Advertisement

ಕೋವಿಡ್ ಕಷ್ಟದ ಮಧ್ಯೆಯೂ ಅಭಿವೃದ್ಧಿ ಕಾರ್ಯ

02:41 PM Aug 10, 2020 | Suhan S |

ಚಿಕ್ಕಮಗಳೂರು: ಕೋವಿಡ್ ಆರ್ಥಿಕ ಕಷ್ಟದ ನಡುವೆಯೂ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಪ್ರವಾದೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ತಿಳಿಸಿದರು.

Advertisement

ಭಾನುವಾರ ಚಿಕ್ಕಮಗಳೂರು ತಾಲೂಕು ಕುರುವಂಗಿ, ಉಂಡಾಡಿಹಳ್ಳಿ, ನಲ್ಲೂರು ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆಯಡಿ ರಸ್ತೆ ಕಾಮಗಾರಿ ಶಿಲಾನ್ಯಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಿಲ್ಲಾದ್ಯಂತ ಗ್ರಾಮೀಣ ಪ್ರದೇಶಗಳ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಕುರುವಂಗಿ ಗ್ರಾಮದ ಬೈಪಾಸ್‌ ರಸ್ತೆ, ಬಿಳೆಕಲ್ಲು, ಮಲ್ಲೇದೇವರಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಕೆರೆ ಏರಿ ಒಳಗೊಂಡಂತೆ ರೂ. 5 ಕೋಟಿ 8ಲಕ್ಷ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಜೊತೆಗೆ ಬಂಡಿಹಳ್ಳಿ ಸಂಪರ್ಕ ರಸ್ತೆಗೆ ರೂ.30 ಲಕ್ಷ ಹಾಗೂ ನೂತನ ಬಸ್‌ ನಿಲ್ದಾಣಕ್ಕೆ ರೂ. 5 ಲಕ್ಷ ಬಿಡುಗಡೆಗೊಳಿಸಿದ್ದು ಗ್ರಾಮೀಣ ಅಭಿವೃದ್ಧಿಯೇ ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದರು.

ನಲ್ಲೂರು ಗ್ರಾಮದಲ್ಲಿ ರೂ.6 ಕೋಟಿ 90 ಲಕ್ಷದ ವೆಚ್ಚದಲ್ಲಿ 7.52 ಕಿ.ಮೀ ಉದ್ದದ ಉಕ್ಕುಂದದಿಂದ ಯರೇಹಳ್ಳಿ, ಉಂಡೇದಾಸರಹಳ್ಳಿ ಮಾರ್ಗದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆಯಡಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಸುಸಜ್ಜಿತವಾದ ರಸ್ತೆ ಹಾಗೂ ಸೇತುವೆ ನಿರ್ಮಾಣವಾಗುತ್ತಿದ್ದು, ಉತ್ತಮ ಗುಣಮಟ್ಟದ ಕಾಮಗಾರಿಯೊಂದಿಗೆ ವೇಗವಾಗಿ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.ಕೋವಿಡ್‌-19 ನಿಂದಾಗಿ ಸರ್ಕಾರ ಆರ್ಥಿಕ ಸಂಕಷ್ಟ ಎದುರಾಗಿದ್ದು, ಹೊಸದಾಗಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿಲ್ಲ. ಇರುವ ಕಾಮಗಾರಿಗಳನ್ನೇ ಪೂರ್ಣಗೊಳಿಸಲಾಗುವುದು ಎಂದ ಅವರು, ಕೋವಿಡ್‌-19 ಹಿನ್ನೆಲೆ ವೃದ್ಧರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 50 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಗೊಳಿಸಲಾಗಿದೆ. ರಸ್ತೆ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್‌ ಆಗಿದ್ದು, ಸೇತುವೆಗಳ ನಿರ್ಮಾಣದ ಟೆಂಡರ್‌ ಬಾಕಿ ಇದೆ. ಯಗಚಿಯಿಂದ 4 ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಲಾಗುವುದು ಎಂದರು. ಜಿಪಂ ಉಪಾಧ್ಯಕ್ಷ ಬಿ.ಜೆ. ಸೋಮಶೇಖರ್‌, ತಾಪಂ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಎ.ಪಿ.ಎಂ.ಸಿ. ಅಧ್ಯಕ್ಷ ಶಿವೇಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್‌, ತಾಪಂ ಉಪಾಧ್ಯಕ್ಷೆ ಶಾರದ ಶಶಿಧರ್‌, ತಾಪಂ ಸದಸ್ಯ ನೆಟ್ಟಿಕೆರೆ ಜಯಣ್ಣ, ಮುಖಂಡರಾದ ಕೆ.ಪಿ. ವೆಂಕಟೇಶ್‌, ತಮ್ಮಯ್ಯ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next