Advertisement

547 ಕೋಟಿ ವೆಚ್ಚದಲ್ಲಿ ಆರು ವೃತ್ತಗಳ ಅಭಿವೃದ್ಧಿ

04:23 PM Jun 16, 2017 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಅಡಿ ಸುಗಮ ಸಂಚಾರ, ವೃತ್ತಗಳ ಅಭಿವೃದ್ಧಿ ಹಾಗೂ ವಾಹನ ನಿಲುಗಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಒಟ್ಟು 1,662ಕೋಟಿ ರೂ.ಗಳಲ್ಲಿ ಸುಮಾರು 547ಕೋಟಿ ರೂ.ಗಳನ್ನು ಇದಕ್ಕಾಗಿ ವೆಚ್ಚ ಮಾಡಲಾಗುತ್ತಿದೆ. 

Advertisement

ಸ್ಮಾರ್ಟ್‌ ಸಿಟಿಯಲ್ಲಿ ಕೇಂದ್ರ-ರಾಜ್ಯ ಸರಕಾರಗಳ ಅನುದಾನ, ಪಾಲಿಕೆಯ ವಂತಿಗೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಹಣ ಸೇರಿದಂತೆ ಒಟ್ಟಾರೆ 1,662 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, ಇದನ್ನು ನಾಲ್ಕು ವಿಭಾಗಗಳಲ್ಲಿ ಹಂಚಿಕೆ ಮಾಡಲಾಗಿದೆ.

ಇದರಲ್ಲಿ ಪ್ರಮುಖ ಆರು ವೃತ್ತಗಳ ಅಭಿವೃದ್ಧಿ, ವೈಫೈ ಕಾರಿಡಾರ್‌ಗೆ ಹೆಚ್ಚಿನ ಹಣ ವಿನಿಯೋಗಿಸಲಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಐದು ವರ್ಷಗಳಲ್ಲಿ ಬಳಕೆಯಾಗುವ 1,662ಕೋಟಿ ರೂ.ಗಳಲ್ಲಿ ಸ್ಥಳೀಯ ಪ್ರದೇಶ ಅಭಿವೃದ್ಧಿ ಶೀರ್ಷಿಕೆ ಅಡಿಯಲ್ಲಿ 547ಕೋಟಿ ರೂ. ವೆಚ್ಚವಾದರೆ, ಮೂಲಸೌಕರ್ಯ ಯೋಜನೆ ಅಡಿಯಲ್ಲಿ 480.47 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. 

ಆರ್ಥಿಕ ಅಭಿವೃದ್ಧಿ ಯೋಜನೆಯಡಿ 286.37ಕೋಟಿ ರೂ., ಮಾಹಿತಿ ತಂತ್ರಜ್ಞಾನ ಯೋಜನೆಯಡಿ 245 ಕೋಟಿ ರೂ., ಹಾಗೂ ಸಾರ್ವಜನಿಕ ವಾಸದ ಪ್ರದೇಶಗಳಲ್ಲಿ ಲಭ್ಯವಿರುವ ಜಾಗದ ಅಭಿವೃದ್ಧಿಗೆ 104ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ.

ಆರು ವೃತ್ತಗಳ ಅಭಿವೃದ್ಧಿ: ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಸುಮಾರು 547 ಕೋಟಿ ರೂ.ವೆಚ್ಚದಲ್ಲಿ ಸಾರಿಗೆ ಸಂಚಾರ, ವೈ-ಫೈ ಕಾರಿಡಾರ್‌, ಪಾದಚಾರಿ ಮಾರ್ಗ, ಪ್ರಮುಖ ವೃತ್ತಗಳ ಅಭಿವೃದ್ಧಿ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣವರೆಗೆ ಸಿಗ್ನಲ್‌ ಮುಕ್ತ ರಸ್ತೆಯನ್ನಾಗಿಸುವ ಯೋಜನೆ ಹೊಂದಲಾಗಿದೆ.

Advertisement

ಈ ಮಾರ್ಗದಲ್ಲಿನ  ಪ್ರಮುಖ ಆರು ವೃತ್ತಗಳನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಗೋಕುಲ ರಸ್ತೆಯ ಓಯಸಿಸ್‌ ಮಾಲ್‌ ಬಳಿಯ ವೃತ್ತ, ಸಣ್ಣ-ಮಧ್ಯಮ ಉದ್ಯಮಗಳ ಇಲಾಖೆಗಳ ಕಚೇರಿ ವೃತ್ತ, ಹೊಸೂರು ಬೈಪಾಸ್‌ ವೃತ್ತ, ಹೊಸೂರು ವೃತ್ತ, ಚನ್ನಮ್ಮ ವೃತ್ತ, ಸ್ಟೇಶನ್‌ ಜಂಕ್ಷನ್‌ಗಳನ್ನು ಸ್ಮಾರ್ಟ್‌ ವೃತ್ತಗಳನ್ನಾಗಿಸಲಾಗುತ್ತದೆ.

