ಹಾನಗಲ್ಲ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಅಭಿವೃದ್ಧಿ ಕಾರ್ಯಗಳೇ ಮತದಾರರನ್ನು ಸೆಳೆಯುತ್ತಿದ್ದು, ಬಿಜೆಪಿ ಗೆಲುವು ಖಚಿತವಾಗಿದೆ. ಈಗಾಗಲೇ ಹುಬ್ಬಳ್ಳಿ, ಧಾರವಾಡ, ಕಲಬುರಗಿಯಲ್ಲಿ ನಡೆದ ನಗರಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಖಭಂಗ ಎದುರಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ತಿಳಿಸಿದರು.
ಮಂಗಳವಾರ ತಾಲೂಕಿನ ಹುಣಶೆಟ್ಟಿಕೊಪ್ಪ, ಮಂತಗಿ, ಚಿಕ್ಕಾಂಸಿಹೊಸುರು, ಸಮ್ಮಸಗಿ, ಶಿರಗೋಡ, ಹೀರೂರ, ಗೆಜ್ಜಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ದಿ.ಸಿ.ಎಂ.ಉದಾಸಿ ಅವರು ಶಾಸಕರಾಗಿ, ಮಂತ್ರಿಯಾಗಿ ಹಾನಗಲ್ಲ ತಾಲೂಕು ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿರುವುದನ್ನು ಅವರ ಕೆಲಸಗಳೇ ಹೇಳುತ್ತವೆ. ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದೀನ-ದಲಿತರಿಗೆ ನ್ಯಾಯ ಒದಗಿಸಿಕೊಟ್ಟ ಶ್ರೇಯಸ್ಸು ದಿ.ಸಿ.ಎಂ.ಉದಾಸಿ ಅವರಿಗೆ ಸಲ್ಲುತ್ತದೆ. ನಿರಂತರವಾಗಿ ಜನ ಸಂಪರ್ಕದಲ್ಲಿದ್ದ ಅವರು ಜನರ ಸೇವೆ ಮೂಲಕ ಎಲ್ಲರ ಪ್ರೀತಿ ಗಳಿಸಿದ್ದರು ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಬಿಜೆಪಿ ಜನರ ನಾಡಿ ಮಿಡಿತವಾಗಿದೆ. ಈಗ ಬಿಜೆಪಿ ಎಲ್ಲರ ಮನೆ ಮನೆಯ ಪಕ್ಷವಾಗಿದೆ. ಹಾನಗಲ್ಲ ತಾಲೂಕಿನಲ್ಲಿ ದಿ.ಸಿ.ಎಂ.ಉದಾಸಿ ಅವರು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನೀರಾವರಿ, ಕುಡಿಯುವ ನೀರು ರಸ್ತೆ ಸುಧಾರಣೆ ಸೇರಿದಂತೆ ಶಿಕ್ಷಣಕ್ಕೂ ಆದ್ಯತೆ ನೀಡಿ ತಾಲೂಕಿನ ಹಿತಕ್ಕೆ ಕೆಲಸ ಮಾಡಿದ್ದಾರೆ. ಈಗ ಇನ್ನುಳಿದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿಯ ಶಕ್ತಿ ಬಲಪಡಿಸಬೇಕು. ಬೆಳೆ ವಿಮೆ ವಿಷಯದಲ್ಲಿ ಇಡೀ ರಾಜ್ಯದಲ್ಲೇ ಹೆಚ್ಚು ಪರಿಹಾರ ಪಡೆದವರು ಹಾನಗಲ್ಲ ತಾಲೂಕಿನ ರೈತರು. ಇದಕ್ಕೆ ಕಾರಣವೇ ಸಿ.ಎಂ.ಉದಾಸಿ ಅವರು ಎಂದರು.
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನ ಮಾತನಾಡಿ, ಈ ಉಪಚುನಾವಣೆ ಅವಶ್ಯಕತೆ ಇರಲಿಲ್ಲ. ಸಿ.ಎಂ.ಉದಾಸಿ ಅವರ ನಿಧನ ಎಲ್ಲರಿಗೂ ನೋವಿನ ವಿಷಯ. ಆದರೆ, ಈ ಸಂದರ್ಭದಲ್ಲಿ ಉದಾಸಿ ಅವರ ಕನಸಿನ ಯೋಜನೆಗಳನ್ನು ಸಾಕಾರಗೊಳಿಸಲು ಬಿಜೆಪಿಯೇ ಗೆಲ್ಲಬೇಕು. ಅವರ ಎಲ್ಲ ಕನಸುಗಳನ್ನು ನನಸು ಮಾಡಲು ನಾನು ಬದ್ಧ. ಸಂಸದ ಶಿವಕುಮಾರ ಅವರ ಸಹಕಾರದೊಂದಿಗೆ ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ರಾಜಣ್ಣ ಪಟ್ಟಣದ, ಮಾಲತೇಶ ಘಂಟಿ, ಬಿ.ಎಸ್.ಅಕ್ಕಿವಳ್ಳಿ, ಪ್ರಶಾಂತ ಕಾಮನಹಳ್ಳಿ, ಸಿದ್ದಪ್ಪ ವರದಿ, ಜಗದೀಶ ಓಣಿಕೇರಿ, ಸಹದೇವಪ್ಪ ಕಾಳೇರ, ಬಸವಂತಪ್ಪ ಹರಿಜನ, ರಮೇಶ ತಲಗಡ್ಡಿ, ಲಕ್ಷ್ಮಣ ಬೆಲಗಲಿ, ಶಾಮನಗೌಡ ಪಾಟಿಲ, ಬಿ.ಎಸ್. ಕುಕನೂರ, ರೇಣುಕಮ್ಮ ಜೀವಕ್ಕನವರ, ಲಕ್ಷ್ಮಿ ತಳವಾರ, ನಿಂಗಪ್ಪ ಗಾಜಿಪುರ, ಕಲ್ಯಾಣಕುಮಾರ ಶೆಟ್ಟರ ಇತರರಿದ್ದರು.