Advertisement

ಠಾಕ್ರೆ ಪುಣ್ಯತಿಥಿ ನಡುವೆ ಬಿಜೆಪಿ-ಶಿವಸೇನೆ ಜಗಳ

09:33 AM Nov 19, 2019 | Hari Prasad |

ಹೊಸದಿಲ್ಲಿ/ಮುಂಬಯಿ: ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಬಿಕ್ಕಟ್ಟು ಉಂಟಾಗಿ, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದರೂ ಬಿಜೆಪಿ ಮತ್ತು ಶಿವಸೇನೆ ನಾಯಕರ ನಡುವಿನ ಟೀಕಾ ಪ್ರಹಾರ ಮಾತ್ರ ನಿಂತಿಲ್ಲ. ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆಯವರ ಒಂಬತ್ತನೇ ಪುಣ್ಯತಿಥಿ ದಿನವಾದ ರವಿವಾರ ಎರಡೂ ಪಕ್ಷಗಳ ನಡುವಿನ ಕದನ ಟ್ವಿಟರ್‌ ಪ್ರವೇಶಿಸಿದೆ.

Advertisement

ಮಾಜಿ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ‘ಬಾಳಾ ಸಾಹೇಬ್‌ ನಮಗೆ ಆತ್ಮಗೌರವ ಕಲಿಸಿಕೊಟ್ಟವರು’ ಎಂದು ಟ್ವೀಟ್‌ ಮಾಡುವ ಮೂಲಕ ಶಿವಸೇನೆಗೆ ಟಾಂಗ್‌ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಮುಂಬಯಿನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಸೇನೆ ಸಂಸದ ಅನಿಲ್‌ ದೇಸಾಯಿ, ‘ಎಲ್ಲ ಪ್ರಮುಖ ನಾಯಕರ ಮೇಲೂ ಬಾಳಾ ಸಾಹೇಬ್‌ ಠಾಕ್ರೆ ಪ್ರಭಾವ ಬೀರಿದ್ದರು. ಹೀಗಾಗಿಯೇ ಎಲ್ಲ ಪಕ್ಷಗಳ ನಾಯಕರು ಶಿವಾಜಿ ಪಾರ್ಕ್‌ಗೆ ಬಂದು ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಎನ್‌ಸಿಪಿ- ಕಾಂಗ್ರೆಸ್‌ ಜತೆ ಸೇರಿ ಸರಕಾರ ರಚನೆ ಬಗ್ಗೆ ಮಾತನಾಡಿದ ಅವರು, ಮಾತುಕತೆ ನಿರೀಕ್ಷಿತ ರೀತಿಯಲ್ಲಿ ಪ್ರಗತಿಯಾಗಿವೆ ಎಂದಿದ್ದಾರೆ.

ಪಕ್ಷದ ಸಂಸದ ಸಂಜಯ ರಾವತ್‌ ಮಾತನಾಡಿ ‘ಒಂದಲ್ಲ ಒಂದು ದಿನ ಶಿವ ಸೈನಿಕನೊಬ್ಬ ಮಹಾರಾಷ್ಟ್ರ ಮುಖ್ಯಮಂತ್ರಿಯಾಗುತ್ತಾನೆ ಎಂಬ ಬಗ್ಗೆ ಠಾಕ್ರೆಯವರಿಗೆ ವಾಗ್ಧಾನ ನೀಡಲಾಗಿತ್ತು. ಅದು ಶೀಘ್ರದಲ್ಲಿಯೇ ಪೂರೈಸಲಿದೆ. ಬಾಳಾ ಸಾಹೇಬ್‌ ಭಾರತ ಅನುಸರಿಸಬೇಕಾದ ಹಿಂದುತ್ವದ ಮಾರ್ಗವನ್ನು ಹಾಕಿಕೊಟ್ಟವರು’ ಎಂದಿದ್ದಾರೆ.

ಫ‌ಡ್ನವೀಸ್‌ ವಿರುದ್ಧ ಘೋಷಣೆ: ಬಾಳಾ ಠಾಕ್ರೆ ಅವರ ಪುಣ್ಯತಿಥಿಯಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಫ‌ಡ್ನವೀಸ್‌ ವಿರುದ್ಧ ಘೋಷಣೆ ಕೂಗಲಾಯಿತು. ಮುಂಬಯಿನ ಶಿವಾಜಿ ಪಾರ್ಕ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಲು ಫ‌ಡ್ನವೀಸ್‌ ಮತ್ತು ಬಿಜೆಪಿಯ ಹಿರಿಯ ನಾಯಕರು ಆಗಮಿಸುತ್ತಿದ್ದಂತೆಯೇ ಈ ಘಟನೆ ನಡೆದಿದೆ. ಆದರೆ ಅವರು ಯಾರೂ ಅದಕ್ಕೆ ಪ್ರತಿಕ್ರಿಯೆ ಸೂಚಿಸಲಿಲ್ಲ ಮತ್ತು ಈ ಸಂದರ್ಭದಲ್ಲಿ ಉದ್ಧವ್‌ ಠಾಕ್ರೆ ಆಪ್ತ ಕಾರ್ಯದರ್ಶಿ ಮಿಲಿಂದ್‌ ನರ್ವೇಕರ್‌ ಹೊರತುಪಡಿಸಿ ಇತರ ಯಾವ ಪ್ರಮುಖ ನಾಯಕರೂ ಇರಲಿಲ್ಲ. ಇದೇ ವೇಳೆ, ವಿಶೇಷವೆಂಬಂತೆ, ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ನಾಯಕರು ಕೂಡ ಶಿವಾಜಿ ಪಾರ್ಕ್‌ಗೆ ಆಗಮಿಸಿ ಬಾಳಾ ಠಾಕ್ರೆ ಅವರಿಗೆ ಗೌರವ ಸಲ್ಲಿಸಿದ್ದು ಕಂಡುಬಂತು. ಶಿವಸೇನೆ ಜತೆ ಈ ಎರಡೂ ಪಕ್ಷಗಳು ಕೈಜೋಡಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.


