ಶಿವಮೊಗ್ಗ: ಸಂಸದರಾಗಿ ಒಂದು ವರ್ಷ ಪೂರೈಸಿದ ಬಿ.ವೈ. ರಾಘವೇಂದ್ರ ಅವರಿಗೆ ಹಲವು ಮುಖಂಡರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಈ ಹಿಂದೆ ಒಂದು ಅವಧಿಯಲ್ಲಿ ಸಂಸದರಾಗಿದ್ದ ಬಿ.ವೈ. ರಾಘವೇಂದ್ರ ಅವರು ನಂತರ ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದರು. ತದನಂತರ ತಮ್ಮ ತಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಾಸಕ ಸ್ಥಾನ ತೆರವು ಮಾಡಿಕೊಟ್ಟು ಮತ್ತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲವು ಸಾಧಿಸಿದ್ದರು.
ಈ ಅವಧಿಯಲ್ಲಿ ಬಿ.ವೈ. ರಾಘವೇಂದ್ರ ಅವರು ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಬಹುಮುಖ್ಯವಾಗಿ ಈ ಅವಧಿಯಲ್ಲಿ ಶಿವಮೊಗ್ಗಕ್ಕೆ ಹಲವು ಹೊಸ ರೈಲುಗಳು ಸಿಕ್ಕಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನೊಂದಿಗೆ ಸಿಗಂದೂರು ಸೇತುವೆ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಕೇಂದ್ರ ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ಜಿಲ್ಲೆಯಲ್ಲಿ ಚಾಲನೆ ಸಿಕ್ಕಿದೆ.
ಜೋಗ ಜಲಪಾತ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವಿನಿಂದ ಹಲವು ಯೋಜನೆಯನ್ನು ರೂಪಿಸಿರುವ ಬಿ.ವೈ. ರಾಘವೇಂದ್ರ ಅವರು ಈ ಸಂಬಂಧ ಹಲವು ಸರಣಿ ಸಭೆಗಳನ್ನು ರೂಪಿಸಿದ್ದರು. ಮಂಕಿ ಪಾರ್ಕ್ ಸ್ಥಾಪಿಸಬೇಕೆಂಬ ದಿಸೆಯಲ್ಲಿ ಸ್ಥಳ ಸಮೀಕ್ಷೆಗೆ ಒತ್ತು ನೀಡಿದರು. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ನನೆಗುದಿಗೆ ಬಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನ ತರುವಲ್ಲಿ ಯಶಸ್ವಿಯಾದರು. ಈಗ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಲಿದೆ. ಹೀಗೆ ಜಿಲ್ಲೆಯ ಅಭಿವೃದ್ಧಿಯ ಹಲವು ಯೋಜನೆಗಳಿಗೆ ಈ ಒಂದು ವರ್ಷದ ಅವಧಿಯಲ್ಲಿ ಚಾಲನೆ ಸಿಕ್ಕಿವೆ. ಸೋಮವಾರ ಬೆಳಗಿನಿಂದ ಶಿವಮೊಗ್ಗದ ಅವರ ನಿವಾಸದಲ್ಲಿ ರಾಘವೇಂದ್ರ ಅವರ ಅಭಿಮಾನಿಗಳು, ಬಂಧುಗಳು, ಪಕ್ಷದ ಪ್ರಮುಖರು ಶುಭ ಹಾರೈಸಿದರು.
ಹಳೇ ಜೈಲು ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಶಿವಮೊಗ್ಗ: ನಗರದ ಹಳೇ ಜೈಲಿನ ಆವರಣಕ್ಕೆ ಭೇಟಿ ನೀಡಿದ ಸಂಸದ ಬಿ.ವೈ. ರಾಘವೇಂದ್ರ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಕಾರಾಗೃಹವನ್ನು ಸೋಗಾನೆ ಬಳಿಯ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದ್ದು, ಇಲ್ಲಿನ ಜೈಲು ಜಾಗವನ್ನು ಬೆಂಗಳೂರಿನ ಫ್ರಿಡಂ ಪಾರ್ಕ್ ಮಾದರಿಯಲ್ಲಿ
ಸಾರ್ವಜನಿಕ ಉದ್ದೇಶಕ್ಕೆಂದು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ. ಜೈಲು ಜಾಗದ ಅಭಿವೃದ್ಧಿ ಕಾಮಗಾರಿ ನೀಲಿ ನಕ್ಷೆಯೊಂದಿಗೆ ಬೆಂಗಳೂರಿನಿಂದ ಅಧಿಕಾರಿಗಳು ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ, ಎಸ್.ಎಸ್. ಜ್ಯೋತಿಪ್ರಕಾಶ್, ಎಸ್. ದತ್ತಾತ್ರಿ ಮತ್ತಿತರರು ಇದ್ದರು.