ವೃತ್ತಗಳಲ್ಲಿ ಅತ್ಯಾಧುನಿಕ ಕ್ಯಾಮೆರಾಗಳು, ಮುಕ್ತ ಎಡ ಸಂಚಾರಕ್ಕೆ ಅಗತ್ಯ ಸ್ಥಳಾವಕಾಶ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಸ್ಮಾರ್ಟ್‌ ಸಂಪರ್ಕ ಜಾಲ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ರಸ್ತೆಯ ಎರಡು ಬದಿಯಲ್ಲಿ ತಲಾ 3 ಮೀಟರ್‌ನಷ್ಟು ಪಾದಚಾರಿ ಮಾರ್ಗ, ವಾಹನ ನಿಲುಗಡೆಗೆ ಒಂದು ಬದಿ 2.5ಮೀಟರ್‌ನಷ್ಟು ಸ್ಥಳವಕಾಶ, ಇನ್ನೊಂದು ಬದಿಗೆ 2.5ಮೀಟರ್‌ನಷ್ಟು ಬಹುಪಯೋಗಿ ಜಾಗ ಇದ್ದರೆ, ವಾಹನ ಸಂಚಾರಕ್ಕೆ 7ಮೀಟರ್‌ ರಸ್ತೆ ಇರಲಿದೆ. 

ಸುಮಾರು 480.47ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿರುವ ಮೂಲಸೌಕರ್ಯ ಯೋಜನೆಗಳ ಅಡಿಯಲ್ಲಿ ಕುಡಿಯುವ ನೀರು, ಶೌಚಾಲಯ, ತೆರೆದ ಚರಂಡಿ, ಮಳೆ ನೀರು ಕೊಯ್ಲು, ಸಾರ್ವಜನಿಕ ಶೌಚಾಲಯ ಮತ್ತು ಕೊಳಚೆಗೇರಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ.

ಆರ್ಥಿಕಾಭಿವೃದ್ಧಿ ಯೋಜನೆಯಲ್ಲಿ ಸುಮಾರು 286.37ಕೋಟಿ ರೂ.ವೆಚ್ಚದಲ್ಲಿ ಅವಳಿ ನಗರದಲ್ಲಿನ ಮಾರುಕಟ್ಟೆಗಳ ಅಭಿವೃದ್ಧಿ, ಕೈಗಾರಿಕಾ ವಸಾಹತು ಮೇಲ್ದರ್ಜೆಗೆ, ಕೌಶಲಾಭಿವೃದ್ಧಿ ಕೇಂದ್ರಗಳ ಸ್ಥಾಪನೆ, ಸಣ್ಣ ಪ್ರಮಾಣದ ಉದ್ಯೋಗ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. 

ಮಾಹಿತಿ-ತಂತ್ರಜ್ಞಾನ ಯೋಜನೆಯಡಿ ಸುಮಾರು 245 ಕೋಟಿ ರೂ.ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಇ-ಆಡಳಿತದಡಿ ವಿವಿಧ ನಾಗರಿಕ ಸೇವೆಗಳು ಇತ್ಯಾದಿ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ಸಾರ್ವಜನಿಕ ವಾಸದ ಪ್ರದೇಶಗಳಲ್ಲಿ ಲಭ್ಯವಿರುವ ಜಾಗ ಅಭಿವೃದ್ಧಿ ಯೋಜನೆಯಡಿ ಸುಮಾರು 104ಕೋಟಿ ರೂ.ವೆಚ್ಚದಲ್ಲಿ ವಿವಿಧ ರಸ್ತೆಗಳಲ್ಲಿ ಸೈಕಲ್‌ ಸವಾರರಿಗೆ ರಸ್ತೆ ನಿರ್ಮಾಣ, 

-ಉದ್ಯಾನವನ, ಖಾಲಿ ಜಾಗಗಳಲ್ಲಿ ಹಸಿರು ಪರಿಸರ ನಿರ್ಮಾಣದಂತಹ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ಅಂತರ್ಜಾಲ, ನಾಗರಿಕ ಅಂತರ್ಜಾಲ, ವೈ-ಫೈ ವಲಯಗಳನ್ನು ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ಭಾರತೀಯ ದೂರ ಸಂಚಾರ ನಿಗಮ(ಬಿಎಸ್‌ಎನ್‌ಎಲ್‌)ದಿಂದ ಸಮೀಕ್ಷಣಾ ವರದಿ ತಯಾರುಗೊಂಡಿದ್ದು, ಮಾಸಾಂತ್ಯಕ್ಕೆ ಈ ಕುರಿತ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಗೊಳ್ಳಲಿದೆ. 

