ಯಾವುದೇ ಅಭಿವೃದ್ಧಿ ಕಾರ್ಯವನ್ನು ನಡೆಸುವ ಸಂದರ್ಭ ವಿವಿಧ ಇಲಾಖೆಗಳ ನಡುವೆ ಸಮನ್ವಯ ಇಲ್ಲದಿರುವುದು ಹಿಂದಿ ನಿಂದಲೂ ಕಾಣುತ್ತಿದ್ದೇವೆ. ಆದರೆ ಈಗ ತಂತ್ರಜ್ಞಾನ ಸಾಕಷ್ಟು ಮುಂದು ವರಿದಿರುವುದರಿಂದ ಸುಲಭವಾಗಿ ಪರಿಹರಿಸಿಕೊಳ್ಳಬಹುದಾದ ಪ್ರಕರಣಗಳೂ ಹಾಗೆಯೇ ಮುಂದುವರಿಯುತ್ತಿವೆ. ಇದರಿಂದ ಒಟ್ಟು ಅಭಿವೃದ್ಧಿ ಕಾರ್ಯಗಳೇ ಜನರೆದುರು ನಗೆಪಾಟಲಿಗೆ ಈಡಾಗುತ್ತಿವೆ.
ಇದು ಗ್ರಾಮ ಮಟ್ಟದಿಂದ ಹಿಡಿದು ಮಹಾನಗರದವರೆಗೂ ಮುಂದುವರಿ ಯುವುದು. ಯಾವುದೇ ಒಂದು ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮೊದಲು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧ್ಯವಾದರೆ ಹಲವಾರು ಸಮಸ್ಯೆಗಳು ಉದ್ಭವವಾಗುವುದು ತಪ್ಪಲಿದೆ. ಮಾತ್ರವಲ್ಲದೆ ಆರ್ಥಿಕ ನಷ್ಟವೂ ತಪ್ಪುವುದು.
ಸ್ಥಳೀಯ ಆಡಳಿತ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಯನ್ನು ಅಗೆದು ಕುಡಿಯುವ ನೀರಿನ ಪೈಪ್ ಲೈನ್ ಎಳೆಯುತ್ತದೆ. ಹೀಗೆ ಅಗೆತ ನಡೆಸಿದಲ್ಲಿ ಕೊರಕಲು ಬಿದ್ದಿರುತ್ತದೆ. ಗುತ್ತಿಗೆದಾರನಿಂದ ಈ ಕೊರಕಲನ್ನು ತುಂಬಿಸಿ ಯಥಾಸ್ಥಿತಿಗೆ ತರಲು ಸೂಕ್ತ ಶುಲ್ಕವನ್ನೂ ವಿಧಿಸುತ್ತದೆ. ಆದರೆ ಆ ಕೊರಕಲು ಹಾಗೇ ಉಳಿದುಕೊಂಡು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ಕಾಂಕ್ರಿಟ್ ನಡೆಸುವಾಗ ಅಥವಾ ಅದಕ್ಕಿಂತ ಮೊದಲೇ ಸ್ಥಳೀಯಾಡಳಿತಗಳು ಎಚ್ಚೆತ್ತು ಅಲ್ಲೊಂದು ಪೈಪ್ ಹಾಕಿ ಬಿಟ್ಟರೆ ರಸ್ತೆ ಅಗೆಯುವ ಸಂದರ್ಭವೇ ಇರುವುದಿಲ್ಲ.
ಇನ್ನು ಮಳೆಗಾಲ ಆರಂಭವಾದಾಗ ರಸ್ತೆ ಬದಿಯಲ್ಲೇ ವನಮಹೋತ್ಸವ ನಡೆಯುತ್ತದೆ. ಇನ್ನೇನು ಗಿಡ ನೆಟ್ಟು ಸ್ವಲ್ಪ ದೊಡ್ಡದಾಗುವಾಗ ಮರದ ಕೊಂಬೆ-ರೆಂಬೆಗಳನ್ನು ಇನ್ನೊಂದು ಇಲಾಖೆ ಕಡಿದು ಹಾಕುತ್ತದೆ. ಗಿಡ ನೆಡುವ ಅರಣ್ಯ ಇಲಾಖೆ ಖಾಲಿ ಜಾಗ ಎಲ್ಲಿದೆ ಎಂದು ನೋಡುತ್ತದೆಯೇ ವಿನಾ ತಲೆ ಮೇಲೆತ್ತಿ ಏನಿದೆ ಎಂದು ಗಮನಿಸುವುದಿಲ್ಲ!. ಅದೇ ವಿದ್ಯುತ್ ಇಲಾಖೆ ಲೈನ್ ಎಳೆಯಬೇಕೆಂದು ನೋಡುತ್ತದೆಯೇ ವಿನಾ ಕೆಳಗಡೆ ಗಿಡ ನೆಡಲಾಗಿದೆಯೇ ಎಂಬುದನ್ನು ಗಮನಿಸುವುದಿಲ್ಲ. ಇದು ನಮ್ಮಲ್ಲಿನ ಸ್ಥಿತಿ.
