Advertisement

ಶಾಸಕರಿಂದ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

10:29 PM Jun 21, 2019 | Team Udayavani |

ಮಹಾನಗರ: ಬಂದರು (ದಕ್ಕೆ) ಮತ್ತು ಬೋಳೂರು ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಈಗಾಗಲೇ ಅನುಷ್ಠಾನಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮತ್ತು ಪ್ರಸ್ತುತ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ಅಲ್ಲದೆ, ಮುಂದಿನ ದಿನಗಳಲ್ಲಿ ನಡೆಯಲಿರುವ ಕಾಮಗಾರಿಗಳ ಬಗ್ಗೆ ಬಂದರು, ಮೀನುಗಾರಿಕಾ ಮತ್ತು ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

Advertisement

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವೇದವ್ಯಾಸ ಕಾಮತ್‌, ಬಂದರು ದಕ್ಕೆ ಮುಂಭಾಗದಲ್ಲಿ ಹೂಳೆತ್ತುವ ಕಾಮಗಾರಿಗೆ ಒಂದು ಕೋಟಿ ರೂ., ಹಳೆ ಬಂದರಿನ ಬಿಎಂಡಿ ಫೇರಿಯಿಂದ ಬೆಂಗ್ರೆ (ಕಸಬಾ) ವರೆಗೆ ಹೂಳೆತ್ತುವ ಕಾಮಗಾರಿಗೆ 99.50 ಲಕ್ಷ ರೂ., ಹಳೆ ಬಂದರಿನ ಉತ್ತರ ದಕ್ಕೆಯ ಕುಸಿದ ಭಾಗಗಳಲ್ಲಿ ಆರ್‌ ಸಿಸಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ 50 ಲಕ್ಷ ರೂ., ಬೋಳೂರು ಬೊಕ್ಕಪಟ್ಣದಲ್ಲಿ ಪ್ರಯಾಣಿಕರ ಜೆಟ್ಟಿ ನಿರ್ಮಾಣ ಕಾಮಗಾರಿಗೆ 45 ಲಕ್ಷ ರೂ., ಆವರಣ ಗೋಡೆ ಹಾಳಾದ ಭಾಗವನ್ನು ಸರಿಪಡಿಸಿ ಭದ್ರಪಡಿಸುವುದು, ಮಧ್ಯದಕ್ಕೆಯ ಗೇಟ್‌ ಅಭಿವೃದ್ಧಿ, ವೀಕ್ಷಣಾ ಗೋಪುರ ನಿರ್ಮಾಣ ಮತ್ತು ರೇಡಿಯೋ ಕಮ್ಯೂನಿಕೇಶನ್‌ ಟವರ್‌ ಕಾಮಗಾರಿಗಳಿಗೆ 1 ಕೋಟಿ 32 ಲಕ್ಷ ರೂ., ಮಂಗಳೂರು ಮೀನುಗಾರಿಕಾ ಬಂದರಿನ ಓಕ್ಷನ್‌ ಹಾಲ್‌ಗೆ ನೆಲಹಾಸನ್ನು ಒದಗಿಸುವುದು ಮತ್ತು ಮೇಲ್ಛಾವಣಿಯ ಟ್ರಸ್‌ಗಳಿಗೆ ಬಣ್ಣ ಬಳಿಯುವುದಕ್ಕೆ 10.50 ಲಕ್ಷ ರೂ., ಹಳೆ ಮೀನುಗಾರಿಕಾ ಬಂದರಿನ ಉತ್ತರ ದಕ್ಕೆಯ ಸರಪಳಿ 0.030 ಕಿ.ಮೀ. ನಿಂದ 0.150 ಕಿ.ಮೀ. ವರೆಗೆ ಕುಸಿದ ವಾರ್ಫಿನ ಆಯ್ದ ಭಾಗಗಳ ದುರಸ್ತಿಗೆ 15 ಲಕ್ಷ ರೂ., ಮಂಗಳೂರಿನ ಮೀನುಗಾರಿಕಾ ಬಂದರಿನ ಯಾಂತ್ರಿಕ ಮೀನುಗಾರರ ಸಂಘದ ದಕ್ಷಿಣ ವಾರ್ಫ್‌ ಕಾಂಕ್ರೀಟ್‌ ಕಾಮಗಾರಿಗೆ 15 ಲಕ್ಷ ರೂ. ಅನುದಾನದ ಮೂಲಕ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದರು.

ಹಂತಹಂತವಾಗಿ ಜಾರಿ
ಸ್ಥಳೀಯ ಪ್ರಮುಖರು ಇನ್ನು ಕೆಲವು ಅಭಿವೃದ್ಧಿ ಕಾಮಗಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ. ಅದನ್ನು ಕೂಡ ಹಂತಹಂತವಾಗಿ ಜಾರಿಗೆ ತರಲಾಗುವುದು ಎಂದರು. ಮೀನುಗಾರರ ಹಿರಿಯ ಮುಖಂಡ ನಿತಿನ್‌ ಕುಮಾರ್‌, ಮೊಗವೀರ ಸಭಾ ಅಧ್ಯಕ್ಷ ರಾಜಶೇಖರ್‌, ದೇವಾನಂದ ಗುರಿಕಾರ, ಮಾಜಿ ಕಾರ್ಪೊರೇಟರ್‌ಗಳಾದ ಪ್ರೇಮಾನಂದ ಶೆಟ್ಟಿ, ಮೀರಾ ಕರ್ಕೇರ, ರಘುವೀರ್‌ ಪಣಂಬೂರು, ಬಿಜೆಪಿ ಮುಖಂಡರಾದ ದೀಪಕ್‌ ಪೈ, ಜಗದೀಶ್‌ ಶೆಟ್ಟಿ, ಅನಿಲ್ಸ್‌, ಶಿವಪ್ರಸಾದ್‌, ಯೋಗೀಶ್‌ ಕಾಂಚನ್‌, ರಾಹುಲ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next