Advertisement

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ

04:07 PM Dec 02, 2019 | Hari Prasad |

ಮುಂಬಯಿ: ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ಭಾರತೀಯ ಜನತಾ ಪಕ್ಷವು ಬುಧವಾರ ಸಾಯಂಕಾಲದೊಳಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವಂತೆ ಬಿಜೆಪಿಗೆ ಬೆಂಬಲ ಘೋಷಿಸಿದ್ದ ಎನ್.ಸಿ.ಪಿ.ನಾಯಕ ಅಜಿತ್ ಪವಾರ್ ಅವರು ಇಂದು ರಾಜೀನಾಮೆ ಸಲ್ಲಿಸಿದ್ದರು.

Advertisement

ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ 3.30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತುರ್ತು ಪತ್ರಿಕಾಗೋಷ್ಠಿ ನಡೆಸಿದರು. ಮತ್ತು ಈ ಪತ್ರಿಕಾಗೋಷ್ಠಿಯಲ್ಲಿ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ತಾನು ರಾಜೀನಾಮೆ ಸಲ್ಲಿಸುತ್ತಿರುವ ವಿಚಾರವನ್ನು ಪ್ರಕಟಿಸಿದರು.

ಪತ್ರಿಕಾಗೋಷ್ಠಿ ಬಳಿಕ ರಾಜಭವನಕ್ಕೆ ತೆರಳಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಈ ಮೂಲಕ ಕೇವಲ ನಾಲ್ಕು ದಿನಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿದ್ದ ಫಡ್ನವೀಸ್ ಸರಕಾರ ಬಹುಮತ ಕಳೆದುಕೊಂಡಂತಾಗಿದೆ. ಮತ್ತು ಶಿವಸೇನೆ, ಎನ್.ಸಿ.ಪಿ. ಮತ್ತು ಈ ಮೂಲಕ ಕಾಂಗ್ರೆಸ್ ನೇತೃತ್ವದ ನೂತನ ಸರಕಾರ ರಚನೆಗೆ ಹಾದಿ ಸುಗಮಗೊಂಡಂತಾಗಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ಈ ಚುನಾವಣೆಯಲ್ಲಿ ಮಹಾರಾಷ್ಟ್ರದ ಜನತೆ ಹೇಗೆ ಬಿಜೆಪಿ-ಶಿವಸೇನೆಯ ಮಹಾಯುತಿಗೆ ಸಂಪೂರ್ಣ ಬಹುಮತವನ್ನು ನೀಡಿದ್ದರು ಎಂಬುದನ್ನು ವಿವರಿಸಿದ ಫಡ್ನವೀಸ್ ಬಳಿಕ ಶಿವಸೇನೆ ಅಧಿಕಾರಕ್ಕಾಗಿ ಚೌಕಾಸಿ ನಡೆಸಿ ನಮ್ಮ ಮೈತ್ರಿಯಿಂದ ಹೊರನಡೆಯಿತು ಎಂದು ಆರೋಪಿಸಿದರು.

ಭಾರತೀಯ ಜನತಾ ಪಕ್ಷವನ್ನು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ದೂರವಿರಿಸುವುದೇ ಈ ಮೂರು ಭಿನ್ನ ಸಿದ್ಧಾಂತಗಳನ್ನು ಹೊಂದಿದ್ದ ಪಕ್ಷಗಳ ಕಾಮನ್ ಮಿನಿಮಮ್ ಪ್ರೋಗ್ರಾಂನ ಕಾಮನ್ ಮ್ಯಾಕ್ಸಿಮಮ್ ಉದ್ದೇಶವಾಗಿತ್ತು ಎಂಬ ಆರೋಪವನ್ನು ಫಡ್ನವೀಸ್ ಮಾಡಿದರು.

Advertisement

ಆ ಬಳಿಕ ಸದ್ಯದ ಪರಿಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷದ ಬಳಿಯಲ್ಲಿ ಸರಕಾರ ರಚನೆ ಮಾಡುವಷ್ಟು ಸಂಖ್ಯಾಬಲ ಇಲ್ಲದೇ ಇರುವುದರಿಂದ ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ದೇವೇಂದ್ರ ಫಡ್ನವೀಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಉದ್ದೇಶಿಸಿರುವ ಶಿವಸೇನೆ, ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಪಕ್ಷಗಳ ತತ್ವ ಸಿದ್ಧಾಂತಗಳು ಭಿನ್ನವಾಗಿರುವುದರಿಂದ ಅವರು ಮುಂಬರುವ ದಿನಗಳಲ್ಲಿ ಏಕಮುಖವಾಗಿ ಸಾಗುವುದು ಕಷ್ಟ ಎಂಬ ಭವಿಷ್ಯವನ್ನು ಫಡ್ನವೀಸ್ ಇದೇ ಸಂದರ್ಭದಲ್ಲಿ ನುಡಿದರು. ಮತ್ತು ಇದರಿಂದ ಮಹಾರಾಷ್ಟ್ರದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ರಚನಾತ್ಮಕ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವನ್ನು ದೇವೇಂದ್ರ ಫಡ್ನವೀಸ್ ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಮತ್ತು ತಮ್ಮ ನೇತೃತ್ವದ ಸರಕಾರವನ್ನು ಕಳೆದ ಐದು ವರ್ಷಗಳಲ್ಲಿ ಬೆಂಬಲಿಸಿದ ಮಹಾರಾಷ್ಟ್ರದ ಜನತೆಗೆ ಫಡ್ನವೀಸ್ ಅವರು ವಿಶೇಷವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next