Advertisement

ನಡಹಳ್ಳಿಯಲ್ಲೀಗ ಅಭಿವೃದ್ಧಿ ಪರ್ವ

06:59 PM Apr 01, 2021 | Nagendra Trasi |

ಮುದ್ದೇಬಿಹಾಳ: ದಶಕಗಳ ಕಾಲ ನಿರ್ಲಕ್ಷಕ್ಕೊಳಗಾಗಿ ಅಭಿವೃದ್ಧಿಯಿಂದ ವಂಚಿತವಾಗಿದ್ದ ಸೋಗಲಿದಂಡಿಯ ಹಾಳು ಮಣ್ಣಿನ ಕುಗ್ರಾಮ, ಶಾಸಕ ಹಾಗೂ ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ಅವರ ಸ್ವಗ್ರಾಮ ಮುದ್ದೇಬಿಹಾಳ ತಾಲೂಕಿನ ನಡಹಳ್ಳಿಯಲ್ಲೀಗ ಅಭಿವೃದ್ಧಿ ಪರ್ವ ಶುರುವಾಗಿದೆ. ದಶಕಗಳ ಹಿಂದೆ ಹೂವಿನಹಿಪ್ಪರಗಿ ಮತಕ್ಷೇತ್ರದಲ್ಲಿದ್ದ ನಡಹಳ್ಳಿ 13 ವರ್ಷಗಳ ಹಿಂದೆ ವಿಧಾನಸಭಾ ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸೇರ್ಪಡೆಯಾಗಿದೆ. ಹೂವಿನಹಿಪ್ಪರಗಿ ಕ್ಷೇತ್ರದಲ್ಲಿದ್ದಾಗ ಸಣ್ಣಪುಟ್ಟ ಕೆಲಸಗಳು ನಡೆದರೂ ಹೇಳಿಕೊಳ್ಳುವಂಥ ಬದಲಾವಣೆ, ಸುಧಾರಣೆ ಆಗಿರಲಿಲ್ಲ.

Advertisement

ಮುದ್ದೇಬಿಹಾಳಕ್ಕೆ ಸೇರ್ಪಡೆಗೊಂಡ ಹೊಸದರಲ್ಲೂ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ನಿರ್ಲಕ್ಷéಕ್ಕೊಳಗಾಗಿತ್ತು. 12 ವರ್ಷಗಳ ಹಿಂದೆ ನಡಹಳ್ಳಿ
ಅವರು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ಮೇಲೆ ಅಭಿವೃದ್ಧಿಗೆ ಯತ್ನಿಸಿದರಾದರೂ ಅಭಿವೃದ್ಧಿ ಹಿನ್ನಡೆ ಉಂಟಾಗಿತ್ತು. ನಡಹಳ್ಳಿ ತಾಳಿಕೋಟೆ ತಾಲೂಕಿಗೆ ಸೇರ್ಪಡೆಯಾಗಿರುವ ಬಾವೂರ ಗ್ರಾಪಂನಲ್ಲಿತ್ತು. ಸದ್ಯ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ಗ್ರಾಪಂಗೆ ಸೇರ್ಪಡೆಯಾಗಿದೆ. 2018ರಲ್ಲಿ ಎ.ಎಸ್‌.ಪಾಟೀಲ ನಡಹಳ್ಳಿ ಅವರು ಮುದ್ದೇಬಿಹಾಳ ಶಾಸಕರಾದ ನಂತರ ಒಂದೂವರೆ ವರ್ಷಗಳಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದೆ.

