ಇಂಡಿ: ಕೇಂದ್ರ ಮತ್ತು ರಾಜ್ಯ ಸರಕಾರ ಗ್ರಾಮೀಣ ಭಾಗದ ಸರ್ವಾಂಗೀಣ ಅಭಿವೃದ್ಧಿ ಉದ್ದೇಶದಿಂದ ಸ್ಥಳೀಯ ಪಂಚಾಯತ್‌ಗಳಿಗೆ ಅನುದಾನದ ಹೊಳೆಯನ್ನು ಹರಿಸುತ್ತಿದ್ದರೂ ಗ್ರಾಮಗಳ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
ಇಂಡಿ ತಾಲೂಕಿನ ಲಾಳಸಂಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ರೋಡಗಿ ಗ್ರಾಮದಲ್ಲಿ ಸರಕಾರದ ಯೋಜನೆಗಳೆಲ್ಲವೂ ಬರಿ ಕಾಗದ ಪತ್ರದಲ್ಲಿ ಆಗಿವೆ ಹೊರತು ನೈಜವಾಗಿ ಆಗಿಲ್ಲ. ಆದರೂ ಅದರ ಬಿಲ್ ಮಾತ್ರ ತೆಗೆಯಲಾಗಿದೆ ಎಂಬ ಆರೋಪಗಳು ಸ್ಥಳೀಯ ಸಾರ್ವಜನಿಕರಿಂದಲೆ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಲಾಳಸಂಗಿ ಪಂಚಾಯತ್ ವ್ಯಾಪ್ತಿಯ ರೋಡಗಿ ಗ್ರಾಮದಲ್ಲಿ 2017-18ನೇ ಸಾಲಿನಲ್ಲಿ ಅಂದಾಜು 20 ಲಕ್ಷ ರೂ. ವರೆಗೆ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಗ್ರಾಮದ ವಿವಿಧ ಕಾಮಗಾರಿಗಳಿಗೆ ಬೋಗಸ್ ಬಿಲ್ ಎತ್ತುವ ಮೂಲಕ ಗ್ರಾಪಂ ಸದಸ್ಯ ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿ, ಗುತ್ತಿಗೆದಾರರು ಒಟ್ಟಾಗಿ ಸೇರಿ ಗ್ರಾಮದಲ್ಲಿ ಕಾಮಗಾರಿ ಮಾಡದೆ ಬೋಗಸ್ ಬಿಲ್ ತೆಗೆದುಕೊಂಡು ಸರಕಾರದ ಹಣ ದೋಚಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಪೂರ್ಣ ಕಾಮಗಾರಿಗಳು: ರೋಡಗಿ ಗ್ರಾಮದ ನವನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅದೇ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ತಲಾ 3 ಲಕ್ಷ ರೂ. ಮಂಜೂರಾಗಿದ್ದು ಬರಿ ಪಾಯ ತೆಗದಿದ್ದು ಕಾಮಗಾರಿ ಮುಗಿದಿಲ್ಲ. ಗ್ರಾಮದ ರುದ್ರಭೂಮಿ (ಸ್ಮಶಾನ) ಕಟ್ಟಡ ಮತ್ತು ಬೇಲಿ ವ್ಯವಸ್ಥೆ ಮಾಡದೆ ಅರ್ಧ ಬಿಲ್ ಎತ್ತಿದ್ದಾರೆ. ರೋಡಗಿ ಗ್ರಾಮದ ಶೌಚಾಲಯಗಳು ಹಾಗೂ ಇನ್ನೂ ಸಾಕಷ್ಟು ಕಾಮಗಾರಿಗಳು ಪೂರ್ಣಗೊಳಿಸಿಲ್ಲ, ಆದರೆ ಅನುದಾನ ಮಾತ್ರ ಬಳಕೆ ಮಾಡಲಾಗಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ಎಸ್‌ಸಿಪಿ, ಟಿಎಸ್‌ಪಿ (ಪ.ಜಾ-ಪ.