Advertisement

17ಕ್ಕೆ 35 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ

03:59 PM Apr 13, 2021 | Team Udayavani |

ಕೊಳ್ಳೇಗಾಲ: ಹನೂರಿನಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿವಿಧ ಕಟ್ಟಡಗಳನ್ನು ಏ.17ರಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಉದ್ಘಾಟಿಸಲಿದ್ದಾರೆ ಎಂದು ಹನೂರು ಶಾಸಕ ಆರ್‌.ನರೇಂದ್ರ ತಿಳಿಸಿದರು.

Advertisement

ಪಟ್ಟಣದಲ್ಲಿ ಉದಯವಾಣಿ ಜೊತೆ ಮಾತನಾಡಿದ ಶಾಸಕರು, ಹನೂರು ಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರ 50 ಲಕ್ಷ ರೂ., ಐಟಿಐ ಕಾಲೇಜು 2 ಕೋಟಿ, ಬಿಸಿಎಂ ವಿದ್ಯಾರ್ಥಿನಿಲಯ 3.25 ಕೋಟಿ ರೂ., ಬಂಡಳ್ಳಿಯಲ್ಲಿ ಪದವಿಪೂರ್ವ ಕಾಲೇಜು 1.94 ಕೋಟಿ ರೂ., ಲಾಜರ್‌ ದೊಡ್ಡಿ ಚೆಕ್‌ಡ್ಯಾಂ 1.90 ಕೋಟಿ, ಅಜ್ಜಿಪುರದಲ್ಲಿ ವಿದ್ಯುತ್‌ ಘಟಕ 4.89 ಕೋಟಿ, ರಾಮಾಪುರ ರೈತ ಸಂಪರ್ಕ ಕೇಂದ್ರ 44 ಲಕ್ಷ, ರಾಮಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ 2.10 ಕೋಟಿ ರೂ., ನಕ್ಕುಂದಿಯಲ್ಲಿ ಆಶ್ರಮಶಾಲೆ 5.79ಕೋಟಿ ರೂ., ನಾಲ್‌ ರೋಡ್‌ ಸೇತುವೆ 4.25ಕೋಟಿ ರೂ., ಹಿರಿಯಂಬಲದಲ್ಲಿ ಆಶ್ರಮ ಶಾಲೆ1.99 ಕೋಟಿ ರೂ., ಬೈಲೂರು ಸಮೀಪ ಅರ್ಧನಾರಿಪುರಲ್ಲಿ ನಿರ್ಮಿಸಿರುವ ಆಶ್ರಮ ಶಾಲೆ 1.99ಕೋಟಿ, ಬೈಲೂರು ಮಾಧ್ಯಮಿಕ ಶಾಲೆ 78 ಲಕ್ಷ, ಒಡೆಯರ್‌ ಪಾಳ್ಯ ಟಿಬೆಟ್‌ ಕಾಲೋನಿ ರಸ್ತೆ ನಿರ್ಮಾಣ 2 ಕೋಟಿ, ಲೊಕ್ಕನಹಳ್ಳಿಯಲ್ಲಿ ವಿದ್ಯುತ್‌ ಘಟಕ ನಿರ್ಮಾಣ 4.63 ಕೋಟಿ ರೂ. ವೆಚ್ಚದ ಕಾಮಗಾರಿಗಳು ಉದ್ಘಾಟನೆಗೆ ಸಿದ್ಧಗೊಂಡಿವೆ ಎಂದು ಹೇಳಿದರು.

ಏ.17 ರಂದು ಜಿಲ್ಲಾ ಉಸ್ತುವಾರಿ ಸಚಿವರು ಸುಮಾರು 35 ಕೋಟಿ ರೂ. ಅಂದಾಜಿನಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡುವರು. ನಂತರ 2ನೇ ಹಂತದಲ್ಲಿ ಉಳಿದ 35 ಕೋಟಿ ರೂ.ಅಂದಾಜಿನಲ್ಲಿ ಸಿದ್ಧಗೊಂಡಿರುವ ಕಾಮಗಾರಿಗಳಿಗೆ ಚಾಲನೆ ನೀಡುವರು ಎಂದರು.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವಿವಿಧ ಕಾಮಗಾರಿಗಳಿಗೆ ಹಣ ಮಂಜೂರು ಮಾಡಿದ್ದ ಹಿನ್ನೆಲೆಯಲ್ಲಿ ಕಾಮಗಾರಿಗಳು ಪೂರ್ಣ ಗೊಂಡಿವೆ. ಆದರೆ, ವಿರೋಧ ಪಕ್ಷದವರು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕೆಲಸ ಆಗಿಲ್ಲ ಎಂದು ದೂರು ಹೇಳುವವರಿಗೆ ಮೇಲಿನ ಅಂಕಿ ಅಂಶ ಸಾಕ್ಷಿ ಎಂದರು.

ಜಿಪಂ ಕ್ಷೇತ್ರ ಯಥಾಸ್ಥಿತಿಗೆ ಮನವಿ: ಹನೂರು ವಿಧಾನಸಭಾಕ್ಷೇತ್ರದಲ್ಲಿ 3 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳನ್ನು ಚುನಾವಣಾಆಯೋಗ ಕ್ಷೇತ್ರ ಬದಲಾವಣೆ ಮಾಡಿದೆ. ಇದರಿಂದ ಕ್ಷೇತ್ರ ಕಳೆದುಕೊಳ್ಳುವ ಗ್ರಾಮದ ಮುಖಂಡರಿಗೆ ಬೇಸರ ತಂದಿದೆ.ಅದನ್ನು ಸರಿಪಡಿಸಲು ಗ್ರಾಮಸ್ಥರು ಚುನಾವಣಾ ಆಯೋಗಕ್ಕೆ ಪತ್ರ ಬರೆಯುವಂತೆ ಮನವಿ ಮಾಡಿದ್ದಾರೆ. ಅದರಂತೆ ಗ್ರಾಮಸ್ಥರ ಮೂಲಕ ಮನವಿ ಸಲ್ಲಿಸುವುದಾಗಿ ಶಾಸಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next