ವಿವಿಧ ಇಲಾಖೆಗಳಲ್ಲಿ ಲಭ್ಯವಿದ್ದ ಅಂದಾಜು 3-4 ಕೋಟಿ ರೂ. ಅನುದಾನ ನಡಹಳ್ಳಿಗೆ ತಂದು ಸಮಗ್ರ ಸುಧಾರಣೆಗೆ ಕಾರಣೀಭೂತರಾಗಿದ್ದಾರೆ.ನಡಹಳ್ಳಿ
ಅಭಿವೃದ್ಧಿಗೆ ಊರಿನ ಮಗ ಪಾಟೀಲರೇ ಶಾಸಕರಾಗಿ ಬರಬೇಕಾಯಿತೆನ್ನುವ ಮಾತುಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿವೆ.

ಏನೇನು ಅಭಿವೃದ್ಧಿ: ಸಮಾಜ ಕಲ್ಯಾಣ, ಪಿಡಬ್ಲೂಡಿ,  ಕೆಬಿಜೆಎನ್ನೆಲ್‌ ಇಲಾಖೆಗಳ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯ ವಿಶೇಷ ಅನುದಾನ ಬಳಸಿ ವನಹಳ್ಳಿಯಿಂದ ನಡಹಳ್ಳಿವರೆಗೆ ಡಾಂಬರ್‌ ಸಂಪರ್ಕ ರಸ್ತೆ ಆಗಿದೆ. ಹಿಂದಿನ ಜನಪ್ರತಿನಿಧಿಗಳ ಅವಧಿಯಲ್ಲಿ ಸೋಗಲಿ ಹಳ್ಳಕ್ಕೆ ಸುಗಮ ಸಂಚಾರಕ್ಕಾಗಿ ಕಟ್ಟಿದ್ದ ಸೇತುವೆ ಹೆಚ್ಚು ಬಲಪಡಿಸಲಾಗಿದೆ. ಊರೊಳಗಿನ 800-1000 ಮೀ.ವರೆಗಿನ ಹಾಳು ಮಣ್ಣಿನ ತಗ್ಗುದಿನ್ನೆಗಳಿಂದ ಕೂಡಿದ್ದ ರಸ್ತೆಗಳನ್ನೆಲ್ಲ ಕನಿಷ್ಟ ಕಾಂಕ್ರೀಟ್‌ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಊರಿನ ಕೊಳಚೆ ಹೊರಗೆ ಸಾಗಿಸಲು ಚರಂಡಿ ನಿರ್ಮಿಸಲಾಗಿದೆ.

ಗ್ರಾಪಂ ವತಿಯಿಂದ ಪ್ರತಿ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಿ ಸ್ಥಳೀಯವಾಗಿ ಲಭ್ಯವಿರುವ ಮೂಲಗಳಿಂದ ಶುದ್ಧ ಕುಡಿವ ನೀರು ಒದಗಿಸಲಾಗುತ್ತಿದೆ. ಪ್ರತಿ
ಏರಿಯಾದಲ್ಲೂ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಊರಲ್ಲಿದ್ದ ಹಳೆ ಶಾಲೆಯ ಕಟ್ಟಡಗಳನ್ನು ತೆರವುಗೊಳಿಸಿ ಅಂದಾಜು 60 ಲಕ್ಷ ರೂ. ವೆಚ್ಚದಲ್ಲಿ ಹೊಸ ಕೊಠಡಿ
ನಿರ್ಮಿಸಲು ಚಾಲನೆ ನೀಡಲಾಗಿದೆ.

Advertisement

ಜನರ ನೆಮ್ಮದಿ ಜೀವನಕ್ಕೆ ಸಂಕಲ್ಪ ತೊಟ್ಟಿರುವ ಶಾಸಕರು ತಮ್ಮ ಸ್ವಗ್ರಾಮದ ಬಗೆಗಿನ ಕಾಳಜಿ ಕಾರ್ಯರೂಪಕ್ಕಿಳಿಸಿದ್ದಾರೆ. ಇದೊಂದು ಮಾದರಿ
ಗ್ರಾಮವಾಗುವತ್ತ ಹೆಜ್ಜೆ ಇಟ್ಟಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯಗಳು ದೊರಕುವ ನಿರೀಕ್ಷೆ ಜನತೆಯದ್ದಾಗಿದೆ.