ಶಿವಾಜಿ ಬಿಜೆಪಿಯವರಿಗೆ ಮಾತ್ರವಲ್ಲ ಎಲ್ಲರಿಗೂ ಸೇರಿದವರು:
ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಎಲ್ಲರಿಗೂ ಬೇಕಾದವರು. ಬಿಜೆಪಿಯವರಿಗೆ ಮಾತ್ರವಲ್ಲ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಛೇಡಿಸಲಾಗಿದೆ. ಪಕ್ಷದ ಸಂಸದ ಸಂಜಯ ರಾವತ್‌ ಬರೆದಿರುವ ಲೇಖನದಲ್ಲಿ ಈ ಅಂಶ ಪ್ರಸ್ತಾಪಿಸಲಾಗಿದೆ.

Advertisement

‘ಶಿವಾಜಿ ಮಹಾರಾಜರಿಂದ ಆಶೀರ್ವಾದ ಪಡೆದ ಏಕೈಕ ಪಕ್ಷ ನಮ್ಮದೇ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಇದರ ಹೊರತಾಗಿಯೂ ಪಕ್ಷದ ಅಭ್ಯರ್ಥಿ ಸತಾರಾ ಲೋಕಸಭೆ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಸೋತರು’ ಎಂದು ಲೇವಡಿ ಮಾಡಿದ್ದಾರೆ. ‘ದುರಹಂಕಾರ, ಬೂಟಾಟಿಕೆ ಮಾಡುವುದನ್ನು ಶಿವಾಜಿ ಮಹಾರಾಜರು ಮಹಾರಾಷ್ಟ್ರಕ್ಕೆ ಕಲಿಸಿ ಕೊಡಲಿಲ್ಲ. ಅದನ್ನು ಸಹಿಸುವಂತೆಯೂ ಹೇಳಿಕೊಡಲಿಲ್ಲ. ಶಿವಾಜಿ ಮಹಾರಾಜರ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡುವವರು ವಾಗ್ಧಾನಗಳನ್ನು ಈಡೇರಿಸುವಲ್ಲಿ ವಿಫ‌ಲರಾಗುತ್ತಾರೆ ಮತ್ತು ಅದುವೇ ಅವರ ಪತನದ ಸೂಚನೆ’ ಎಂದು ರಾವತ್‌ ಬರೆದುಕೊಂಡಿದ್ದಾರೆ.

ಇಂದು ಸೋನಿಯಾ-ಪವಾರ್‌ ಸಭೆ
ಶಿವಸೇನೆ ಜತೆಗೂಡಿ ಸರಕಾರ ರಚಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎನ್‌ಸಿಪಿ ನಾಯಕ ಶರದ್‌ ಪವಾರ್‌ ನಡುವಿನ ಸಭೆ ಸೋಮವಾರ ಹೊಸದಿಲ್ಲಿಯಲ್ಲಿ ನಡೆಯಲಿದೆ. ಅದಕ್ಕೆ ಪೂರಕವಾಗಿ ಸರಕಾರ ರಚನೆಗೆ ಇರುವ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಮೂರು ಪಕ್ಷಗಳೂ ನಿವಾರಿಸಿಕೊಂಡಿವೆ.

ಕನಿಷ್ಠ ಸಾಮಾನ್ಯ ಕಾರ್ಯಕ್ರಮ (ಸಿಎಂಪಿ)ದಲ್ಲಿ ರೈತರ ಸಮಸ್ಯೆ-ಆತ್ಮಹತ್ಯೆ, ವಿಚಾರ, ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಂತಿಮ ಪಡಿಸಲಾಗಿದೆ. ಅದನ್ನು ಸೋನಿಯಾ ಗಾಂಧಿಗೆ ಸಲ್ಲಿಸಲಾಗಿದೆ. ಇದೇ ವೇಳೆ ಬಿಜೆಪಿ ಜತೆಗೆ ಎನ್‌ಸಿಪಿ ನಾಯಕ ಪವಾರ್‌ ಸರಕಾರ ರಚನೆ ನಿಟ್ಟಿನಲ್ಲಿ ಮಾತುಕತೆ ನಡೆಸುತ್ತಿರುವ ಬಗೆಗಿನ ವರದಿಗಳೆಲ್ಲವೂ ಕಪೋಲಕಲ್ಪಿತ ಎಂದು ಶಿವಸೇನೆ ನಾಯಕರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next