪಿ ಮತ್ತು 7,000 ಮಂದಿ ಪೊಲೀಸರಿದ್ದರು. 8,000ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿತ್ತು. ನ.20ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 288 ಸ್ಥಾನಗಳ ಪೈಕಿ 230ರಲ್ಲಿ ಜಯ ಗಳಿಸಿತ್ತು.