ತೋಳನಕೆರೆ ಅಭಿವೃದ್ಧಿ: ಸ್ಮಾರ್ಟ್‌ಸಿಟಿ ಯೋಜನೆ ಅಡಿ ತೋಳನಕೆರೆಯನ್ನು ಅಭಿವೃದ್ಧಿ ಪಡಿಸುವ ಯೋಜನೆ ಹೊಂದಲಾಗಿದೆ. ತೋಳನ ಕೆರೆಯ ಹೂಳೆತ್ತಿ ಸ್ವತ್ಛಗೊಳಿಸಿ ಅದನ್ನು ಸಾರ್ವಜನಿಕ ತಾಣವಾಗಿಸುವುದರ ಜತೆಗೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬಳಸಬಹುದಾದ ವಿವಿಧ ಮನರಂಜನೆ ಸೌಲಭ್ಯ ನೀಡಿಕೆ, ಕೆರೆಯಲ್ಲಿ ಬೋಟಿಂಗ್‌ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗಿದೆ. 

ಸಾರಿಗೆ ಸಂಚಾರ ಸುಧಾರಣೆ ನಿಟ್ಟಿನಲ್ಲಿ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಳ ಉದ್ದೇಶ ಹೊಂದಿರುವ ಅಂದಾಜು 692ಕೋಟಿ ರೂ. ವೆಚ್ಚದ ಬಿಆರ್‌ಟಿಎಸ್‌ ಯೋಜನೆ ಕಾಮಗಾರಿ ಶೇ. 50ರಷ್ಟು ಪೂರ್ಣಗೊಂಡಿದ್ದು, ನವೆಂಬರ್‌ ವೇಳೆಗೆ ಬಸ್‌ ಸೇವೆ ಆರಂಭವಾಗುವ ನಿರೀಕ್ಷೆ ಇದೆ.

ಅದೇ ರೀತಿ ಅವಳಿನಗರದ ಎಲ್ಲ 67 ವಾರ್ಡ್‌ಗಳಿಗೆ 24/7 ನೀರು ನೀಡಿಕೆ ನಿಟ್ಟಿನಲ್ಲಿ ಮೊದಲ ಹಂತದ 229.20ಕಿ.ಮೀ. ನೀರು ಪೂರೈಕೆ ಮಾರ್ಗದಲ್ಲಿ 220.9 ಕಿ.ಮೀ.ಕೆಲಸ ಮುಕ್ತಾಯಗೊಂಡಿದ್ದು, 8.3ಕಿ.ಮೀ.ಕಾಮಗಾರಿ  ಆಗಬೇಕಿದ್ದು, ಇದರಿಂದ ಒಟ್ಟು 6,700 ನೀರು ಪೂರೈಕೆ ಸಂಪರ್ಕ ಒದಗಿಸಲಾಗುತ್ತಿದೆ. 

ಎರಡನೇ ಹಂತದಲ್ಲಿ 255.70 ಕಿ.ಮೀ.ವಿತರಣೆ ಮಾರ್ಗದಲ್ಲಿ 255.7ಕಿ.ಮೀ. ಕಾಮಗಾರಿ ಮುಕ್ತಾಯಗೊಂಡಿದ್ದು, 11.ಕಿ.ಮೀ. ಮಾರ್ಗ ಪ್ರಗತಿಯಲ್ಲಿದೆ. ಇದರಿಂದ ಸುಮಾರು 10,500 ನೀರಿನ ಸಂಪರ್ಕಗಳನ್ನು ಕಲ್ಪಿಸಲಾಗುತ್ತದೆ. ಅಮೃತ ಯೋಜನೆ ಅಡಿಯಲ್ಲಿ ಒಟ್ಟು 187.11ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ.

ಮನೆ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ನೀಡುವ ಗೇಲ್‌ ಇಂಡಿಯಾ ಸಂಸ್ಥೆಯ ಯೋಜನೆ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಮುಂದಿನ ದಿನಗಳಲ್ಲಿ ಮೈದಳೆಯಲಿದ್ದು, ಸ್ಮಾರ್ಟ್‌ ಸಿಟಿ ಪರಿಕಲ್ಪನೆ ಹೆಚ್ಚಿನ ಚಿತ್ರಣ ಮಾತ್ರ ಪ್ರದೇಶಾಭಿವೃದ್ಧಿಯ ಸುಮಾರು 992ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಕಂಗೊಳಿಸಲಿದೆ. 

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next