ಒಂದೋ ಗಿಡ ನೆಡುವಾಗ ಯಾವುದೇ ತಂತಿ ಹಾದು ಹೋಗಿಲ್ಲದ ಜಾಗ ನೋಡಿ ಗಿಡ ನೆಡಬೇಕು. ಇಲ್ಲವೇ ನೆಟ್ಟ ಮೇಲೆ ಆ ಭಾಗದಲ್ಲಿ ತಂತಿ ಎಳೆಯಕೂಡದು ಎಂಬ ನಿಯಮವನ್ನಾದರೂ ಜಾರಿಗೊಳಿಸಬೇಕು.
ಗ್ರಾಮೀಣ ಪ್ರದೇಶಗಳಲ್ಲಿ ಇವೆಲ್ಲ ಸಾಮಾನ್ಯ ಎಂಬಷ್ಟರ ಮಟ್ಟಿಗೆ ಆಗಿದೆ. ಹಳ್ಳಿ ಸಂಪರ್ಕಿಸುವ ಒಂದು ರಸ್ತೆ ಅಭಿವೃದ್ಧಿಯಾಗಲು ಅನುದಾನ ಮಂಜೂರಾದರೆ ರಸ್ತೆಗೆ ಡಾಮರು ಹಾಕಲು ಟೆಂಡರ್ ಒಬ್ಬರಿಗೆ ನೀಡಿದರೆ, ಚರಂಡಿಗೆ ಇನ್ನೊಬ್ಬರಿಗೆ, ಮೋರಿ ನಿರ್ಮಿಸಲು ಮತ್ತೂಬ್ಬರಿಗೆ. ಇಷ್ಟಕ್ಕೂ ಈ ಮೂವರಿಗೂ ಏನೆಲ್ಲ ಕೆಲಸಗಳು ನಡೆಯುತ್ತವೆ ಎಂಬುದು ಕೆಲವು ಸಂದರ್ಭಗಳಲ್ಲಿ ಗೊತ್ತೇ ಇರುವುದಿಲ್ಲ. ಡಾಮರು ಹಾಕುವುದಕ್ಕಿಂತ ಮೊದಲೇ ಚರಂಡಿ ಕೆಲಸ ಆಗುತ್ತದೆ. ಡಾಮರು ಹಾಕಿದ ಬಳಿಕ ಮೋರಿ ಕೆಲಸವಾಗುತ್ತದೆ!
ವಿದ್ಯುತ್, ಅರಣ್ಯ, ಕಂದಾಯ, ಸ್ಥಳೀಯ ಆಡಳಿತ ಇವುಗಳ ನಡುವೆ ಸಮನ್ವಯ ಇದ್ದರೆ ಇದಕ್ಕೆಲ್ಲ ಸುಲಭ ಪರಿಹಾರ ಇದೆ. ಯಾವುದೇ ಯೋಜನೆ ಜಾರಿಗೊಳ್ಳುವಾಗ ಕನಿಷ್ಠ 20-25 ವರ್ಷಗಳ ಅಭಿವೃದ್ಧಿಯ ದೃಷ್ಟಿಕೋನ ಇಟ್ಟುಕೊಂಡು ಆ ಸಂದರ್ಭಕ್ಕೆ ಬೇಕಾಗುವ ಮಾದರಿಯಲ್ಲಿ ಕಾಮಗಾರಿ ನಡೆಸಿದರೆ ಎಲ್ಲರಿಗೂ ಅನುಕೂಲ. ಇನ್ನಾದರೂ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಾಗಲಿ ಎಂಬುದೇ ಎಲ್ಲರ ಆಶಯ.
-ಸಂ.