ಪಂ) ಯೋಜನೆ ಕಾಮಗಾರಿಗಳು ಫಲಾನುಭವಿಗಳ ಕೇರಿಗಳಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ. ಎಸ್‌ಸಿ, ಎಸ್‌ಟಿ ಜನರಿಗೆ ನೀಡಬೇಕಾದ ಶೆಡ್‌ಗಳು ಬೇರೆ ಜನಾಂಗಕ್ಕೆ ಒದಗಿಸಿ ಬಡ ಜನರಿಗೆ ಮೋಸ ಮಾಡಿದ್ದಾರೆ. ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡದೆ ಇದ್ದರೂ ಸಹಿತ ಬೋಗಸ್ ಬಿಲ್ ಎತ್ತಿದ್ದಾರೆ. ವಿದ್ಯುತ್ ಬಲ್ಬ ಹಾಗೂ ಕಂಬಗಳನ್ನು ಹಾಕದೆ ಮತ್ತು ಪೈಪ್‌ಲೈನ್ ಮಾಡದೆ ಅಂದಾಜು ಐದು ಲಕ್ಷಕ್ಕೂ ಅಧಿಕ ಬಿಲ್ ಎತ್ತಲಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಲಾಳಸಂಗಿ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ರೋಡಗಿ ಗ್ರಾಮದಲ್ಲಿ ಯಾವುದೇ ಯೋಜನೆಗಳು ಸರಿಯಾಗಿ ಬಳಕೆಯಾಗಿಲ್ಲ. ಇದರ ಬಗ್ಗೆ ಸಾಕಷ್ಟು ಬಾರಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಸಹಿತ ಪ್ರಯೋಜನವಾಗಿಲ್ಲ. ಕೂಡಲೆ ಸ್ಥಳೀಯ ರೋಡಗಿ ಗ್ರಾಮಕ್ಕೆ ಬಂದು ಕಾಮಗಾರಿಗಳ ಪರಿಶೀಲನೆ ಮಾಡಿ ತಪ್ಪಿಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ ಎಂಬುದೇ ಸ್ಥಳೀಯರ ಆಶಯವಾಗಿದೆ.
ಲಾಳಸಂಗಿ ಗ್ರಾಪಂ ವ್ಯಾಪ್ತಿಯ ರೋಡಗಿ ಗ್ರಾಮದಲ್ಲಿ ಲಕ್ಷಾಂತರ ರೂ. ಲೂಟಿ ಮಾಡಲಾಗಿದೆ. ಯಾವುದೇ ಕಾಮಗಾರಿ ಪೂರ್ಣ ಮಾಡದೆ ಹಣ ಕೊಳ್ಳೆ ಹೊಡೆದಿದ್ದಾರೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
•
ಸಂಜೀವ ಮುಲಗೆ, ಗ್ರಾಪಂ ಸದಸ್ಯ
ನಾನು ಲಾಳಸಂಗಿ ಗ್ರಾಪಂಗೆ ಬಂದು ಕೇವಲ ಎರಡು ತಿಂಗಳಾಗಿದೆ. ಇಲ್ಲಿ ಬೋಗಸ್ ಬಿಲ್ ಎತ್ತಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಪರಿಶೀಲಿಸಿ ನಂತರ ತಿಳಿಸುತ್ತೇನೆ.
•
ಶಿವು ಪೂಜಾರಿ, ಲಾಳಸಂಗಿ ಪಿಡಿಒ
ಲಾಳಸಂಗಿ ಗ್ರಾಪಂ ವ್ಯಾಪ್ತಿಯ ರೋಡಗಿ ಗ್ರಾಮದಲ್ಲಿ ಕಾಮಗಾರಿ ಮಾಡದೆ ಬಿಲ್ ತೆಗೆಯಲಾಗಿದೆ ಎಂಬ ಆರೋಪದ ಬಗ್ಗೆ ನನಗೆ ಗೊತ್ತಿರಲಿಲ್ಲ. ಸೋಮವಾರ ಸ್ಥಳಕ್ಕೆ ಹೋಗಿ ಪರಿಶೀಲಿಸುತ್ತೇವೆ. ಒಂದು ವೇಳೆ ತಪ್ಪು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ.
•ಡಾ| ವಿಜಯಕುಮಾರ ಆಜೂರ,
ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ
ಉಮೇಶ ಬಳಬಟ್ಟಿ