ನನ್ನೂರು ನಡಹಳ್ಳಿ ತೀರಾ ಹಿಂದುಳಿದಿತ್ತು. ನನ್ನೂರು ಅಭಿವೃದ್ಧಿ ಮಾಡಬೇಕೆನ್ನುವ ಹಂಬಲವಿತ್ತು. ಆದರೆ ಅವಕಾಶ ಸಿಕ್ಕಿರಲಿಲ್ಲ. ಶಾಸಕನಾದ ಮೇಲೆ ನನ್ನೂರನ್ನು ಅಭಿವೃದ್ಧಿ ಪಡಿಸುವ ಸದವಕಾಶ ಸಿಕ್ಕಿದೆ. ನನ್ನೂರನ್ನು ಮಾದರಿ ಗ್ರಾಮವಾಗಿಸಲು ಸಂಕಲ್ಪ ತೊಟ್ಟಿದ್ದೇನೆ. ಗ್ರಾಮಸ್ಥರ ಬೇಡಿಕೆಯಂತೆ ಕೊಳಚೆ ನೀರು ಹಳ್ಳಕ್ಕೆ ಹರಿಸಲು ಯೋಜನೆ ರೂಪಿಸುತ್ತೇನೆ.
ಎ.ಎಸ್‌. ಪಾಟೀಲ ನಡಹಳ್ಳಿ,
ಶಾಸಕರು, ಮುದ್ದೇಬಿಹಾಳ

ಹಾಳುಕೊಂಪೆಯಂತಿದ್ದ ನಮ್ಮೂರು 40-50 ವರ್ಷಗಳ ನಂತರ ಅಭಿವೃದ್ಧಿ ಕಂಡಿದೆ. ಹಿಂದಿನ ಜನಪ್ರತಿನಿ ಧಿಗಳಿಂದ ನಿರೀಕ್ಷಿತ ಅಭಿವೃದ್ಧಿ ಮಾಡಲಿಲ್ಲ. ಈ ಊರಿನ ಮಗ ಎ.ಎಸ್‌. ಪಾಟೀಲರು ಶಾಸಕರಾದ ಮೇಲೆ ನಮ್ಮೂರಿನ ಚಿತ್ರಣವನ್ನೇ ಬದಲಿಸಿದ್ದಾರೆ. ಶಾಸಕರಿಗೆ ನಾವು ಋಣಿಯಾಗಿದ್ದೇವೆ.
ಹಣಮಂತ್ರಾಯ ಗುರಡ್ಡಿ,
ಗ್ರಾಮದ ಹಿರಿಯರು

ನಮ್ಮ ಗ್ರಾಪಂಗೆ ಹೊಸದಾಗಿ ಸೇರ್ಪಡೆಗೊಂಡಿರುವ ನಡಹಳ್ಳಿ ಶಾಸಕರ ಕಾಳಜಿಯಿಂದ ಅಭಿವೃದ್ಧಿಯಾಗಿದೆ. ಮೂಲ ಸೌಕರ್ಯ ಒದಗಿಸಲಾಗಿದೆ. ಎಲ್ಲರಿಗೂ ನಲ್ಲಿ ನೀರು ಕೊಡುತ್ತಿದ್ದೇವೆ. ಗ್ರಾಪಂನಿಂದ ಲಭ್ಯವಿರುವ ಅನುದಾನ ಬಳಸುತ್ತಿದ್ದೇವೆ. ಏನೇ ಸಮಸ್ಯೆ ಕಂಡು ಬಂದರೂ ತಕ್ಷಣ ಬಗೆಹರಿಸುತ್ತೇವೆ.
ಸುಜಾತಾ ಯಡ್ರಾಮಿ,
ಪಿಡಿಒ, ಮಡಿಕೇಶ್ವರ ಗ್ರಾಪಂ

*ಡಿ.ಬಿ.ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next