ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಪ್ರಪ್ರಥಮವಾಗಿ ಕೋರಮಂಗಲ ಕಣಿವೆ (ಕೆ-100) ರಾಜಕಾಲುವೆಯ “ನಾಗರೀಕರ ಜಲಮಾರ್ಗ’ ಕಾಮಗಾರಿಯೂ ಆಮೆ ವೇಗದಲ್ಲಿ ಸಾಗುತ್ತಿದೆ.
ಕಾಮಗಾರಿ ಪ್ರಾರಂಭಗೊಂಡು 11 ತಿಂಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ, ಸುಮಾರು 2 ವರ್ಷಗಳು ಕಳೆದರೂ ಶೇ.80ರಷ್ಟು ಕಾಮಗಾರಿ ನಡೆದಿದ್ದು, ಉಳಿದ ಶೇ.20ರಷ್ಟು ಕಾಮಗಾರಿಯನ್ನು ಮುಂದಿನ ಐದಾರು ತಿಂಗಳುಗಳಲ್ಲಿ ಪೂರ್ಣ ಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿಕೊಂಡಿದೆ.
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಎದುರು ಇದ್ದ ರಾಜಕಾಲುವೆ ಸ್ಥಳವು ಒಳಚರಂಡಿ ತ್ಯಾಜ್ಯ ಸೇರಿದಂತೆ ಅಲ್ಲಿನ ಸುತ್ತಮುತ್ತಲಿನ ಸಾರ್ವಜನಿಕರು ಮನೆಯಲ್ಲಿನ ತ್ಯಾಜ್ಯವನ್ನೂ ಆ ಪ್ರದೇಶದಲ್ಲಿ ಎಸೆಯುತ್ತಿದ್ದರು. ಇದರಿಂದಾಗಿ ಆ ಪ್ರದೇಶದ ಸುತ್ತಲೂ ದುರ್ವಾಸನೆಯಿಂದ ಜನರು ಮೂಗಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿತ್ತು. ಜತೆಗೆ ಮಳೆ ಸಂದರ್ಭದಲ್ಲಿ ಮಳೆ ನೀರಿನೊಂದಿಗೆ ಕೊಚ್ಚೆ ನೀರು ಸುತ್ತಮುತ್ತಲಿನ ಪ್ರದೇಶದಲ್ಲಿ ಹರಿಯುತ್ತಿತ್ತು. ಇದನ್ನು ತಪ್ಪಿಸಲು ಮಹಾನಗರ ಪಾಲಿಕೆಯೂ ರಾಜಕಾಲುವೆಗಳ ಪುನಶ್ಚೇತನ ಯೋಜನೆಯಡಿ ಈ ನಾಗರೀಕರ ಜಲಮಾರ್ಗ ಯೋಜನೆಯನ್ನು ಕೈಗೊಂಡಿದೆ.
ರಾಜಕಾಲುವೆಗಳಿಂದ ತ್ಯಾಜ್ಯ ನೀರನ್ನು ಹೊರತುಪಡಿಸಿ, ಈ ಸ್ಥಳಗಳನ್ನು ಸಾರ್ವಜನಿಕ ಆಕರ್ಷಣೀಯ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸುವುದು ಇದರ ಮುಖ್ಯ ಉದ್ದೇಶ. ಕೆ.ಆರ್. ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ ಅಭಿವೃದ್ಧಿ ಪಡಿಸಲಾಗಿದ್ದು, ಶಾಂತಿನಗರದ ಟಿಟಿಎಂಪಿ ಮುಂಭಾಗ “ನಾಗರೀಕರ ಜಲಮಾರ್ಗ’ ಪ್ಲಾಜಾವನ್ನು ನಿರ್ಮಿಸಲಾಗಿದ್ದು, ಈ ದೆಸೆಯಲ್ಲಿ ಕೋರಮಂಗಲ ಕಣಿವೆಯ 32 ಚ.ಕಿ.ಮೀ. ಜಲಾಯನ ಪ್ರದೇಶವನ್ನು ಸುಮಾರು 9.6 ಕಿ.ಮೀ.ಉದ್ದಕ್ಕೆ 195 ಕೋಟಿ ರೂ.ವೆಚ್ಚ ದಲ್ಲಿ ನಿರ್ಮಿಸಲು ಕೈಗೊಂಡಿದ್ದು, 2020ರ ಡಿ.31ರಂದು ಈ ಯೋಜನೆಗೆ ಸರ್ಕಾರವು 169 ಕೋಟಿ ರೂ.ಗಳ ಅನುಮೋದನೆ ನೀಡಿದ್ದು, 2021ರ ಮಾ.25ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಮಗಾರಿಗೆ ಚಾಲನೆ ನೀಡಿದ್ದರು.
