Advertisement
ಒಟ್ಟು 23 ಸದಸ್ಯರನ್ನೊಳಗೊಂಡ ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2011ರ ಗಣತಿ ಪ್ರಕಾರ 8,968 ಜನಸಂಖ್ಯೆ ಹೊಂದಿತ್ತು. ಗ್ರಾಮದಲ್ಲಿ ಕೃಷಿ ಪ್ರಧಾನವಾಗಿದ್ದರೂ ಪಟ್ಟಣಕ್ಕೆ ತಾಗಿಕೊಂಡಿರುವುದರಿಂದ ಹೆಚ್ಚಿನ ಗ್ರಾಮಸ್ಥರು ಉದ್ಯೋಗ ಅರಸಿ ಸುತ್ತಮುತ್ತಲಿನ ಕೈಗಾರಿಕೆಗಳಿಗೆ ಹೋಗುತ್ತಿದ್ದಾರೆ. ಹೆಚ್ಚಿನ ಪ್ರದೇಶ ಪಿಲಿಕುಳ ನಿಸರ್ಗಧಾಮಕ್ಕೆ ಸೇರಿರುವುದರಿಂದ ಸೀಮಿತ ಜನಸಂಖ್ಯೆ ಇರುವ ಗ್ರಾಮದಲ್ಲಿ 2022ರ ಅಂಕಿ ಅಂಶಗಳ ಪ್ರಕಾರ 2,000 ಕುಟುಂಬಗಳಿದ್ದು, 504 ಭೂರಹಿತರು ವಸತಿಗಾಗಿ ಮನವಿ ಸಲ್ಲಿಸಿದ್ದಾರೆ.
Related Articles
Advertisement
ಗ್ರಾಮ ಪಂಚಾಯತ್‌ಗೆ ಹೆಚ್ಚಿನ ಆದಾಯ ಮೂಲವಿಲ್ಲ. ನೀರಿನ ವ್ಯವಸ್ಥೆ ಸುಧಾರಣೆಗೊಳ್ಳುತ್ತಿದ್ದು, ಅಗತ್ಯ ಬಿದ್ದಾಗ ಟ್ಯಾಂಕರ್ ಮೂಲಕ ಪಂಚಾಯತ್ ಗ್ರಾಮಸ್ಥರಿಗೆ ನೀರು ಪೂರೈಸುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ 60 ಲಕ್ಷ ರೂ.ಅನುದಾನ ಲಭಿಸಿದ್ದು, ಎರಡು ಟ್ಯಾಂಕ್ ನಿರ್ಮಾಣ ಹಂತದಲ್ಲಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸೌಲಭ್ಯವೂ ಇದೆ. ಮನೆ ಮನೆಯ ನೀರಿನ ಬಿಲ್ ಸಂಗ್ರಹ ಜವಾಬ್ದಾರಿಯನ್ನು ಸಂಜೀವಿನಿ ಒಕ್ಕೂಟ ಮಹಿಳಾ ತಂಡಕ್ಕೆ ನೀಡಿ ಮಹಿಳಾ ಸಶಕ್ತೀಕರಣಕ್ಕೆ ಒತ್ತು ನೀಡಲಾಗಿದೆ.
ಸ್ವಚ್ಛತೆಗೆ ಆದ್ಯತೆ ನೀಡಿದ ಗ್ರಾಮ
ಇಲ್ಲಿನ ಗ್ರಾಮ ಪಂಚಾಯತ್ ವತಿಯಿಂದ ಈಗ ತಾತ್ಕಾಲಿಕವಾಗಿ ತ್ಯಾಜ್ಯ ಸಂಸ್ಕರಣ ಘಟಕ ಕಾರ್ಯನಿರ್ವಹಿಸುತ್ತಿದೆ. ಗ್ರಾಮದ ಮನೆ ಮನೆಯಿಂದ ತ್ಯಾಜ್ಯವನ್ನು ತಂದು ಇಲ್ಲಿ ಹಸಿ ಮತ್ತು ಒಣ ಕಸವನ್ನು ವಿಂಗಡಿಸಲಾಗುತ್ತದೆ. ಹಸಿ ಕಸದಿಂದ ಗೊಬ್ಬರ ತಯಾರಿ ಮಾಡಲಾಗುತ್ತಿದ್ದು, ಈ ಪ್ರಯೋಗ ಯಶಸ್ವಿಯಾಗಿದೆ. ಮಾತ್ರವಲ್ಲ ಸುತ್ತಮುತ್ತ ಈ ಘಟಕದಿಂದ ಯಾವುದೇ ದುರ್ವಾಸನೆಯೂ ಹರಡುತ್ತಿಲ್ಲ. ಹೀಗಾಗಿ ಪಂಚಾಯತ್ ವ್ಯಾಪ್ತಿಗಳಲ್ಲಿ ಇಂತಹ ಘಟಕಗಳಿಗೆ ಒಲವು ಹೆಚ್ಚಾಗಿದೆ.
