Advertisement

ಕೃಷಿಕನ ಬಾಳು ಹಸನಾದರೆ ದೇಶಾಭಿವೃದ್ಧಿ ಸಾಧ್ಯ

10:50 PM Aug 26, 2019 | Team Udayavani |

ಕಡಬ: ನಮ್ಮ ದೇಶ ಕೃಷಿ ಪ್ರಧಾನವಾದ ದೇಶ. ದೇಶದ ಬೆನ್ನೆಲುಬಾಗಿರುವ ಕೃಷಿಕನ ಬಾಳು ಹಸನಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಡಬ ಜಿ.ಪಂ. ಕ್ಷೇತ್ರದ ಸದಸ್ಯ ಪಿ.ಪಿ. ವರ್ಗೀಸ್‌ ಅಭಿಪ್ರಾಯಪಟ್ಟರು.
ಅವರು ದ.ಕ. ಜಿ.ಪಂ. ಹಾಗೂ ಕೃಷಿ ಇಲಾಖೆಯ ಆಶ್ರಯದಲ್ಲಿ ಆಯೋಜಿ ಸಲಾಗಿರುವ ಕಡಬ ಹೋಬಳಿ ಸಮಗ್ರ ಕೃಷಿ ಅಭಿಯಾನ ಕಾರ್ಯ ಕ್ರಮವನ್ನು ಕಡಬದ ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಉದ್ಘಾಟನೆ ಮಾಡಿ ಮಾತನಾಡಿದರು.

Advertisement

ಯುವ ಸಮುದಾಯ ಆಸಕ್ತಿ ವಹಿಸಲಿ
ಸರಕಾರಗಳು ಕೃಷಿಗೆ ಸಾಕಷ್ಟು ಒತ್ತು ನೀಡುವ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ ಧಾರಣೆ ಕುಸಿತ, ಪ್ರಾಕೃತಿಕ ವಿಕೋಪಗಳಿಂದ ಕೃಷಿ ಹಾನಿ, ಕಾರ್ಮಿಕರ ಸಮಸ್ಯೆ ಮುಂತಾದ ಕಾರಣಗಳಿಂದಾಗಿ ಕೃಷಿಕರಿಗೆ ಸಂಕಷ್ಟ ತಪ್ಪಿಲ್ಲ. ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಉಪಯೋಗಿಸಿ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ವ್ಯವಸ್ಥಿತ ಕೃಷಿ ಮಾಡಿದಾಗ ಕೃಷಿಕರು ಉತ್ತಮ ಫಲಸನ್ನು ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಧ್ಯ. ಯುವ ಸಮುದಾಯ ಹೆಚ್ಚಿನ ಆಸಕ್ತಿ ವಹಿಸಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.

ಕೃಷಿಕರ ಬಳಿಗೆ ಇಲಾಖೆ
ತಾಲೂಕು ಪಂಚಾಯತ್‌ ಸದಸ್ಯ ಫಝಲ್‌ ಕೋಡಿಂಬಾಳ ಮಾತನಾಡಿ, ಸರಕಾರವು ಕೃಷಿ ಇಲಾಖೆಯ ಮೂಲಕ ಗ್ರಾಮಗಳಿಗೆ ತೆರಳಿ ಕೃಷಿಕರ ಬಳಿಗೆ ಬರುತ್ತಿದೆ. ಈ ಅವಕಾಶಗಳನ್ನು ನಾವು ಸಮರ್ಪಕವಾಗಿ ಬಳಸಿಕೊಂಡು ಕೃಷಿಯ ಬಗೆಗಿನ ಹೊಸ ಹೊಸ ಸಂಶೋಧನೆಗಳ ಪ್ರಯೋಜನ ಪಡೆದು ಲಾಭದಾಯ ಕೃಷಿ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದರು.

ತಾ.ಪಂ. ಸದಸ್ಯ ಗಣೇಶ್‌ ಕೈಕುರೆ ಮಣ್ಣು ಪರೀಕ್ಷೆಯ ಕಾರ್ಡ್‌ಗಳನ್ನು ವಿತರಿಸಿ ಶುಭಹಾರೈಸಿದರು. ಎಪಿಎಂಸಿ ನಿರ್ದೇಶಕ ಕೊರಗಪ್ಪ ಅವರು ಸರಕಾರದ ಸಬ್ಸಿಡಿಯ ಕೃಷಿ ಯಂತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.

ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ ಅಧ್ಯಕ್ಷತೆ ವಹಿಸಿದ್ದರು. ಕಡಬ ಗ್ರಾ.ಪಂ. ಸದಸ್ಯರಾದ ಕೆ.ಎಂ. ಹನೀಫ್‌ ಹಾಗೂ ಅಶ್ರಫ್‌ ಶೇಡಿಗುಂಡಿ ಶುಭ ಹಾರೈಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ರಶ್ಮಿ, ತೋಟಗಾರಿಕ ಇಲಾಖೆಯ ಉಪ ನಿರ್ದೇಶಕಿ ರೇಖಾ, ಗ್ರಾ.ಪಂ. ಉಪಾಧ್ಯಕ್ಷೆ ಜ್ಯೋತಿ ಡಿ. ಕೋಲ್ಪೆ, ಸದಸ್ಯರಾದ ರೇವತಿ, ಶಾಲಿನಿ ಸತೀಶ್‌, ನೀಲಾವತಿ ಶಿವರಾಂ, ಮಾಧವ ಕೊಪ್ಪ, ಆದಂ ಕುಂಡೋಳಿ, ಸುಶೀಲಾ, ಇಂದಿರಾ ಕೃಷ್ಣಪ್ಪ, ಸರೋಜಿನಿ ಆಚಾರ್ಯ, ನೇತ್ರಾ, ಎ.ಎಸ್‌. ಶರೀಫ್‌ ಉಪಸ್ಥಿತರಿದ್ದರು.

Advertisement

ತಾಂತ್ರಿಕ ಕೃಷಿ ಅಧಿಕಾರಿ ಪದ್ಮನಾಭ ಶೆಟ್ಟಿ ಸ್ವಾಗತಿಸಿ, ಸಹಾಯಕ ಕೃಷಿ ನಿರ್ದೇಶಕ ರಂಜನ್‌ ಶೆಣೈ ಪ್ರಸ್ತಾವನೆ ಗೈದರು. ರಾಕೇಶ್‌ ರೈ ಕೆಡೆಂಜಿ ನಿರೂಪಿಸಿ, ಕಡಬ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ವಂದಿಸಿ ದರು. ಬಳಿಕ ಕೃಷಿಕರೊಂದಿಗೆ ಸಂವಾದ ಜರಗಿತು. ಡಾ| ರಶ್ಮಿ, ತೋಟಗಾರಿಕ ಇಲಾಖೆಯ ಉಪನಿರ್ದೇಶಕಿ ರೇಖಾ, ಪಶು ಸಂಗೋಪನ ಇಲಾಖೆಯ ಡಾ| ಅಜಿತ್‌, ಕೃಷಿ ಅಧಿಕಾರಿ ಯಶಸ್‌ ಮಂಜುನಾಥ್‌ ಮಾಹಿತಿ ನೀಡಿದರು.

ರೈತರಿಗೆ ಗುರುತಿನ ಚೀಟಿ
ಪುತ್ತೂರು ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಡಾ| ಶಿವಶಂಕರ್‌ ದಾನೆಗೊಂಡರ್‌ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿ ಕೃಷಿಕರ ಆರ್ಥಿಕ ಸ್ಥಿತಿ ಸುಧಾರಿಸಬೇಕೆನ್ನುವುದು ಸರಕಾರದ ಗುರಿ. ಕೃಷಿ ಭೂಮಿಯ ಮಣ್ಣು ಪರೀಕ್ಷೆ, ಪ್ರೋತ್ಸಾಹ ಧನಗಳು, ವೈಜ್ಞಾನಿಕ ನೆರವು, ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನೀಡುತ್ತಿದ್ದು, ಕೃಷಿಕರು ಅವುಗಳ ಸದುಪಯೋಗ ಪಡೆಯಬೇಕು. ಸರಕಾರದ ಸವಲತ್ತುಗಳಿಗಾಗಿ ಕೃಷಿಕರು ಪದೇ ಪದೇ ದಾಖಲೆಗಳನ್ನು ಕೃಷಿ ಕಚೇರಿಗಳಿಗೆ ಸಲ್ಲಿಸುವುದನ್ನು ತಪ್ಪಿಸುವ ಸಲುವಾಗಿ ಸರಕಾರವು ರೈತರಿಗೆ ಗುರುತಿನ ಚೀಟಿಗಳನ್ನು ನೀಡುವ ಉದ್ದೇಶ ಇರಿಸಿಕೊಂಡಿದ್ದು, ಅದಕ್ಕಾಗಿ ಮಾಹಿತಿಗಳನ್ನು ದಾಖಲಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next