Advertisement

ದೇಗುಲ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ: ಪೇಜಾವರ ಶ್ರೀ

07:30 AM Mar 25, 2018 | Team Udayavani |

ಮೂಲ್ಕಿ: ದೇಶದ ಅಭಿವೃದ್ಧಿಗೆ ಪೂರಕವಾದ ಎಲ್ಲ ಚಿಂತನೆಗಳು ದೇವಸ್ಥಾನಗಳ ಬೆಳವಣಿಗೆಯಿಂದ ಹುಟ್ಟಿಕೊಳ್ಳುತ್ತವೆ. ಬಪ್ಪನಾಡು ದೇವಸ್ಥಾನವು ಭಾರತೀಯ ಸಂಸ್ಕೃತಿ ಮತ್ತು ಸಾಮರಸ್ಯದ ಬದುಕಿನ ಭದ್ರ ಕೋಟೆಯಂತೆ ಬೆಳೆದು ಜೀವಂತ ಉದಾಹರಣೆಯಾಗಿದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

Advertisement

ಅವರು ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಾರಂಭದ ಕೊನೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಭಕ್ತಿಯಿಂದ ಇರುವ ಪ್ರತಿಯೊಬ್ಬನೂ ದೇವರಿಗೆ ಸಮಾನ ಎಂಬಂತೆ ಮುಸ್ಲಿಂ ವ್ಯಾಪಾರಿ ಬಪ್ಪ ಬ್ಯಾರಿಗೆ ಒಲಿದ ಇಲ್ಲಿಯ ಶ್ರೀ ದುರ್ಗೆ ಸರ್ವಕಷ್ಟಗಳ ನಿವಾರಿಣಿಯಾಗಿ ಸದಾ ಅಭಯವನ್ನು ನೀಡುವ ಮಹಾಮಾತೆಯಾಗಿದ್ದಾಳೆ. ಈಕೆಯ ಆರಾಧನೆಯಿಂದ ನಮ್ಮಲ್ಲಿ ಇರುವ ದುಷ್ಟ ಗುಣಗಳು ನಶಿಸಿ ಹೋಗುವುದಲ್ಲದೆ ಜನ್ಮ ಸಾರ್ಥಕ್ಯ ಸಾಧ್ಯ ಎಂದು ಶ್ರೀಗಳು ನುಡಿದರು.

ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ದೇವಸ್ಥಾನಗಳು ಧಾರ್ಮಿಕ ವ್ಯವಸ್ಥೆಯ ಶಕ್ತಿ ಕೇಂದ್ರಗಳಾಗಿವೆ. ಈ ವ್ಯವಸ್ಥೆಯ ಮೂಲಕ ಜ್ಞಾನದ ಬೆಳಕು ಚೆಲ್ಲುವ ಶಿಕ್ಷಣ ಸಂಸ್ಥೆಗಳು ನಡೆದಾಗ ಸಂಸ್ಕಾರಯುತವಾದ ಯುವ ಪೀಳಿಗೆ ಬೆಳೆದು ಬರುವುದು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಅಭಯಚಂದ್ರ ಜೈನ್‌ ಮಾತನಾಡಿ, ದೇವಾಲಯ ಅಭಿವೃದ್ಧಿಗೊಂಡಾಗ ಅಲ್ಲಿಯ ಪರಿಸರದ ಎಲ್ಲ ವ್ಯವಸ್ಥೆಗಳು ತಾನಾಗಿಯೇ ಬದಲಾವಣೆಯಾಗುತ್ತವೆ. ಈ ಮೂಲಕ ಇಡಿಯ ಸಮಾಜ ಬೆಳೆಯಲು ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭಾರತ್‌ ಬೀಡೀಸ್‌ನ ಆಡಳಿತ ನಿರ್ದೇಶಕ ಅನಂತ ಪೈ, ಎಂಆರ್‌ಪಿಎಲ್‌ನ ಹಿರಿಯ ಅಧಿಕಾರಿ ಲಕ್ಷ್ಮೀ ಕುಮಾರನ್‌, ಉದ್ಯಮಿಗಳಾದ ಕುಸುಮಾಧರ ಶೆಟ್ಟಿ, ವೇದಪ್ರಕಾಶ್‌ ಶ್ರೀಯಾನ್‌, ನರಸಿಂಹನ್‌ ಎ. ಬಪ್ಪನಾಡು, ಯುಪಿಸಿಎಲ್‌ನ ಅದಾನಿಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಮಾತನಾಡಿದರು.

Advertisement

ದೇಗುಲದ ತಂತ್ರಿಗಳಾದ ಗೋಪಾಲಕೃಷ್ಣ ತಂತ್ರಿ, ಆಡಳಿತ ಮೊಕ್ತೇಸರ ಎನ್‌.ಎಸ್‌. ಮನೋಹರ ಶೆಟ್ಟಿ, ಆನುವಂಶಿಕ ಮೊಕ್ತೇಸರ ಹಾಗೂ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಪ್ಪನಾಡು ನಾರಾಯಣ ಶೆಟ್ಟಿ, ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ್‌ ಶೆಟ್ಟಿ, ಸಮಿತಿಯ ಕೋಶಾಧಿಕಾರಿ ಹಾಗೂ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಪಿ., ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ, ಹರಿಶ್ಚಂದ್ರ ವಿ. ಕೋಟ್ಯಾನ್‌, ಯದುನಾರಾಯಣ ಶೆಟ್ಟಿ ಮಾತನಾಡಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಿಲ್‌ ಆಳ್ವ ಸ್ವಾಗತಿಸಿದರು. ಸಂತೋಷ್‌ ಕುಮಾರ್‌ ಹೆಗ್ಡೆ ಪ್ರಸ್ತಾವನೆಗೈದರು. ಸಾಯಿನಾಥ ಶೆಟ್ಟಿ ಮುಂಡ್ಕೂರು ಮತ್ತು ನವೀನ್‌ ಶೆಟ್ಟಿ ಎಡೆಮಾರ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next