ಪ್ಲಾಸ್ಟಿಕ್ ಬಾಟಲಿ, ಚೀಲ ಮತ್ತಿತರ ವಸ್ತುಗಳನ್ನು ಬೇರ್ಪಡಿಸಿ ಗುಜರಿಗೆ ನೀಡುವುದರಿಂದ ಸ್ವಚ್ಛತೆ ಸಣ್ಣ ಪ್ರಮಾಣದ ಆದಾಯಕ್ಕೂ ಜತೆಯಾಗಿದೆ. ಕಸ ಸಂಗ್ರಹಕ್ಕೆ ಒಂದು ಟೆಂಪೋವನ್ನು ಪಂಚಾಯತ್ ಹೊಂದಿದೆ. ಈ ಘಟಕದಲ್ಲಿ ಐದು ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಮೂಲಸೌಕರ್ಯಕ್ಕೆ ಆದ್ಯತೆ.
ನಗರಕ್ಕೆ ಸಮೀಪವಿರುವುದರಿಂದ ನಿರಂತರ ಬಸ್‌ಗಳ ಓಡಾಟವಿದೆ. ಒಂದು ಕೋಟಿ ರೂ. ವೆಚ್ಚದಲ್ಲಿ ಎರಡು ಸೇತುವೆಯನ್ನು ವಿಸ್ತರಿಸಿ ಕಟ್ಟಲಾಗಿದ್ದು, ದೊಡ್ಡ ವಾಹನಗಳು ಸಲೀಸಾಗಿ ಸಂಚರಿಸುತ್ತದೆ. ಒಂದು ನರ್ಮ್ ಬಸ್ ಗ್ರಾಮದಲ್ಲಿ ಸಂಚರಿಸುತ್ತದೆ. ಮುಖ್ಯ ರಸ್ತೆಯ ಜತೆ ಕಾಲನಿ ರಸ್ತೆಗಳು ವಿಸ್ತಾರವಾಗಿದೆ. ಉಳಿದಂತೆ ಒಳ ರಸ್ತೆಗಳಿಗೆ ಬಹುತೇಕ ಕಾಂಕ್ರಿಟ್ ಮಾಡಲಾಗಿದ್ದರೂ ಇನ್ನೂ ಹಲವೆಡೆ ಬಾಕಿ ಇದೆ. ಬೋಂದೆಲ್ ಪಡುಶೆಡ್ಡೆ, ಮೂಡು ಶೆಡ್ಡೆ ರಸ್ತೆಯು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿರುವುದರಿಂದ ದೊಡ್ಡ ಆರ್ಥಿಕ ನೆರವು ಬೇಕಿದೆ. ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಮೂಡುಶೆಡ್ಡೆ ಹೊಸಮಾರು ಬಳಿ ಒಂದು ಎಕರೆ ಜಾಗ ಗೊತ್ತು ಪಡಿಸಲಾಗಿದೆ. ಮಾಲಿನ್ಯದ ಭೀತಿ ಇರುವುದರಿಂದ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾದರಿ ಯಾಗಿ ನಾವು ಘಟಕ ನಿರ್ಮಿಸಿ ತೋರಿಸಿ ದ್ದೇವೆ ಎನ್ನುತ್ತಾರೆ ಉಪಾಧ್ಯಕ್ಷ ಅನಿಲ್ ಕುಮಾರ್.
ಹುಲಿಗಳ ಗುಹೆಯಿರುವ ಪಿಲಿಕುಳ!