2021ರ ಮೇ 6ರಿಂದ ಕಾಮಗಾರಿ ಪ್ರಾರಂಭವಾಗಿದ್ದು,11 ತಿಂಗಳೊಳಗೆ ಕಾಮಗಾರಿ ಸಂಪೂ ರ್ಣಗೊಳಿಸಲು ಗಡುವು ನೀಡಿತ್ತು. ಆದರೆ, ನಾಲ್ಕು ತಿಂಗಳ ಮಳೆಗಾಲ, ಹೂಳು ತೆಗೆಯು ವುದು, ಅಕಾಲಿಕ ಮಳೆ ಹಾಗೂ ಒಳಚರಂಡಿ ತ್ಯಾಜ್ಯ ಹರಿಯಲು ಅನ್ಯ ವ್ಯವಸ್ಥೆ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಕಾಮಗಾರಿಯೂ ನಿಧಾನಗತಿ ಯಲ್ಲಿ ಸಾಗುತ್ತಿದ್ದು, ಮುಂದಿನ ಐದಾರು ತಿಂಗಳಲ್ಲಿ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ತಿಳಿಸಿದರು.
ಕೋರಮಂಗಲ ಕಣಿವೆ ಬಳಿ ಸುಂದರ ಪ್ಲಾಜಾ : ಈ ಕೋರಮಂಗಲ ಕಣಿವೆ (ಕೆ-100) ಬಳಿ ಸುಂದರವಾದ ಪ್ಲಾಜಾವನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಕಲ್ಲಿನ ಬೆಂಚ್‌ಗಳು, ಸುತ್ತಲೂ ಆಕರ್ಷಕವಾದ ಹೂವಿನ ಗಿಡ-ಮರಗಳು, ಸೆಲ್ಫೀ ಪಾಯಿಂಟ್, ಕೆ.ಎಚ್.ರಸ್ತೆಯಿಂದ ಈಜೀಪುರವರೆಗೆ ವಾಯುವಿಹಾರ ಮಾಡಲು ಕಣಿವೆಯ ಎರಡೂ ಬದಿಯಲ್ಲಿ ಸುಮಾರು 7.5 ಕಿ.ಮೀ. ಉದ್ದದ ಪಾದಚಾರಿ ಮಾರ್ಗ, ಸುಮಾರು 480ರಿಂದ 500 ಬೀದಿ ದೀಪಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ನೆಲದ ಮಟ್ಟ ತುಂಬಿ ಕೊಂಡಿದ್ದ ಹೂಳನ್ನು ತೆಗೆಯುವು ದಕ್ಕೆ ಬಹಳ ಸಮಯ ಹಿಡಿಯಿತು. ಬಳಿಕ ಮಳೆಗಾಲ ಪ್ರಾರಂಭ ಮತ್ತು ಒಳಚರಂಡಿ ಹರಿಯಲು ಅನ್ಯ ಮಾರ್ಗ ಕಲ್ಪಿಸುವುದು. ಹೀಗೆ ಹಲವು ಕಾರಣಗಳಿಂದಾಗಿ ನಾಗರಿಕರ ಜಲಮಾರ್ಗ ಯೋಜನೆಯ ಕಾಮಗಾರಿಯೂ ತಡವಾಗಿದೆ. ಇನ್ನೂ ಐದಾರು ತಿಂಗಳುಗಳಲ್ಲಿ ಈ ಕಾಮಗಾರಿ ಪೂರ್ಣವಾಗಿ, ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.
-ಬಿ.ಎಸ್. ಪ್ರಹ್ಲಾದ್, ಬಿಬಿಎಂಪಿ ಮುಖ್ಯ ಎಂಜಿನಿಯರ್
-ಭಾರತಿ ಸಜ್ಜನ್