ಮೂಡುಶೆಡ್ಡೆ ಗ್ರಾಮದಲ್ಲಿ ಈ ಹಿಂದೆ ಹುಲಿಗಳ ವಾಸಸ್ಥಾನವಿದ್ದು, ಇಲ್ಲಿರುವ ಕೆರೆಗಳ ಹತ್ತಿರ ನೀರು ಕುಡಿಯಲು ಬರುತ್ತಿದ್ದವು. ಅಲ್ಲದೇ ಇವುಗಳ ಗುಹೆಯಿತ್ತು ಎಂಬುದನ್ನು ಹಿರಿಯ ತಲೆಮಾರಿನ ಜನರು ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಇಲ್ಲಿಗೆ ಪಿಲಿಕುಳ ಎಂಬ ಹೆಸರು ಬಂದಿದ್ದು, ಈಗ ಪಿಲಿಕುಳ ಧಾಮ ಜಗತ್ ಪ್ರಸಿದ್ಧವಾಗಿದೆ. 1,400ಕ್ಕೂ ಆಧಿಕ ಪ್ರಾಣಿ ಪ್ರಬೇಧ ಹಾಗೂ ಸಸ್ಯ ಪ್ರಬೇಧವಿದೆ.
ಕಸ ನಿರ್ವಹಣೆಯಲ್ಲಿ ಮಾದರಿ ಪಂಚಾಯತ್: ಕಸ ನಿರ್ವಹಣೆಯಲ್ಲಿ ಮಾದರಿ ಹೆಜ್ಜೆ ಇರಿಸಿದ್ದು, ಸಂಸ್ಕರಣ ಘಟಕ ಯಶಸ್ವಿಯಾಗಿ ನಡೆಯುತ್ತಿದೆ. ತ್ಯಾಜ್ಯ ಸಂಗ್ರಹಕ್ಕೆ ಗ್ರಾಮದ ಜನತೆಗೆ ಪಂಚಾಯತ್‌ನಿಂದ ಬಕೆಟ್ ಹಾಗೂ ಕೈ ಚೀಲ ನೀಡಿದ್ದೇವೆ. ಸ್ವತ್ಛತೆಯ ಜಾಗೃತಿ, ಡಿಜಿಟಲ್ ಲೈಬ್ರೆರಿಯಿದ್ದು, ಪಂಚಾಯತ್ ಸ್ವಂತ ಕಟ್ಟಡ ಹೊಂದಿ ಕಾರ್ಯ ನಿರ್ವಹಿಸುತ್ತಿದೆ. – ಜಯಶ್ರೀ, ಅಧ್ಯಕ್ಷರು, ಮೂಡುಶೆಡ್ಡೆ ಗ್ರಾ. ಪಂ.
ಸಿಗಬೇಕಿದೆ ಹಲವು ಸೌಲಭ್ಯ: ಮೂಡುಶೆಡ್ಡೆ ಭಾಗದಲ್ಲಿ ಅಗಲ ಕಿರಿದಾದ ರಸ್ತೆಗಳಿದ್ದು, ಇದನ್ನು ವಿಸ್ತರಣೆ ಮಾಡಬೇಕು. ಬಡವರ್ಗದ ಅನೇಕರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು, ಇವರಿಗೆ ಸ್ವಂತ ಸೂರು ಒದಗಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಬೋಂದೆಲ್ ಮೂಡುಶೆಡ್ಡೆ ನಡುವೆ ರಸ್ತೆ ವಿಸ್ತರಣೆ, ಬಸ್ಸಿನ ವ್ಯವಸ್ಥೆ ಆಗಬೇಕಿದೆ. ಬೀದಿ ದೀಪ ಸೌಲಭ್ಯವನ್ನೂ ಒದಗಿಸಬೇಕಿದೆ. ನೀರು ತಕ್ಕಮಟ್ಟಿಗೆ ಬರುತ್ತಿದ್ದರೂ, ಕನಿಷ್ಠ ಮೂರ್‍ನಾಲ್ಕು ಗಂಟೆ ಒದಗಿಸುವ ವ್ಯವಸ್ಥೆಯಾಗಬೇಕು. –ಕವಿತಾ, ಸ್ಥಳೀಯರು
-ಲಕ್ಷ್ಮೀ ನಾರಾಯಣ ರಾವ್